ಬೆಂಗಳೂರು,ಸೆ.3- ಅಹವಾಲು ಹೇಳಿಕೊಳ್ಳಲು ಬಂದ ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿಯ ದರ್ಪ ವರ್ತನೆಗೆ ಎಲ್ಲೆಡೆಯಿಂದ ಆಕ್ರೋಶ ವ್ಯಕ್ತವಾಗಿದೆ.
ಮಹಿಳೆ ಎಂದು ಗೌರವ ಕೊಡಿ ಎಂದು ಮಹಿಳೆ ಮನವಿ ಮಾಡಿಕೊಂಡರೂ ಒತ್ತುವರಿ ಮಾಡಿಕೊಂಡಿದ್ದೀಯಾ…. ನಿನಗೇಕೆ ಗೌರವ ಕೊಡಬೇಕು ಎಂದು ದರ್ಪ ತೋರಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಘಟನೆಯ ಬಳಿಕ ಮಹಿಳೆಯನ್ನು ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆಗೆ ಒಳಪಡಿಸಿ ಮತ್ತೆ ವಾಪಸ್ ಕಳುಹಿಸಲಾಯಿತು. ಅಧಿಕೃತ ಕೆಲಸದಲ್ಲಿ ಹಸ್ತಕ್ಷೇಪ ಮಾಡಿದ್ದಕ್ಕಾಗಿ ಮಹಿಳೆಯ ಮೇಲೆ ಕೂಡ ಎಫ್‌ಐಆರ್ ದಾಖಲಿಸಲಾಗಿದೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಕ್ರಮವಾಗಿ ನಿರ್ಮಾಣ ಮಾಡಿದ್ದ ವಾಣಿಜ್ಯ ಕಟ್ಟಡದ ಕಾಂಪೌಂಡ್ ಗೋಡೆಯನ್ನು ನೆಲಸಮ ಮಾಡಿದೆ. ಮಳೆ ನೀರು ಹರಿದುಹೋಗುವ ಕಾಲುವೆ ವಾಣಿಜ್ಯ ಮಳಿಗೆ ನಿರ್ಮಿಸಲಾಗಿದೆ ಎಂದು ಇದಕ್ಕೆ ವಿರೋಧ ವ್ಯಕ್ತಪಡಿಸಿದ ಈ ಕಾಂಪ್ಲೆಕ್ಸ್‌ನ ಮಾಲಕಿ ರೂತ್‌ಸಗಾಯ್ ಮೇರಿ ಅಮೀಲಾ ಎಂಬವರು, ಸರಕಾರಿ ಸರ್ವೇಯರ್‌ನಿಂದ ಸರ್ವೆ ಮಾಡಿ ಇಲಾಖಾ ಅನುಮೋದನೆ ಪಡೆದು ಗೋಡೆ ನಿರ್ಮಿಸಲಾಗಿದೆ. ಆದರೂ ಗೋಡೆ ಅರ್ಧ ಕೆಡವಲಾಗಿದೆ ಎಂದು ಹೇಳಿದ್ದಾರೆ.
ಈ ಮಧ್ಯೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ ಸಿಂಗ್ ಸುರ್ಜೆವಾಲಾ ಅವರು ಈ ವೀಡಿಯೊ ಹಂಚಿಕೊಂಡಿದ್ದು ಮಹಿಳೆಯ ಜೊತೆ ಶಾಸಕ ಅರವಿಂದ ಲಿಂವಾವಳಿ ಅನುಚಿತವಾಗಿ ನಡೆದುಕೊಂಡಿದ್ದಾರೆ. ಮಹಿಳೆಯರಿಗೆ ಸುರಕ್ಷತೆಯ ಭರವಸೆ ನೀಡುವ ಬಿಜೆಪಿ ಬೂಟಾಟಿಕೆ ಮಾಡಿದೆ ಎಂದು ಆರೋಪಿಸಿದ್ದಾರೆ.
ಮಹಿಳೆಯ ಜೊತೆ ಅಸಭ್ಯವಾಗಿ ನಡೆದುಕೊಂಡ ಶಾಸಕ ಅರವಿಂದ ಲಿಂಬಾವಳಿ ನಡೆ ಖಂಡನೀಯ. ಅನುಚಿತವಾಗಿ ನಡೆದುಕೊಂಡ ರೀತಿ ಅಕ್ಷಮ್ಯ’ ಬಿಜೆಪಿ ನಾಯಕರು ಕ್ಷಮೆಯಾಚಿಸುವಂತೆ ಕೋರಿದ್ದಾರೆ.