ಮೈಸೂರು, ೨೮: ಬಂಡೀಪುರ ಭಾಗದಲ್ಲಿ ಮಹಿಳೆ ಸಾವಿಗೆ ಕಾರಣವಾಗಿದ್ದ ಭಾರೀ ಗಾತ್ರದ ನರಭಕ್ಷಕ ಹುಲಿಯನ್ನು ಸೋಮವಾರ ಮಧ್ಯರಾತ್ರಿ ವೇಳೆ ನಡೆಸಿದ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ ಸೆರೆ ಹಿಡಿದಿದೆ.
10 ವರ್ಷದ ಗಂಡು ಹುಲಿ ಇದಾಗಿದ್ದು, ಎರಡು ದಿನದ ಹಿಂದೆ ಹಸುವೊಂದನ್ನು ಕೊಂದು ಹಾಕಿದ್ದ ನಂಜನಗೂಡು ತಾಲ್ಲೂಕು ಬಳ್ಳೂರು ಹುಂಡಿಯಲ್ಲಿಯ ಜಾಗದಲ್ಲಿಯೇ ಅದನ್ನು ಸೆರೆ ಹಿಡಿಯಲಾಗಿದೆ.
ಬಳ್ಳೂರು ಹುಂಡಿ ಬಳಿ ದನ ಮೇಯಿಸಲು ಹೋಗದ್ದ ರತ್ನಮ್ಮ ಎಂಬ ಮಹಿಳೆ ಮೇಲೆ ದಾಳಿ ಮಾಡಿದ್ದ ಹುಲಿ ಆಕೆಯನ್ನು ಕೊಂದು ಹಾಕಿತ್ತು. ಮರುದಿನ ಅದೇ ಗ್ರಾಮದ ಹಸುವೊಂದರ ಮೇಲೆ ದಾಳಿ ಮಾಡಿ ಕೊಂದು ಹಾಕಿತ್ತು. ಸೋಮವಾರ ಮಧ್ಯರಾತ್ರಿ 1: 45ರ ಹೊತ್ತಿಗೆ ಹುಲಿ ಅಲ್ಲಿಗೆ ಬಂದಾಗ ಅರವಳಿಕೆ ನೀಡಿ ಅದನ್ನು ಸೆರೆ ಹಿಡಿಯಲಾಯಿತು. ಆನಂತರ ಅದನ್ನು ಮೈಸೂರು ಮೃಗಾಲಯಕ್ಕೆ ತರಲಾಗಿದೆ.
ಹುಲಿ ಒಮ್ಮೆ ಬೇಟೆ ಮಾಡಿದ ಸ್ಥಳಕ್ಕೆ ಬಂದೇ ಬರುತ್ತದೆ ಎಂಬ ನಂಬಿಕೆ ಮೇಲೆ ಅದು ದಾಳಿ ಮಾಡಿದ ಸ್ಥಳದಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಸೋಮವಾರ ರಾತ್ರಿ 9 ರ ಸುಮಾರಿಗೆ ಹಸು ತಿನ್ನಲು ಬಂದಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅರಣ್ಯ ಇಲಾಖೆ ಸಮೀಪದಲ್ಲೇ ಬೋನು ಇರಿಸಿ ಅದರೊಳಗೆ ವೈದ್ಯಾಧಿಕಾರಿ ಡಾ.ವಾಸೀಮ ಜಾಫರ ಇದ್ದರು. ಸಿಬ್ಬಂದಿಯೂ ಹುಲಿಗಾಗಿ ಕಾಯುತ್ತಿದ್ದರು. ಮಧ್ಯರಾತ್ರಿ ಹುಲಿ ಬಂದಾಗ ಅದಕ್ಕೆ ಅರವಳಿಕೆ ನೀಡಲು ಹೊಂಚು ಹಾಕಿ ಕುಳಿತಿದ್ದ ವೈದ್ಯರು ಯಶಸ್ವಿಯಾದರು. ಕೆಲವೇ ಕ್ಷಣದಲ್ಲಿ ಮಂಪರಿನಿಂದ ಮಲಗಿದ ಹುಲಿಯನ್ನು ಬಲೆ ಹಾಕಿ ಸೆರೆ ಹಿಡಿದು ಬೆಳಗಿನ ಜಾವವೇ ಮೈಸೂರು ಮೃಗಾಲಯಕ್ಕೆ ತರಲಾಯಿತು.
ಹುಲಿ ಸೆರೆಗೆ 200 ಕ್ಕೂ ಹೆಚ್ಚು ಅರಣ್ಯ ಇಲಾಖೆ ಸಿಬ್ಬಂದಿ, 100 ಮಂದಿ ಗಿರಿಜನರನ್ನು ನಿಯೋಜನೆ ಮಾಡಲಾಗಿತ್ತು. ಡ್ರೋಣ ಬಳಸಿ ಹುಲಿ ಜಾಡು ಪತ್ತೆಗೆ ಕ್ರಮ ಕೈಗೊಳ್ಳಲಾಗಿತ್ತು. ಮೂರು ಸಾಕಾನೆಗಳೂ ಸೆರೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದವು.