ಬೆಳಗಾವಿ : ತಾವು ಸ್ಪರ್ಧಿಸಿದ ಚುನಾವಣೆಗಳಲ್ಲಿ ಹಣ, ತೋಳ್ಬಲ ಮತ್ತು ಅಪಪ್ರಚಾರ ಗೆದ್ದಿದೆ ಎಂದು ಒಂದು ಉಪಚುನಾವಣೆ ಸೇರಿದಂತೆ ಕಳೆದ ನಾಲ್ಕು ಚುನಾವಣೆಗಳಲ್ಲಿ ಗೋಕಾಕ ಮತ ಕ್ಷೇತ್ರದಲ್ಲಿ ರಮೇಶ ಜಾರಕಿಹೊಳಿ ಅವರ ವಿರುದ್ಧ ಸೋತಿರುವ ಕಾಂಗ್ರೆಸ್ ನಾಯಕ ಅಶೋಕ ಪೂಜಾರಿ ಆರೋಪಿಸಿದ್ದಾರೆ.
ತಾವು ವಿರೋಧಿ ಅಭ್ಯರ್ಥಿಯಿಂದ ಹಣವನ್ನೋ ಕಾಣಿಕೆಯನ್ನೋ ಪಡೆದು ಅವರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದು ಅವರಿಗೆ ಮತ ನೀಡಿ ಪ್ರಯೋಜನವಿಲ್ಲವೆಂದು ಮತದಾನದ 2-3 ದಿನಗಳ ಮೊದಲು ಅಪಪ್ರಚಾರ ಮಾಡಿ ಮತದಾರರಲ್ಲಿ ಅದರಲ್ಲೂ ತಮ್ಮ ಬೆಂಬಲಿಗರು ತಮ್ಮನ್ನು ಸಂಶಯದಿಂದ ನೋಡುವಂತಹ ವ್ಯವಸ್ಥೆ ಮಾಡಿಕೊಂಡು ಯಶಸ್ವಿಯಾಗಿದ್ದಾರೆ ಎಂದು ಗೋಕಾಕ ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ ಹೇಳಿದರು.
ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಮ್ಮ ಕುಟುಂಬ ಸುಮಾರು 60 ವರ್ಷಗಳಿಂದ ರಾಜಕೀಯದಲ್ಲಿದೆ. ತಮ್ಮ ತಂದೆ ದಿ. ನಿಂಗಯ್ಯ ಸ್ವಾಮಿ ಪೂಜಾರಿ ಗೋಕಾಕ ನಗರಸಭೆಯ ಅಧ್ಯಕ್ಷರಾಗಿದ್ದರು. ಅವರಾಗಲಿ ಅಥವಾ 40 ವರ್ಷಗಳಿಂದ ರಾಜಕೀಯದಲ್ಲಿರುವ ತಾವಾಗಲಿ ಎಂದೂ ಭ್ರಷ್ಟಾಚಾರ ಮಾಡಿಲ್ಲ. ಇಂದಿಗೂ ತಮ್ಮ ಆರ್ಥಿಕ ಸ್ಥಿತಿ ಮೊದಲಿನಂತೇ ಇದೆ. ಭ್ರಷ್ಟಾಚಾರದೊಂದಿಗೆ ನಾವು ಎಂದಿಗೂ ರಾಜಿ ಮಾಡಿಕೊಂಡಿಲ್ಲ, ಮನಸಾಕ್ಷಿಗೆ ವಿರುದ್ಧವಾಗಿ ಎಂದಿಗೂ ನಡೆದುಕೊಂಡಿಲ್ಲ ಎಂದು ಹೇಳಿದರು.
ಸ್ಪರ್ಧೆಸಿದ್ದ ನಾಲ್ಕೂ ಚುನಾವಣೆಗಳಲ್ಲಿ ಗೆದ್ದದ್ದು ತಮ್ಮ ವಿರುದ್ಧ ಸ್ಪರ್ಧಿಸಿದವರಲ್ಲ, ಬದಲಿಗೆ ಹಣ, ತೋಳ್ಬಲ ಮತ್ತು ಮಾಡಿದ ವ್ಯವಸ್ಥಿತ ಅಪಪ್ರಚಾರ. ನ್ಯಾಯವಾದ ಚುನಾವಣೆ ಮಾಡಿದರೆ ತಾವು ಗೆಲ್ಲುವುದು ಶತಸಿದ್ದ ಎಂದು ಅವರು ಹೇಳಿದರು.
ಸೋಲು ತಮ್ಮನ್ನು ವಿಚಲಿತಗೊಳಿಸಿಲ್ಲ, ಆದರೆ ತಮ್ಮ ಕುರಿತು ಕೊನೆಯ ಹಂತದಲ್ಲಿ ಅಪಪ್ರಚಾರ ಮಾಡಿ ತಮ್ಮ ಅಭಿಮಾನಿ, ಬೆಂಬಲಿಗರು ತಮ್ಮನ್ನು ಸಂಶಯದಿಂದ ನೋಡುವಂತೆ ಮಾಡಿದ್ದು ನೋವುಂಟು ಮಾಡಿದೆ. ಜನರ ಮನಸ್ಸಿನಿಂದ ಸಂಶಯ ಹೋಗಲಾಡಿಸಲು 2019ರ ಉಪ ಚುನಾವಣೆಯಲ್ಲಿ ತಾವು ರಸ್ತೆಯಲ್ಲಿ ತಲೆಯ ಮೇಲೆ ನೀರು ಸುರುವಿಕೊಂಡು ತಮ್ಮ ಪ್ರಾಮಾಣಿಕತೆ ಬಗ್ಗೆ ತಮ್ಮ ಮನೆ ದೇವರ ಮೇಲೆ ಆಣೆ ಪ್ರಮಾಣ ಮಾಡಿರುವದಾಗಿ ಪೂಜಾರಿ ತಿಳಿಸಿದರು.
ಪಕ್ಷ ಬಯಸಿದರೆ ಈ ಬಾರಿಯೂ ಗೋಕಾಕ ಕ್ಷೇತ್ರದಿಂದ ಸ್ಪರ್ಧೆಸುವದಾಗಿಯೂ ಇದಕ್ಕಾಗಿ ತಾವು ಮತ್ತೊಮ್ಮೆ ಪ್ರಮಾಣ ಮಾಡಲು ನಿರ್ಧರಿಸಿರುವದಾಗಿಯೂ ತಿಳಿಸಿದರು. ಈ ಬಾರಿ ತಾವು ಮಾತ್ರವಲ್ಲದೇ ತಮ್ಮ ಇಬ್ಬರು ಗಂಡು ಮಕ್ಕಳೊಂದಿಗೆ ಬರುವ 6ರಂದು ಸುಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಪ್ರಮಾಣ ಮಾಡುವದಾಗಿ ತಿಳಿಸಿದರು.
ಇದೇ ತಮ್ಮ ಕೊನೆಯ ಚುನಾವಣೆಯಾಗಲಿದ್ದು ಕೊನೆಗೂ ಸತ್ಯಕ್ಕೇ ಜಯವಾಗಲಿದೆ, ತಾಳ್ಮೆಯಿಂದ ಕಾಯೋಣ, ಎಲ್ಲ ಅನ್ಯಾಯಕ್ಕೂ ಕೊನೆಯಿದೆ ಎಂದು ಪೂಜಾರಿ ತಿಳಿಸಿದರು.