ಖಾಸಗಿ ಆಸ್ಪತ್ರೆಗಳಲ್ಲಿ ಬಿಲ್ಲಿಂಗ್‌ ಪಾರದರ್ಶಕತೆ ಇಲ್ಲ -ಆರೋಗ್ಯ ಸಚಿವ

A B Dharwadkar
ಖಾಸಗಿ ಆಸ್ಪತ್ರೆಗಳಲ್ಲಿ ಬಿಲ್ಲಿಂಗ್‌ ಪಾರದರ್ಶಕತೆ ಇಲ್ಲ -ಆರೋಗ್ಯ ಸಚಿವ
Latest news isolated icon, megaphone or bullhorn, breaking report vector. Info announcement and TV or radio broadcast, web article, loudspeaker. Daily headline emblem or logo, message or advertising

ಬೆಂಗಳೂರು : ಖಾಸಗಿ ಆಸ್ಪತ್ರೆಗಳಲ್ಲಿ ಬಿಲ್ಲಿಂಗ್‌ ಮಾಡುವಾಗ ಹಾಗೂ ದತ್ತಾಂಶಗಳ ಸಂಗ್ರಹಣೆಯಲ್ಲಿ ಪಾರದರ್ಶಕತೆ ಇಲ್ಲ. ಫಾನಾ ಸಂಘಟನೆಯು ಈ ಬಗ್ಗೆ ಗಮನಹರಿಸಬೇಕು, ಈ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚೆ ನಡೆಯಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ‌ ಹೇಳಿದರು.

ಫಾನಾದಿಂದ ಆಯೋಜಿಸಿದ್ದ 3 ನೇ ರಾಷ್ಟ್ರೀಯ ಆರೋಗ್ಯ ಸಮ್ಮೇಳನದಲ್ಲಿ ಅವರು ಮಾತನಾಡಿ, ಜನರಿಗೆ ಉತ್ತಮ ಆರೋಗ್ಯ ಸೇವೆಗಳನ್ನು ನೀಡಲು ಸರ್ಕಾರಿ, ಖಾಸಗಿ ಆಸ್ಪತ್ರೆಗಳು ಹಾಗೂ ಫಾನಾ ಸಹಯೋಗದಲ್ಲಿ ಕೆಲಸ ಮಾಡಬೇಕು. ಜನರಿಗೆ ಸದಾ ಲಭ್ಯವಾಗುವಂತೆ ಹಾಗೂ ಚಿಕಿತ್ಸೆ ಕಡಿಮೆ ದರದಲ್ಲಿ ದೊರೆಯುವಂತೆ ವ್ಯವಸ್ಥೆ ಇರಬೇಕು ಎಂದರು.

ನಾನು ಯಾರನ್ನೂ ನಿರ್ದಿಷ್ಟವಾಗಿ ದೂರುತ್ತಿಲ್ಲ. ಆದರೆ ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಬಿಲ್ಲಿಂಗ್‌ನಲ್ಲಿ ಪಾರದರ್ಶಕತೆಯೇ ಇಲ್ಲ. ಸರ್ಕಾರದ ರಾಷ್ಟ್ರೀಯ, ರಾಜ್ಯ ಮಟ್ಟದ ಕಾರ್ಯಕ್ರಮಗಳಿಗೆ ಸರಿಯಾದ ದತ್ತಾಂಶ ಬೇಕಾಗುತ್ತದೆ. ಇದಕ್ಕಾಗಿ ಖಾಸಗಿ ಆಸ್ಪತ್ರೆಗಳು ಮಾಹಿತಿಯನ್ನು ಸರಿಯಾಗಿ ಸರ್ಕಾರದೊಂದಿಗೆ ಹಂಚಿಕೊಳ್ಳಬೇಕು ಎಂದರು.

ಖಾಸಗಿ ಆಸ್ಪತ್ರೆಗಳಿಲ್ಲದೇ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಉತ್ತಮವಾಗಿ ಕೆಲಸ ಮಾಡಲು ಸಾಧ್ಯವಿಲ್ಲ. ಜನರಿಗೆ ಉತ್ತಮ ಆರೋಗ್ಯ ಸೇವೆಯನ್ನು ಸರ್ಕಾರ ಹಾಗೂ ಖಾಸಗಿ ಆಸ್ಪತ್ರೆಗಳ ನಡುವೆ ಉತ್ತಮ ಸಂಬಂಧ ಇರಬೇಕು. ಉತ್ತಮ ಸಮನ್ವಯದಿಂದ ಹಾಗೂ ನಿರಂತರ ಸಂವಹನದಿಂದ ಉತ್ತಮ ಸೇವೆ ನೀಡಲು ಸಾಧ್ಯವಾಗುತ್ತದೆ ಎಂದರು.

ಮೊದಲು ವೈದ್ಯ ಕೇಂದ್ರಿತ ವ್ಯವಸ್ಥೆ ಇತ್ತು. ಈಗ ರೋಗಿಗಳ ಕೇಂದ್ರಿತ ವ್ಯವಸ್ಥೆ ಇದೆ. ಜೀವನಶೈಲಿಯ ಬದಲಾವಣೆಯಿಂದಾಗಿ ಅಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿವೆ. ಇದಕ್ಕಾಗಿ 438 ನಮ್ಮ ಕ್ಲಿನಿಕ್‌ಗಳನ್ನು ಆರಂಭಿಸಲಾಗುತ್ತಿದೆ. ಜನವರಿ ಅಂತ್ಯಕ್ಕೆ ಎಲ್ಲಾ ಕ್ಲಿನಿಕ್‌ಗಳು ಕಾರ್ಯಾರಂಭವಾಗಲಿವೆ. ಕಾರ್ಮಿಕರು, ವಲಸಿಗರು, ಕೊಳೆಗೇರಿ ನಿವಾಸಿಗಳಿಗೆ ಇಂತಹ ಕ್ಲಿನಿಕ್‌ಗಳು ಮೀಸಲಾಗಿವೆ. ಇದೇ ರೀತಿ ಬಡವರು ಹೆಚ್ಚಿರುವ ಪ್ರದೇಶಗಳಲ್ಲಿ ಮಹಿಳೆಯರಿಗಾಗಿ ʼಆಯುಷ್ಮತಿʼ ಕ್ಲಿನಿಕ್‌ಗಳನ್ನು ಸಹ ಆರಂಭಿಸಲಾಗುವುದು ಎಂದು ಸಚಿವರು ತಿಳಿಸಿದರು.

ಭಾರತದಲ್ಲಿ ನಾಲ್ಕು ವ್ಯಕ್ತಿಗಳಲ್ಲಿ ಒಬ್ಬರು ಸಕ್ಕರೆ ಕಾಯಿಲೆಗೆ ಒಳಗಾಗಿದ್ದಾರೆ ಎಂದು ಅಂದಾಜಿಸಲಾಗಿದೆ. ಈ ರೋಗ ಸೇರಿದಂತೆ ಎಲ್ಲಾ ಅಸಾಂಕ್ರಾಮಿಕ ರೋಗಿಗಳನ್ನು ಗ್ರಾಮೀಣ ಹಂತದಲ್ಲೇ ತಪಾಸಣೆ ಮಾಡಬೇಕು ಎಂದು ನಿರ್ಧರಿಸಲಾಗಿದೆ. ಈ ವರೆಗೆ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ.60 ಕ್ಕೂ ಅಧಿಕ ಜನರ ಆರೋಗ್ಯ ತಪಾಸಣೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಆರೋಗ್ಯ ಕ್ಷೇತ್ರ ವೇಗವಾಗಿ ಬೆಳೆಯುತ್ತಿದೆ. ಮುಂದಿನ ಮೂರು ವರ್ಷಗಳಲ್ಲಿ ದೇಶದ ಆರೋಗ್ಯ ಕ್ಷೇತ್ರವು 370 ಬಿಲಿಯನ್‌ ಅಮೇರಿಕನ್‌ ಡಾಲರ್‌ ಆರ್ಥಿಕತೆಯಾಗಿ ಬೆಳೆಯಲಿದೆ. ಸಣ್ಣ ಆಸ್ಪತ್ರೆಗಳು ಕೂಡ ಬೆಳೆಯಬೇಕು ಎಂದರು.

ಖಾಸಗಿ ಆಸ್ಪತ್ರೆಗಳ ಅಭಿವೃದ್ಧಿಗಾಗಿ ಸರ್ಕಾರದಿಂದ ಬೇಕಿರುವ ವಿವಿಧ ಅನುಮತಿಗಳಿಗೆ ಏಕಗವಾಕ್ಷಿ ವ್ಯವಸ್ಥೆ ತರಲು ಪ್ರಯತ್ನಿಸಲಾಗುವುದು ಎಂದು ಡಾ.ಸುಧಾಕರ‌ ನುಡಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.