ಹೊಸದಿಲ್ಲಿ: ರೈಲಿನಲ್ಲಿ ಹಿರಿಯ ನಾಗರಿಕರಿಗೆ ಸದ್ಯಕ್ಕೆ ರಿಯಾಯಿತಿ ನೀಡುವುದಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಲೋಕಸಭೆಯಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಈ ಬಗ್ಗೆ ಮಾಹಿತಿ ನೀಡಿದ್ದು, ರೈಲಿನಲ್ಲಿ ರಿಯಾಯಿತಿ ಮತ್ತು ಇತರೆ ವೆಚ್ಚ ತುಂಬಾ ಹೆಚ್ಚಾಗಿದ್ದು, ಹಿರಿಯ ನಾಗರಿಕರಿಗೆ ಪ್ರಯಾಣದಲ್ಲಿ ಸದ್ಯಕ್ಕೆ ಯಾವುದೇ ರಿಯಾಯಿತಿ ಸೌಲಭ್ಯ ನೀಡುವ ಪ್ರಸ್ತಾಪವಿಲ್ಲ ಎಂದು ಹೇಳಿದ್ದಾರೆ.
ಕೊರೋನಾ ಸಂದರ್ಭದಲ್ಲಿ ರಿಯಾಯಿತಿ ಕೈ ಬಿಡಲಾಗಿತ್ತು. ಅದನ್ನು ಮರು ಜಾರಿ ಮಾಡುವ ಯಾವುದೇ ಪ್ರಸ್ತಾಪವಿಲ್ಲ ಎಂದು ಅವರು ಲೋಕಸಭೆಗೆ ತಿಳಿಸಿದ್ದಾರೆ.
ಮಹಾರಾಷ್ಟ್ರದ ಸಂಸದ ನವನೀತ ರಾಣಾ, ರೈಲು ಪ್ರಯಾಣದಲ್ಲಿ ಹಿರಿಯ ನಾಗರಿಕರಿಗೆ ನೀಡುತ್ತಿದ್ದ ರಿಯಾಯಿತಿ ದರದ ಪ್ರಯಾಣ ಸೌಲಭ್ಯ ಮತ್ತೆ ಕಲ್ಪಿಸುವ ಬಗ್ಗೆ ಪ್ರಸ್ತಾಪಿಸಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಅಶ್ವಿನಿ ವೈಷ್ಣವ್ ಅವರು ವೇತನ, ಪಿಂಚಣಿ, ಸಾರ್ವಜನಿಕ ಸಾರಿಗೆ ವೆಚ್ಚ ತುಂಬಾ ಏರಿಕೆ ಆಗಿರುವುದರಿಂದ ಕಳೆದ ಬಾರಿ ಪ್ರಯಾಣಿಕರಿಗೆ ಸೌಲಭ್ಯಗಳಿಗೆ 59,000 ಕೋಟಿ ರೂ. ಸಬ್ಸಿಡಿ ನೀಡಲಾಗಿತ್ತು. ಪ್ರಸ್ತುತ ಹಿರಿಯ ನಾಗರಿಕರಿಗೆ ರಿಯಾಯಿತಿ ನೀಡುವ ಪ್ರಸ್ತಾಪವಿಲ್ಲ ಎಂದರು.