ಹೊಸದಿಲ್ಲಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ವಿರುದ್ಧದ ಪ್ರಕರಣ ರದ್ದು ಪಡಿಸಿದ್ದ ಹೈಕೋರ್ಟ ಆದೇಶಕ್ಕೆ ಸುಪ್ರೀಮ ಕೋರ್ಟ ತಡೆಯಾಜ್ಞೆ ನೀಡಿದೆ.
2018ರಲ್ಲಿ ಈಗಲ್ ಟನ್ ರೆಸಾರ್ಟ್ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಡಿ.ಕೆ.ಶಿವಕುಮಾರ ಅವರಿಂದ ಕೆಲ ದಾಖಲೆಗಳನ್ನು ವಶಕ್ಕೆ ಪಡೆದಿದ್ದರು. ಈಗಲ್ ಟನ್ ರೆಸಾರ್ಟ್ ನಲ್ಲಿ ಡಿಕೆಶಿ ಇದ್ದ ಕೊಣೆಯಲ್ಲಿ ಕೆಲ ಹಣಕಾಸು ವರ್ಗಾವಣೆಗೆ ಸಂಬಂಧಿಸಿದ ದಾಖಲೆಗಳನ್ನು ಐಟಿ ಅಧಿಕಾರಿಗಳು ಜಪ್ತಿ ಮಾಡಿದ್ದರು. ಐಟಿ ಇಲಾಖೆ ಅಧಿಕಾರಿಗಳ ತನಿಖೆ ತಡೆಕೋರಿ ಡಿ.ಕೆ.ಶಿವಕುಮಾರ ಅವರು ಹೈಕೋರ್ಟ ಮೊರೆ ಹೋಗಿದ್ದರು.
ವಿಚಾರಣೆ ನಡೆಸಿದ್ದ ಹೈಕೋರ್ಟ್ ಡಿ.ಕೆ.ಶಿವಕುಮಾರ್ ವಿರುದ್ಧದ ಐಟಿ ತನಿಖೆಗೆ ತಡೆ ನೀಡಿ ಆದೇಶ ಹೊರಡಿಸಿತ್ತು. ಬಳಿಕ ಐಟಿ ಅಧಿಕಾರಿಗಳು ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.
ಇದೀಗ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಮ ಕೋರ್ಟ ನ್ಯಾ. ಸಂಜೀವ ಖನ್ನಾ ನೇತೃತ್ವದ ದ್ವಿಸದಸ್ಯಪೀಠ ಹೈಕೋರ್ಟ ಆದೇಶಕ್ಕೆ ತಡೆ ನೀಡಿ ಡಿ.ಕೆ. ಶಿವಕುಮಾರ ಅವರಿಗೆ ನೋಟೀಸ್ ಜಾರಿ ಮಾಡಿದೆ.