ಬಿಜೆಪಿಯಿಂದ ನಾಡದ್ರೋಹಿ ಕೆಲಸ; ಕನ್ನಡ ಸಂಘಟನೆಗಳು, ಆಪ್ ಆಕ್ರೋಶ

A B Dharwadkar
ಬಿಜೆಪಿಯಿಂದ  ನಾಡದ್ರೋಹಿ ಕೆಲಸ;  ಕನ್ನಡ  ಸಂಘಟನೆಗಳು, ಆಪ್ ಆಕ್ರೋಶ
Latest news isolated icon, megaphone or bullhorn, breaking report vector. Info announcement and TV or radio broadcast, web article, loudspeaker. Daily headline emblem or logo, message or advertising

ಬೆಳಗಾವಿ : ಸಾಕಷ್ಟು ಕನ್ನಡ ಭಾಷಿಕ ಮಹಾನಗರಪಾಲಿಕೆ ಸದಸ್ಯರಿದ್ದಾಗಲೂ ಸಹ ಮರಾಠಿ ಭಾಷಿಕ ಸದಸ್ಯರನ್ನೇ ಮಹಾಪೌರ ಮತ್ತು ಉಪಮಹಾಪೌರ ಎರಡೂ ಹುದ್ದೆಗಳಿಗೆ ಆಯ್ಕೆ ಮಾಡಿರುವ ಬಿಜೆಪಿ ಪಕ್ಷವು ಮರಾಠಿಗರಿಗೆ ಮಾರಾಟವಾಗಿದೆ, ಅಲ್ಲದೇ ರಾಜ್ಯಕ್ಕೇ ದ್ರೋಹ, ಅನ್ಯಾಯವೆಸಗಿದೆ ಎಂದು ಕನ್ನಡ ಸಂಘಟನೆಗಳು ಮತ್ತು ಆಮ್ ಆದ್ಮಿ ಪಾರ್ಟಿ (ಆಪ್) ಆರೋಪಿಸಿದೆ.

ಈ ಕುರಿತು ಪ್ರತಿಕ್ರಿಯಿಸಲು ಚುನಾವಣೆಯ ಉಸ್ತುವಾರಿ ‘ಕಿಂಗ್ ಮೇಕರ್’ ಎಂದೇ ಬಣ್ಣಿಸಲಾದ ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಮತ್ತು ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ ಲಭ್ಯವಾಗುತ್ತಿಲ್ಲ.

ನೂತನವಾಗಿ ಆಯ್ಕೆಯಾಗಿರುವ ಮಹಾಪೌರ ಶೋಭಾ ಸೋಮನಾಚೆ ಮತ್ತು ಉಪಮಹಾಪೌರ ರೂಪಾ ಪಾಟೀಲ ಅವರಿಗೆ ಕನ್ನಡ ಓದಲು, ಬರೆಯಲು, ಮಾತನಾಡಲೂ ಬಾರದು ಮತ್ತು ಅರ್ಥವೂ ಆಗದು. ಸೋಮವಾರ ಆಯ್ಕೆಯಾದ ನಂತರ ಪತ್ರಕರ್ತರು ಕನ್ನಡದಲ್ಲಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲು ಅವರಿಗೆ ಸಾಧ್ಯವಾಗಲಿಲ್ಲ. ಅಲ್ಲದೇ ತಾವು ಮರಾಠಿಯಲ್ಲಿ ಬರೆದು ತಂದಿದ್ದ ಕನ್ನಡ ಶಬ್ದಗಳನ್ನೂ ಸಹ ಓದಲು ಕಷ್ಟ ಪಟ್ಟರು. ಇಂಥವರನ್ನು ಕನ್ನಡಿಗರು ತನ್ನ ಮೊದಲ, ಎರಡನೆಯ ಪ್ರಜೆಗಳು ಎಂದು ಬಿಜೆಪಿ ಆಯ್ಕೆ ಮಾಡಿದ್ದು ವಿಪರ್ಯಾಸವೇ ಸರಿ.

ಬೆಳಗಾವಿ ಮಹಾನಗರಪಾಲಿಕೆ ಮಹಾಪೌರ ಮತ್ತು ಉಪಮಹಾಪೌರ ಸ್ಥಾನಗಳನ್ನು ಮರಾಠಿಗರಿಗೆ ದಕ್ಕಿಸಿಕೊಡುವ ಮೂಲಕ ಬಿಜೆಪಿ ಶಾಸಕ ಅಭಯ ಪಾಟೀಲ ತಾನೊಬ್ಬ ಕನ್ನಡ ವಿರೋಧಿ ಮತ್ತು ಲಿಂಗಾಯತ ವಿರೋಧಿ ಅನ್ನುವುದನ್ನು ಸಾಬೀತುಪಡಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕಿ ಸರಳಾ ಸಾತಪುತೆ ಅಭಿಪ್ರಾಯ ಪಟ್ಟಿದ್ದಾರೆ.

ಇವರ ಮಾತು ಕೇಳಿ “ಬಲಿ ಕಾ ಬಕ್ರಾ” ಆಗಿ ಹೋದ ಬೆಳಗಾವಿ ಉತ್ತರ ಶಾಸಕ ಅನಿಲ ಬೆನಕೆ ಅವರು ತನ್ನ ಕ್ಷೇತ್ರದ 50 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ಕನ್ನಡಿಗ ಲಿಂಗಾಯತ ಮತದಾರರನ್ನು ಮರೆತು ಹೋಗಿರುವಂತೆ ಕಾಣಿಸುತ್ತಿದೆ. ಶಾಸಕ ಅಭಯ ತೋರಿಸಿದ ಶಿರಸಾವಹಿಸಿ ಮಾಡುವ ನಾಲ್ಕು ಜನ ನೇಕಾರ/ದೇವಾಂಗ (ನಾಲ್ಕು ಜನರಲ್ಲಿ ಮೂವರು ಮಹಿಳೆಯರೇ) ಸಮುದಾಯದ ನಗರ ಸೇವಕರು ತಾವು ಕೇವಲ ಶಾಸಕರ ಚಾಕರಿಗೆ ಅರ್ಹರು ಎಂದು ನಿರ್ಧರಿಸಿರುವ ಹಾಗಿದೆ. ಮೇಯರ್ ಸ್ಥಾನ ಸಾಮಾನ್ಯ ಮಹಿಳಾ ಕೋಟಾದಲ್ಲಿ ಇದ್ದರೂ, ನೇಕಾರ ಸಮುದಾಯದ ಮಹಿಳಾ ನಗರ ಸೇವಕರಷ್ಟೇ ಇರುವ ಮರಾಠಾ ಮಹಿಳಾ ಸಮುದಾಯವು ಎರಡೂ ಸ್ಥಾನ ಬಾಚಿಕೊಂಡು ಬೀಗುತ್ತಿದ್ದಾರೆ. ಕನ್ನಡಿಗರೆಲ್ಲ ಸೇರಿ ಅವರ ಬಹುಪರಾಕ್ ಮಾಡಲಿ. “ಎಷ್ಟೇ ಆದರೂ ಸ್ವಾಭಿಮಾನ ಇಲ್ಲದ ಕನ್ನಡಿಗರು ಸದಾ ಕಳೆದುಕೊಳ್ಳುವುದರಲ್ಲೇ ಖುಷಿ ಪಡುವವರಲ್ಲವೇ ?
ಇರಲಿ ಮತ್ತೊಮ್ಮೆ ನೆನಪಿಸುತ್ತೇನೆ. ಬೆಳಗಾವಿ ದಕ್ಷಿಣದಲ್ಲಿ ಬಿಜೆಪಿ ಶಾಸಕ ಅಭಯ ಪಾಟೀಲ ಅವರು ಕನ್ನಡಿಗರ ಪಾಲಿಗೆ ನಾಡದ್ರೋಹಿ ಎಂಇಎಸ್ ಗಿಂತ ಅಪಾಯಕಾರಿಯಾಗಿದ್ದಾರೆ ಅನ್ನುವುದನ್ನು ಮರೆಯಬೇಡಿ” ಎಂದು ಸರಳಾ ಹೇಳಿದ್ದಾರೆ.

ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಸುಮಾರು 50,000 ಲಿಂಗಾಯತ ಮತದಾರರು ಯಡಿಯೂರಪ್ಪ ಇದ್ದುದರಿಂದ ಬಿಜೆಪಿಗೆ ಮತ ನೀಡಿದ್ದಾರೆ. ಅವರೀಗ ಬಿಜೆಪಿಗೆ ಮತ ನೀಡುವ ಕುರಿತು ಆತ್ಮವಲೋಕನ ಮಾಡಿಕೊಳ್ಳಬೇಕಾದ ಕಾಲ ಬಂದಿದೆ ಎಂದು ಆಪ್ ಮುಖ್ಯಸ್ಥ ರಾಜೀವ ಟೋಪಣ್ಣವರ ಹೇಳಿದ್ದಾರೆ.

ಕರವೇ ಖಂಡನೆ

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಪಕ್ಷ ಆಧಾರಿತ ಚುನಾವಣೆ ನಡೆಸಿ ಅಧಿಕಾರದ ಗದ್ದುಗೆ ಏರಿದ ಬಿಜೆಪಿ ಮಹಾಪೌರ ಮತ್ತು ಉಪ ಮಹಾಪೌರ ಎರಡೂ ಸ್ಥಾನಗಳನ್ನು ಮರಾಠಿ ಭಾಷಿಕರಿಗೆ ನೀಡುವ ಮೂಲಕ ಈ ರಾಜ್ಯದ ಕನ್ನಡಿಗರಿಗೆ ಮೋಸ ಮಾಡಿದೆ ಎಂದು ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಆರೋಪಿಸಿದ್ದಾರೆ.

ಈಗಾಗಲೇ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನವನ್ನು ಮರಾಠಿ ಭಾಷಿಕರಿಗೆ ನೀಡಿರುವ ಬೆಳಗಾವಿ ನಗರದ ಬಿಜೆಪಿ ನಾಯಕರು, ಈಗ ಬೆಳಗಾವಿ ಪಾಲಿಕೆ ಮಹಾಪೌರ ಹಾಗು ಉಪ ಮಹಾಪೌರ ಎರಡೂ ಸ್ಥಾನಗಳನ್ನು ಮರಾಠಿ ಭಾಷಿಕರಿಗೆ ನೀಡುವ ಮೂಲಕ ಬಿಜೆಪಿ ಪಕ್ಷದಲ್ಲಿ ಕನ್ನಡಿಗರಿಗೆ ಯಾವುದೇ ಮಾನ್ಯತೆ ಇಲ್ಲ, ಬಿಜೆಪಿಗೆ ಮರಾಠಿ ಭಾಷಿಕರೇ ಮುಖ್ಯ ಎನ್ನುವದನ್ನು ಬಿಜೆಪಿ ನಾಯಕರು ಮತ್ತೊಮ್ಮೆ ಸಾಬೀತು ಮಾಡುವ ಮೂಲಕ ರಾಜ್ಯದ ಕನ್ನಡಿಗರಿಗೆ ಅವಮಾನ ಮಾಡಿದ್ದಾರೆ, ಬಿಜೆಪಿಯ ಅಸಲಿ ಮುಖ ಈಗ ಬಯಲಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಳಗಾವಿಯ ಬಿಜೆಪಿ ನಾಯಕರಿಗೆ ಕನ್ನಡ ಭಾಷಿಕರ ಬಗ್ಗೆ ಕಳಕಳಿಯೂ ಇಲ್ಲ,ಕನ್ನಡಿಗರ ಬಗ್ಗೆ ಗೌರವವೂ ಇಲ್ಲ. ಬಿಜೆಪಿ ಪಕ್ಷಕ್ಕೆ ಮರಾಠಿ ಭಾಷಿಕರು ಮುಖ್ಯವಾಗಿದ್ದು, ಪಾಲಿಕೆಯಲ್ಲಿ ಬಿಜೆಪಿ ಗೆಲ್ಲಿಸಲು ಮತ ಚಲಾಯಿಸಿದ ಕನ್ನಡಿಗರಿಗೆ ಅವಮಾನಿಸುವ ಕೆಲಸವನ್ನು ಬಿಜೆಪಿ ನಾಯಕರು ಸದಾ ಮಾಡಿದ್ದಾರೆ. ರಾಜ್ಯದ ಜನ ಬಿಜೆಪಿಗೆ ಖಂಡಿತ ಪಾಠ ಕಲಿಸುತ್ತಾರೆ ಎಂದು ಗುಡಗನಟ್ಟಿ ಎಚ್ಚರಿಕೆ ನೀಡಿದ್ದಾರೆ.

ನಾಡದ್ರೋಹಿಗಳನ್ನು ಬಂಧಿಸಿ
————————-

ಬೆಳಗಾವಿ ಮಹಾನಗರಪಾಲಿಕೆ ಆವರಣದಲ್ಲಿ ನಾಡದ್ರೋಹಿ ಘೋಷಣೆ ಕೂಗಿದ ಮೂವರು ಎಂಇಎಸ್ ನಗರ ಸೇವಕರ ಸದಸ್ಯತ್ವವನ್ನು ಸರ್ಕಾರ ಕೂಡಲೇ ರದ್ದು ಮಾಡಬೇಕು. ಜೊತೆಗೆ ಈ ನಾಡದ್ರೋಹಿಗಳನ್ನು ಬಂಧಿಸುವಂತೆ ಕರವೇ ಒತ್ತಾಯಿಸಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.