ಹೊಸದಿಲ್ಲಿ, ೧೪- ನವೆಂಬರ್ ತಿಂಗಳಿನಲ್ಲಿ ಭಾರೀ ಪ್ರಮಾಣದಲ್ಲಿ ವಾಹನಗಳು ಮಾರಾಟವಾಗಿವೆ. ಕಳೆದ ತಿಂಗಳು ವಾರ್ಷಿಕ ಆಧಾರದ ಮೇಲೆ ವಾಹನದ ಮಾರಾಟ ಶೇ.28 ರಷ್ಟು ಏರಿಕೆ ಕಂಡಿದೆ. ನವೆಂಬರ್‌ನಲ್ಲಿ ಭಾರತದಲ್ಲಿ 2,76,231 ಪ್ರಯಾಣಿಕ ವಾಹನಗಳು ಬಿಕರಿಯಾಗಿವೆ.
ಈ ಪೈಕಿ ಅತಿ ಹೆಚ್ಚು ಕಾರುಗಳನ್ನು ಮಾರಾಟ ಮಾಡಿದ ಕಂಪನಿಗಳೆಂದರೆ ಮಾರುತಿ ಸುಜುಕಿ ಇಂಡಿಯಾ ಮತ್ತು ಹ್ಯುಂಡೈ ಮೋಟರ್. ಅಂಕಿ-ಅಂಶಗಳ ಪ್ರಕಾರ ನವೆಂಬರನಲ್ಲಿ ಮಾರುತಿ ಸುಜುಕಿ 1.32 ಲಕ್ಷ ಯುನಿಟ್‌ಗಳನ್ನು ಮಾರಾಟ ಮಾಡಿದರೆ, ಹುಂಡೈ 48,002 ಯುನಿಟ್‌ಗಳನ್ನು ಮಾರಾಟ ಮಾಡಿದೆ.
ಕಳೆದ ವರ್ಷ ನವೆಂಬರ್‌ನಲ್ಲಿ ಮಾರುತಿ ಸುಜುಕಿ ಮತ್ತು ಹ್ಯುಂಡೈ ಕ್ರಮವಾಗಿ 1.09 ಲಕ್ಷ ಯುನಿಟ್ ಮತ್ತು 37,001 ಯುನಿಟ್‌ಗಳನ್ನು ಮಾರಾಟ ಮಾಡಿದ್ದವು. ಯುಟಿಲಿಟಿ ವಾಹನಗಳು ಮತ್ತು ಕಾರುಗಳಿಗೆ ಬಲವಾದ ಬೇಡಿಕೆಯಿಂದಾಗಿ ಮಾರಾಟ ಹೆಚ್ಚಾಗಿದೆ.
2021ರ ನವೆಂಬರ್ ತಿಂಗಳಿನಲ್ಲಿ ಭಾರತದಲ್ಲಿ 2,15,626 ಪ್ರಯಾಣಿಕ ವಾಹನಗಳು ಮಾರಾಟವಾಗಿದ್ದವು. ಯುಟಿಲಿಟಿ ವಾಹನಗಳ ಸಗಟು ಮಾರಾಟವು ಕಳೆದ ತಿಂಗಳು 1,38,780 ಯುನಿಟ್‌ಗಳಿದ್ದು, 32 ಪ್ರತಿಶತದಷ್ಟು ಹೆಚ್ಚಾಗಿದೆ. ವರ್ಷದ ಹಿಂದೆ ಇದೇ ಅವಧಿಯಲ್ಲಿ 1,05,091 ಯುನಿಟ್‌ಗಳು ಮಾರಾಟವಾಗಿದ್ದವು.
ಈ ಅವಧಿಯಲ್ಲಿ ಪ್ರಯಾಣಿಕ ಕಾರುಗಳ ಪೂರೈಕೆಯು 29 ಪ್ರತಿಶತದಷ್ಟು ಏರಿಕೆಯಾಗಿದೆ. ಆದಾಗ್ಯೂ ವ್ಯಾನ್‌ನ ಮಾರಾಟವು ಕಳೆದ ತಿಂಗಳು 7,309 ಯುನಿಟ್‌ಗಳಿಗೆ ಕುಸಿದಿದೆ. ನವೆಂಬರ 2021 ರಲ್ಲಿ, 9,629 ವ್ಯಾನ್‌ಗಳನ್ನು ಮಾರಾಟ ಮಾಡಲಾಗಿತ್ತು.
ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಶೇ.16ರಷ್ಟು ಏರಿಕೆಯಾಗಿದೆ. ಕಳೆದ ತಿಂಗಳು ಒಟ್ಟು ದ್ವಿಚಕ್ರ ವಾಹನಗಳ ಸಗಟು ಮಾರಾಟವು 10,61,493 ಯುನಿಟ್‌ಗಳಿಂದ 12,36,190 ಯುನಿಟ್‌ಗಳಿಗೆ ಹೆಚ್ಚಳವಾಗಿದೆ.
ಕಳೆದ ವರ್ಷ ನವೆಂಬರ್‌ನಲ್ಲಿ 6,99,949 ಮೋಟಾರ್ ಸೈಕಲ್‌ಗಳು ಬಿಕರಿಯಾಗಿದ್ದವು. ಈ ಬಾರಿ 7,88,893 ಯುನಿಟ್‌ಗಳಿಗೆ ಏರಿಕೆಯಾಗಿದೆ. ಅದೇ ರೀತಿ, ಸ್ಕೂಟರ್‌ಗಳ ಸಗಟು ಮಾರಾಟವು 4,12,832 ಯುನಿಟ್‌ಗಳಿಗೆ ಮತ್ತು ಒಟ್ಟು ತ್ರಿಚಕ್ರ ವಾಹನಗಳ ಮಾರಾಟವು 45,664 ಯುನಿಟ್‌ಗಳಿಗೆ ಏರಿಕೆಯಾಗಿದೆ.