ಹೊಸದಿಲ್ಲಿ : ಅಕ್ಟೋಬರ ತಿಂಗಳಲ್ಲಿ ದೇಶಾದ್ಯಂತ ನಿರುದ್ಯೋಗ ಪ್ರಮಾಣ ಹೆಚ್ಚಾಗಿದೆ. ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಬಹಳ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಭಾರತೀಯ ಆರ್ಥಿಕತೆ ಮೇಲ್ವಿಚಾರಣಾ ಕೇಂದ್ರ ವರದಿಯಲ್ಲಿ ತಿಳಿಸಿದೆ.
ಅಕ್ಟೋಬರನಲ್ಲಿ ನಿರುದ್ಯೋಗ ದರ ಶೇ. 7.77ಕ್ಕೆ ಹೆಚ್ಚಾಗಿದೆ. ಗ್ರಾಮೀಣ ಭಾಗದಲ್ಲಿ ಅತಿ ಹೆಚ್ಚು ಪರಿಣಾಮವಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ ಭಾರತದಲ್ಲಿ ನಿರುದ್ಯೋಗ ದರ ಶೇ. 6.43ಕ್ಕೆ ಇಳಿದಿತ್ತು. ಕಳೆದ 4 ವರ್ಷದಲ್ಲೇ ಅದು ಅತೀ ಕಡಿಮೆ ನಿರುದ್ಯೋಗ ಮಟ್ಟವೆನಿಸಿತ್ತು.
ಅಕ್ಟೋಬರ ತಿಂಗಳಲ್ಲಿ ಏಕಾಏಕಿ 1.34 ಪರ್ಸಂಟೇಜ್ ಪಾಯಿಂಟ್ಗಳಷ್ಟು ಏಕಾಏಕಿ ಹೆಚ್ಚಾಗಿ ನಿರುದ್ಯೋಗ ದರ ಶೇ. 7.77 ತಲುಪಿದೆ. ನಗರ ಪ್ರದೇಶಗಳಿಗಿಂತ ಗ್ರಾಮೀಣ ಭಾಗದಲ್ಲಿ ಉದ್ಯೋಗನಷ್ಟ ಬಹಳ ಹೆಚ್ಚಿದೆ. ನಗರ ಪ್ರದೇಶದಲ್ಲಿ ಸೆಪ್ಟೆಂಬರನಲ್ಲಿ ಶೇ. 7.21ರಷ್ಟಿದ್ದ ನಿರುದ್ಯೋಗ ಅಕ್ಟೋಬರನಲ್ಲಿ ಶೇ. 7.7ಕ್ಕೆ ಹೆಚ್ಚಿದೆ. ಆದರೆ, ಗ್ರಾಮೀಣ ಭಾಗದಲ್ಲಿ ನಿರುದ್ಯೋಗ ದರ ಒಂದೇ ತಿಂಗಳಲ್ಲಿ ಶೇ. 5.84ರಿಂದ ಶೇ. 8.04ಕ್ಕೆ ಜಿಗಿತ ಕಂಡಿದೆ
ಅನೇಕ ಐಟಿ ಕಂಪನಿಗಳು ಮತ್ತು ವಿಶ್ವದ ಕೆಲ ಪ್ರಮುಖ ಕಂಪನಿಗಳು ಆರ್ಥಿಕ ಮುಗ್ಗಟ್ಟು ಎದುರಿಸಲು ಉದ್ಯೋಗ ಕಡಿತಕ್ಕೆ ಕೈಹಾಕಿರುವ ಸುದ್ದಿ ಕೇಳಿದ್ದೇವೆ. ಆದರೆ, ಭಾರತದಲ್ಲಿ ತಯಾರಕಾ ವಲಯದಲ್ಲಿ ಮುಂದಿನ ದಿನಗಳಲ್ಲಿ ಬಹಳಷ್ಟು ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ. ಅಕ್ಟೋಬರನಿಂದ ಡಿಸೆಂಬರವರೆಗಿನ ತ್ರೈಮಾಸಿಕ ಅವಧಿಯಲ್ಲಿ ಶೇ. 57ರಷ್ಟು ಕಂಪನಿಗಳು ಉದ್ಯೋಗ ಭರ್ತಿ ಮಾಡುತ್ತಿವೆ ಎಂದು ಮತ್ತೊಂದು ವರದಿ ಹೇಳಿದೆ.