ಗಂಗಾವತಿ (ಕೊಪ್ಪಳ ಜಿಲ್ಲೆ), ೬: ಗಣೇಶ ವಿಸರ್ಜನೆ ವೇಳೆ ಮಸೀದಿ ಮುಂದೆ ಪೂಜೆ ಸಲ್ಲಿಸಿದ್ದನ್ನು ತಡೆಗಟ್ಟುವಲ್ಲಿ ವಿಫಲರಾದ ಪೊಲೀಸ್ ಸಿಬ್ಬಂದಿಯನ್ನು ಕರ್ತವ್ಯಲೋಪ ಆರೋಪದ ಮೇಲೆ ಅಮಾನತುಗೊಳಿಸಲಾಗಿದೆ.
ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ‘ಹಿಂದು ಮಹಾ ಮಂಡಳಿ’ ಕಾರ್ಯಕರ್ತರು ಗಣೇಶ ವಿಸರ್ಜನೆ ಕಾರ್ಯಕ್ರಮ ನಡೆಸಿದ್ದರು. ಈ ವೇಳೆ ಪ್ರಚೋದನಾತ್ಮಕವಾಗಿ ಜಾಮೀಯಾ ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡುತ್ತಿದ್ದ ವಾಹನವನ್ನು ನಿಲ್ಲಿಸಿ ಕುಂಬಳಕಾಯಿ ಒಡೆದು, ಹೋಮಕುಂಡ ಹಾಕಿ ಪೂಜೆ ಸಲ್ಲಿಸಲಾಗಿತ್ತು. ಇದಕ್ಕೆ ಮುಸ್ಲಿಂ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಬೇರೆ ಧರ್ಮದ ಪೂಜಾ ಸ್ಥಳದ ಮುಂದೆ ಪೂಜೆ ಸಲ್ಲಿಸುವುದು ಕೋಮು ಪ್ರಚೋದನೆ ನೀಡುತ್ತದೆ ಎಂದು ಗೊತ್ತಿದ್ದರೂ, ಪೂಜೆ ಮಾಡುವುದನ್ನು ತಡೆಯುವಲ್ಲಿ ಪೊಲೀಸ್ ಸಿಬ್ಬಂದಿ ವಿಫಲವಾಗಿದ್ದಾರೆ ಎಂದು ಆರೋಪಿಸಲಾಗಿದೆ. ಹೀಗಾಗಿ, ಗಂಗಾವತಿ ನಗರ ಠಾಣೆ ಇನ್ಸ್ಪೆಕ್ಟರ ಅಡಿವೇಶ ಗುದಿಗೊಪ್ಪ, ಪಿಎಸ್ಐ ಕಾಮಣ್ಣ ಹಾಗೂ ಹೆಡ್ ಕಾನ್ಸ್ಟೇಬಲ್ ಮರಿಯಪ್ಪ ಹೊಸಮನಿ ಅವರನ್ನು ಸಸ್ಪೆಂಡ್ ಮಾಡಿ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಅದೇಶ ಹೊರಡಿಸಿದ್ದಾರೆ.
ಗಂಗಾವತಿ ಕೋಮು ಸೂಕ್ಷ್ಮ ಪ್ರದೇಶಗಳಲ್ಲಿ ಒಂದಾಗಿದ್ದು ಇಷ್ಟೆಲ್ಲಾ ಆಗುತ್ತಿದ್ದರೂ ಸೂಕ್ತ ಕ್ರಮ ಕೈಗೊಳ್ಳದೇ ಮಸೀದಿ ಮುಂದೆ ಪೂಜೆ ಮಾಡಲು ಪೊಲೀಸರು ಬಿಟ್ಟಿದ್ದರು. ಪರಿಣಾಮ ಪ್ರಕ್ಷುಬ್ಧ ವಾತವರಣ ನಿರ್ಮಾಣವಾಗಿತ್ತು.