ಗೋಕಾಕ : ತಮ್ಮದೆಂದು ಬಿಂಬಿಸಲಾದ ಸೆಕ್ಸ ಸಿಡಿ ಪ್ರಕರಣವನ್ನು ಮುಂದೆ ಬರಲಿರುವ ಕರ್ನಾಟಕ ಸರಕಾರ ಸಿಬಿಐ ತನಿಖೆಗೊಪ್ಪಿಸಬೇಕೆಂದು ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಆಗ್ರಹಿಸಿದರು.
ಗೋಕಾಕದಲ್ಲಿ ಬುಧವಾರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು. ಕಾಂಗ್ರೆಸ್ ಮುಖಂಡ ಡಿ ಕೆ ಶಿವಕುಮಾರ ನೇತೃತ್ವದಲ್ಲಿ ಒಂದು ತಂಡ ನಕಲಿ ಸೆಕ್ಸ ಸಿಡಿ ತಯಾರಿಸಿ ಶ್ರೀಮಂತರನ್ನು, ರಾಜಕಾರಣಿಗಳನ್ನು, ಉದ್ಯಮಿಗಳನ್ನು ಬ್ಲ್ಯಾಕಮೇಲ್ ಮಾಡುತ್ತಿದೆ. ತಾವು ಗುರುತಿಸಿಕೊಂಡಿರುವವರ ಮುಖಗಳನ್ನು ಕಟ್ ಪೇಸ್ಟ್ ಮಾಡಿ ವಿಡಿಯೋ ತಯಾರಿಸಿ ಬ್ಲ್ಯಾಕ್ ಮೇಲ್ ಮಾಡಲಾಗುತ್ತಿದೆ. ಇದರಿಂದ ಅನೇಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಮಾನಸಿಕವಾಗಿ ಅಸ್ವಸ್ಥರಾಗಿದ್ದಾರೆ, ಅನೇಕ ಕುಟುಂಬಗಳು ಒಡೆದು ಹೋಗಿವೆ ಎಂದರು.
ಇಂಥವುಗಳನ್ನು ತಡೆಯಲು ತಮ್ಮ ನಕಲಿ ಸಿಡಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದರೆ ಮುಂದೆ ಆಗುವ ಅನಾಹುತಗಳನ್ನು ತಡೆಯಬಹುದು, ಅಲ್ಲದೇ ಸಂಪೂರ್ಣ ಸಿಡಿ ಗ್ಯಾಂಗ್ ಜೈಲಿಗೆ ಹೋಗುತ್ತದೆ ಎಂದು ಅವರು ಹೇಳಿದರು.
ಮಂಗಳವಾರ ಮಧ್ಯರಾತ್ರಿ ಯಾರ ಹೆಸರನ್ನೂ ಸೂಚಿಸದೇ ತಮಗೆ ಕರೆಯೊಂದು ಬಂದಿತ್ತು. ಬೆಳಗಾವಿ ಗ್ರಾಮೀಣ ಕ್ಷೇತ್ರದ ರಾಜಕೀಯದಿಂದ ದೂರವಿರಬೇಕು, ಇಲ್ಲದಿದ್ದರೆ ತಮ್ಮ ಬಳಿಯಿರುವ ಇತರ ಸೆಕ್ಸ್ ಸಿಡಿಗಳನ್ನು ಬಿಡುಗಡೆ ಮಾಡುವ ಬೆದರಿಕೆ ಹಾಕಿತ್ತು. ಆದರೆ ತಾವು ಇಂಥ ಬೆದರಿಕೆಗಳಿಗೆ ಹೆದರುವದಿಲ್ಲವೆಂದು ತಾವು ತಿಳಿಸಿದ್ದಾಗಿ ಜಾರಕಿಹೊಳಿ ತಿಳಿಸಿದರು.
ಮುಂದೆ ಕೂಡ ಬಿಜೆಪಿ ಸರಕಾರ ಬರುತ್ತದೆ, ತಾವು ಮಂತ್ರಿಮಂಡಳ ಸೇರುವ ಮೊದಲು ಶಿವಕುಮಾರ ತಮ್ಮದೆಂದು ಕಟ್ ಅಂಡ್ ಪೇಸ್ಟ್ ಮಾಡಿರುವ ಸಿಡಿಗಳನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ ಎಂದೂ ಅವರು ತಿಳಿಸಿದರು. ಬಿಜೆಪಿ ಹೈಕಮಾಂಡ್ ಜೊತೆ ಉತ್ತಮ ಬಾಂಧವ್ಯ ಹೊಂದಿರುವದಾಗಿ ತಿಳಿಸಿದ ಅವರು, ತಾವು ಕೇಂದ್ರ ಗೃಹ ಸಚಿವ ಅಮಿತ ಶಾ ಅವರಿಗೆ ತಮ್ಮ ಸಿಡಿ ಪ್ರಕರಣವನ್ನು ಸಿಬಿಐಗೆ ವಹಿಸಲು ಆಗ್ರಹಿಸಿರುವದಾಗಿ ತಿಳಿಸಿದರು. ಇದರಿಂದ ಸಿಡಿ ಫ್ಯಾಕ್ಟರಿಯವರ ಉಪಟಳ, ಕಿರುಕುಳ ತಪ್ಪಿದಂತಾಗುತ್ತದೆ ಎಂದು ತಿಳಿಸಿದರು.
ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ‘ವಿಷಕನ್ಯೆ’ ಎಂದು ಕರೆದ ರಮೇಶ ಜಾರಕಿಹೊಳಿ, “ಡಿಕೆ ಶಿವಕುಮಾರ ಒಳ್ಳೆಯವನೇ. ಆ ವಿಷಕನ್ಯೆಯನ್ನು ಬಿಟ್ಟರೆ ಒಳ್ಳೆಯದು. ಇಲ್ಲದಿದ್ದರೆ ಅವನ ಅಂತ್ಯವಾಗುತ್ತದೆ” ಎಂದು ಹೇಳಿದರು.
ಚುನಾವಣೆ ಕುರಿತು ಮಾತನಾಡಿದ ಜಾರಕಿಹೊಳಿ, ಬಿಜೆಪಿ 130 ಸ್ಥಾನ ಪಡೆಯುವದು ಖಚಿತ. ಬೆಳಗಾವಿ ಜಿಲ್ಲೆಯ 18 ಸ್ಥಾನಗಳಲ್ಲಿ 13 ಸ್ಥಾನ ಪಡೆಯುವದು ನಿಶ್ಚಿತವೆಂದು ಅವರು ಭರವಸೆ ವ್ಯಕ್ತಪಡಿಸಿದರು.