ಧಾರವಾಡ : ಮಾನವನ ಅರಣ್ಯ ಅತಿಕ್ರಮಣದ ಕಾರಣ ಕಾಡುಪ್ರಾಣಿ ಮತ್ತು ಮಾನವನ ಸಂಘರ್ಷ ಇತ್ತೀಚೆಗೆ ಹೆಚ್ಚಾಗಿದೆ. ಕುಂದಗೋಳ ತಾಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿ ತೋಳವೊಂದು ರವಿವಾರ ಮುಂಜಾನೆ ಮಾಡಿದ ದಾಳಿಯಿಂದ ಆರು ಜನ ಗಾಯಗೊಂಡಿದ್ದು ಮೂವರು ತೀವ್ರವಾಗಿ ಅಸ್ವಸ್ಥರಾಗಿದ್ದಾರೆ.
ಬೆಳಗಿನ ಜಾವ ಗ್ರಾಮದ ಮೇಲೆ ದಾಳಿ ಮಾಡಿದ ತೋಳವು ಮನುಷ್ಯರು, ಜಾನುವಾರುಗಳ ಮೇಲೆ ಹಲ್ಲೆ ನಡೆಸಿದೆ. ಆರಕ್ಕೂ ಹೆಚ್ಚು ಜನರ ಮೇಲೆ ದಾಳಿ ಮಾಡಿದ್ದು, ಈ ಪೈಕಿ ಮೂವರಿಗೆ ಗಂಭೀರ ಗಾಯಗಳಾಗಿವೆ.
ಪಾರಮ್ಮ ನವಲಗುಂದ, ರತ್ನವ್ವ ಬೂದಿಹಾಳ, ಬಸಮ್ಮ ಕದ್ದಿಗೆ ಎಂಬುವವರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಕುಂದಗೋಳ ತಾಲೂಕಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಈರಪ್ಪಣ್ಣ ಕೋಣನವರ ಎಂಬುವರಿಗೆ ಸೇರಿದ ಜಾನುವಾರುಗಳ ಮೇಲೂ ತೋಳ ದಾಳಿ ಮಾಡಿದೆ. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ. ಅರಣ್ಯ ಇಲಾಖೆ ತೋಳದ ಪತ್ತೆಗೆ ಕಾರ್ಯಾಚರಣೆ ಪ್ರಾರಂಭಿಸಿದೆ.