ಬಾಗಲಕೋಟ : ಬಾಗಲಕೋಟ ನಗರದ ಪ್ರಾರ್ಥನಾ ಸ್ಥಳವೊಂದಕ್ಕೆ ಭೆಟ್ಟಿ ನೀಡಿ ಮರಳಿ ಹೋಗುತ್ತಿದ್ದ ಜೀಪೊಂದು ರಸ್ತೆ ಬದಿಯ ಸೇತುವೆಯ ತಡೆಗೋಡೆಗೆ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಮೂವರು ಅಸು ನೀಗಿದ್ದು ನಾಲ್ವರು ಗಾಯಗೊಂಡಿದ್ದಾರೆ.
ಇಳಕಲ್ ಗ್ರಾಮದ ಬಳಿ ಎಂ ಕೆ ದಾಭಾ ಬಳಿ ಈ ದುರ್ಘಟನೆ ಸಂಭವಿಸಿದೆ. ತಾವರಾಗೆರೆಯ ಕುಟುಂಬವೊಂದು ತಮ್ಮ ಹರಕೆ ಈಡೇರಿದ್ದರಿಂದ ಬಾಗಲಕೋಟದ ಪ್ರಾರ್ಥನಾ ಮಂದಿರಕ್ಕೆ ಭೆಟ್ಟಿ ನೀಡಿ ಹರಕೆ ಸಲ್ಲಿಸಿ ಮರಳಿ ಊರಿಗೆ ತೆರಳಿದ್ದಾಗ ಅವರು ಪ್ರಯಾಣಿಸುತ್ತಿದ್ದ ಜೀಪ್ ಸೇತುವೆ ತಡೆಗೋಡೆಗೆ ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ಶಮೀದಸಾಬ ನಾಯಕ, ಮೌಲಾಸಾಬ ನಾಯಕ ಮತ್ತು ಇಮಾಮಬಿ ನಾಯಕ ಸಾವಿಗೀಡಾದರು. ಒಬ್ಬರು ಸ್ಥಳದಲ್ಲೇ ಮಡಿದರೆ ಇಬ್ಬರು ಆಸ್ಪತ್ರೆಗೆ ಸಾಗಿಸುವಾಗ ಅಸುನೀಗಿದರೆಂದು ಪೊಲೀಸರು ತಿಳಿಸಿದ್ದಾರೆ.
ಗಾಯಗೊಂಡಿರುವ ನಾಲ್ವರನ್ನು ಬಾಗಲಕೋಟ ಸರಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ.