ಬೆಳಗಾವಿ, 12- ರೈಲಿನಲ್ಲಿ ಅಪರಿಚಿತ ಪ್ರಯಾಣಿಕರು ನೀಡಿದ್ದ ತಿಂಡಿ ತಿಂದು ಸೋಮವಾರ ಪ್ರಜ್ಞೆ ಕಳೆದುಕೊಂಡಿದ್ದ ಮಧ್ಯಪ್ರದೇಶ ಮೂಲದ ಎಂಟು ಪ್ರಯಾಣಿಕರು ಸುಮಾರು 27 ತಾಸಿನ ನಂತರ ಮಂಗಳವಾರ ಅಲ್ಪ ಪ್ರಮಾಣದ ಪ್ರಜ್ಞೆ ಪಡೆದುಕೊಂಡಿದ್ದಾರೆ.
ಗೋವಾದಿಂದ ದೆಹಲಿಗೆ ತೆರಳುತ್ತಿದ್ದ ವಾಸ್ಕೋ – ನಿಜಾಮುದ್ದೀನ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಧ್ಯಪ್ರದೇಶದ ಎಂಟು ಪ್ರಯಾಣಿಕರಲ್ಲಿ ಆರು ಜನ ತೀವ್ರ ಬೇಷುದ್ದಾವಸ್ಥೆಯಿಂದ ಹೊರಗೆ ಬಂದಿರಲಿಲ್ಲ. ಅವರಿಗೆ ಸೋಮವಾರ ರಾತ್ರಿ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಉಪಚಾರಕ್ಕೆ ಖಾಸಗಿ ಆಸ್ಪತ್ರೆಯಲ್ಲಿ ಸೇರಿಸಲಾಗಿತ್ತು.
ಸೋಮವಾರ ಮಧ್ಯಾಹ್ನ 3 ಗಂಟೆಗೆ ರೈಲಿನಲ್ಲಿ ಅಪರಿಚಿತ ಪ್ರಯಾಣಿಕರು ನೀಡಿದ ಒಣ ತಿಂಡಿ ಸೇವಿಸಿದ ನಂತರ ಪಜ್ಞೆ ಕಳೆದುಕೊಂಡ ಎಂಟು ಜನರಲ್ಲಿ ಇಬ್ಬರು ಮಂಗಳವಾರ ಮುಂಜಾನೆ ಪುನಃ ಪ್ರಜ್ಞೆ ಪಡೆದಿದ್ದರು. ಇತರ ಆರು ಜನ ಮಂಗಳವಾರ ಸಂಜೆ ಸ್ವಲ್ಪ ಚೇತರಿಸಿಕೊಂಡಿದ್ದರಾದರೂ ಇನ್ನೂ ಪೂರ್ಣ ಪ್ರಜ್ಞೆ ಪಡೆದಿರಲಿಲ್ಲ. ಅವರು ನೀಡಿರುವ ಮಾಹಿತಿ ಪ್ರಕಾರ ತಮ್ಮೊಂದಿಗೆ ವಾಸ್ಕೊದಲ್ಲಿ ರೈಲು ಹತ್ತಿದ ಕೆಲ ಅಪರಿಚಿತ ಪ್ರಯಾಣಿಕರು ತಮ್ಮೊಂದಿಗೆ ಆತ್ಮೀಯವಾಗಿ ವರ್ತಿಸಿ ತಮಗೆ ಚಾಕಲೇಟ್ ಮತ್ತು ಚಿಪ್ಸ ಮುಂತಾದ ಕುರುಕಲು ತಿಂಡಿ ನೀಡಿದ್ದರು. ಅದನ್ನು ಸೇವಿಸಿದ ನಂತರ ಏನಾಯಿತೋ ಗೊತ್ತಿಲ್ಲವೆಂದು ಮಾಹಿತಿ ನೀಡಿರುವುದಾಗಿ ಬೆಳಗಾವಿ ರೈಲ್ವೆ ಪೊಲೀಸ್ ಇನ್ಸಪೆಕ್ಟರ್ ವೆಂಕಟೇಶ ಸಮದರ್ಶಿಗೆ ತಿಳಿಸಿದರು.
ತಿಂಡಿ ಸೇವಿಸಿ ಸೋಮವಾರ ಮಧ್ಯಾಹ್ನ 3 ಗಂಟೆಯಿಂದ ಪ್ರಜ್ಞೆ ಕಳೆದುಕೊಂಡಿದ್ದ ಎಂಟು ಜನರಲ್ಲಿ ಇಬ್ಬರು ಮಂಗಳವಾರ ಮುಂಜಾನೆ ಪ್ರಜ್ಞೆ ಪುನಃ ಪಡೆದರು, ಉಳಿದವರು ಸಂಜೆ 6 ಗಂಟೆ ಸುಮಾರಿಗೆ ಅಲ್ಪ ಪ್ರಮಾಣದಲ್ಲಿ ಪ್ರಜ್ಞೆ ಪಡೆದಿದ್ದು ಬುಧವಾರ ಸಂಪೂರ್ಣ ಗುಣವಾಗುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದರು.
ಗೋವಾದಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದ ಈ ಎಂಟೂ ಜನ ರಜೆಯ ಮೇಲೆ ಮಧ್ಯ ಪ್ರದೇಶದಲ್ಲಿರುವ ಖಂಡ್ವಾಗೆ ಪ್ರಯಾಣಿಸಲು ವಾಸ್ಕೋ- ನಿಜಾಮುದ್ದೀನ ರೈಲಿನಲ್ಲಿ ವಾಸ್ಕೋದಿಂದ ಮಧ್ಯಾಹ್ನ 3 ಗಂಟೆಗೆ ಪ್ರಯಾಣ ಆರಂಭಿಸಿದ್ದರು. ಸಾಮಾನ್ಯ ಬೋಗಿಯ ಟಿಕೆಟ್ ಕೊಂಡಿದ್ದ ಇವರ ಬೋಗಿಯು ಪ್ರಯಾಣಿಕರಿಂದ ತುಂಬಿ ಹೋಗಿತ್ತು. ಆಗ ಇವರಿಗೆ ಅಪರಿಚಿತ ಪ್ರಯಾಣಿಕರು ಚಾಕಲೇಟ್ ಮತ್ತು ಪ್ಯಾಕ್ ಮಾಡಿದ್ದ ಕುರುಕಲು ತಿಂಡಿ ನೀಡಿದ್ದಾರೆ. ಅದನ್ನು ಸೇವಿಸಿದ ನಂತರ ಒಂದೆರಡು ಬಾರಿ ಶೌಚಾಲಯಕ್ಕೆ ಹೋಗಿ ಬಂದ ಇವರು ಮಲಗಿಕೊಂಡವರು ಬಹಳೊತ್ತಾದರೂ ಏಳಲೇ ಇಲ್ಲ. ಇದರಿಂದ ಸಂಶಯಗೊಂಡ ಸಹ ಪ್ರಯಾಣಿಕರು ಅವರನ್ನು ಎಚ್ಚರಿಸಲು ಎಷ್ಟೇ ಪ್ರಯತ್ನಿಸಿದರೂ ಅವರು ಏಳಲಿಲ್ಲ.
ರೈಲು ರಾತ್ರಿ ಸುಮಾರು 8.30 ಕ್ಕೆ ಬೆಳಗಾವಿ ನಿಲ್ದಾಣಕ್ಕೆ ತಲುಪಿದಾಗ ಪ್ರಯಾಣಿಕರು ರೈಲು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಗ ಎಲ್ಲರನ್ನು ಆಂಬುಲೆನ್ಸ ಮೂಲಕ ಜಿಲ್ಲಾ ಆಸ್ಪತ್ರೆಗೆ ಸೇರಿಸಿ ನಂತರ ಕೆಎಲ್ಈ ಆಸ್ಪತ್ರೆಗೆ ಸೇರಿಸಲಾಯಿತು.
ಇಂದು ಮಂಗಳವಾರ ಮುಂಜಾನೆ ಇಬ್ಬರಿಗೆ ಮಾತ್ರ ಪ್ರಜ್ಞೆ ಮರಳಿದೆ. ಉಳಿದ ಆರು ಜನ ಇನ್ನೂ ಅಪ್ರಜ್ಞಾವಸ್ತೆಯಲ್ಲಿದ್ದಾರೆ. ಅವರಿಗೆ ಪೂರ್ಣ ಪ್ರಜ್ಞೆ ಬಂದು, ಆಸ್ಪತ್ರೆ ಅನುಮತಿ ಪಡೆದು ವಿಚಾರಣೆ ನಡೆಸಲಾಗುವುದು. ಅಲ್ಲಿಯವರೆಗೂ ಅವರಿಗೆ ತೊಂದರೆ ಕೊಡಲಾಗದು ಎಂದು ಎಂದು ಇನ್ಸಪೆಕ್ಟರ್ ವೆಂಕಟೇಶ ತಿಳಿಸಿದರು.
ಬೆಳಗಾವಿ ರೈಲ್ವೆ ಪೊಲೀಸರು ವಾಸ್ಕೋ ರೈಲ್ವೆ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದು ಅವರು ರೈಲು ನಿಲ್ದಾಣದಲ್ಲಿರುವ ಸಿಸಿಟಿವಿ ದೃಶ್ಯ ವೀಕ್ಷಿಸುತ್ತಿದ್ದಾರೆ. ಆರೋಪಿಗಳು ಈ ಎಂಟೂ ಜನರನ್ನು ಹಿಂಬಾಲಿಸಿ ಬಂದು ಪ್ರಯಾಣಿಕರಂತೆ ರೈಲು ಹತ್ತಿ ಅವರನ್ನು ಲೂಟಿ ಮಾಡುವ ಉದ್ದೇಶ ಹೊಂದಿರಬಹುದು. ಆದರೆ ಬೋಗಿಯು ಪ್ರಯಾಣಿಕರಿಂದ ತುಂಬಿದ್ದರಿಂದ ಅವರಿಗೆ ಅದು ಸಾಧ್ಯವಾಗಿಲ್ಲ. ಅವರೆಲ್ಲರ ಹಣ ಮತ್ತು ಇತರೆ ವಸ್ತುಗಳು ಸುರಕ್ಷಿತವಾಗಿವೆ ಎಂದು ವೆಂಕಟೇಶ ತಿಳಿಸಿದರು.
“ಕಲುಷಿತ ಆಹಾರ ಸೇವಿಸಿದ್ದರೆ ಜನ ತೀವ್ರ ವಾಂತಿ, ಭೇದಿಯಿಂದ ಬಳಲುತ್ತಾರೆಯೇ ಹೊರತು ಪ್ರಜ್ಞೆ ತಪ್ಪುವುದಿಲ್ಲ. ವಿಷಮಿಶ್ರಿತ ಪದಾರ್ಥ ಸೇವನೆಯೇ ಇಷ್ಟು ದೀರ್ಘಕಾಲದ ಮೂರ್ಛಾವಸ್ಥೆಗೆ ಕಾರಣ” ಎಂದು ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ. ಅಶೋಕ ಕುಮಾರ ಶೆಟ್ಟಿ ಅವರು ಸಮದರ್ಶಿಗೆ ಮಾಹಿತಿ ನೀಡಿದರು.