ಕಾರವಾರ : ಕಾರವಾರ ಮತ್ತು ಗೋವಾ ನಡುವೆ ಸಂಪರ್ಕ ಕಲ್ಪಿಸುವ ಕಾರವಾರ ಬಳಿಯ ರಾಷ್ಟ್ರೀಯ ಹೆದ್ದಾರಿ 66ರ ಕೋಡಿಬಾಗ ಸೇತುವೆ ನಿನ್ನೆ ಮಧ್ಯರಾತ್ರಿ ಕುಸಿದು ಬಿದ್ದಿದೆ.
ಕಾಳಿ ನದಿಗೆ ಅಡ್ಡಲಾಗಿ 43 ವರ್ಷದ ಹಿಂದೆ ಕಟ್ಟಲಾಗಿದ್ದ ಈ ಸೇತುವೆ ಮಧ್ಯರಾತ್ರಿ ಹೊತ್ತಿಗೆ ಕುಸಿದಿದ್ದು, ಲಾರಿಯೊಂದು ನದಿಗೆ ಬಿದ್ದಿತು. ಪೊಲೀಸರು ಲಾರಿ ಚಾಲಕನನ್ನು ರಕ್ಷಿಸಿದ್ದು ಆದರೆ ಇದಕ್ಕೂ ಮೊದಲು ಯಾವುದಾದರೂ ವಾಹನ ಕೊಚ್ಚಿ ಹೋಗಿದೆಯೋ ಎನ್ನುವುದು ಗೊತ್ತಾಗಿಲ್ಲ. ಈ ಬಗ್ಗೆ ಅಗ್ನಿಶಾಮಕ ದಳ, ಪೊಲೀಸರಿಂದ ಶೋಧ ಕಾರ್ಯ ನಡೆಯುತ್ತಿದೆ.
“ಮಧ್ಯರಾತ್ರಿ ಏಕಾಏಕಿ ಕೋಡಿಬಾಗ ಸೇತುವೆ ಕುಸಿದು ಬಿದ್ದಿತು. ಲಾರಿ ಚಾಲಕನನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದೇವೆ. ವಿಚಾರ ತಿಳಿದ ಕೂಡಲೇ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ. ಲಾರಿ ಚಾಲಕ ಬಾಲಮುರುಗನ್ ನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ” ಎಂದು ಜಿಲ್ಲಾ ಪೊಲೀಸ ವರಿಷ್ಠ ನಾರಾಯಣ ತಿಳಿಸಿದ್ದಾರೆ.
ಅಬ್ಬರದ ಮಳೆಯಿಂದ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕಾಳಿ ನದಿಯ ಸವಾಲಿನ ಮಧ್ಯೆಯೂ ಕರವಾಳಿ ಕಾವಲು ಪಡೆ, ಎಸ್ಡಿಆರ್ಎಫ್ ಮತ್ತು ಎನ್ಡಿಆರ್ಎಫ್ ಕಾರ್ಯಾಚರಣೆ ಮುಂದುವರೆದಿದೆ ಎಂದು ನಾರಾಯಣ ತಿಳಿಸಿದ್ದಾರೆ.
ಸೇತುವೆಯಿಂದ ಕಾಳಿ ನದಿಗೆ ಇನ್ನಷ್ಟು ವಾಹನಗಳು ಏನಾದರೂ ಬಿದ್ದಿವೆಯೇ ಎಂಬ ಬಗ್ಗೆ ಶೋಧ ಕಾರ್ಯ ನಡೆಯುತ್ತಿದೆ. ಅಗ್ನಿಶಾಮಕ ದಳ, ಪೊಲೀಸರಿಂದ ಶೋಧ ಕಾರ್ಯ ನಡೆಯುತ್ತಿದೆ ಎಂದು ನಾರಾಯಣ ತಿಳಿಸಿದರು.
ವರ್ಷಗಳ ಹಿಂದೆ ಈ ಸೇತುವೆಯನ್ನು ನಿರ್ಮಾಣ ಮಾಡಲಾಗಿತ್ತು. ರಾಷ್ಟ್ರೀಯ ಹೆದ್ದಾರಿ 66 ನಿರ್ಮಾಣದ ವೇಳೆ ಒಂದೇ ಒಂದು ಹೊಸ ಸೇತುವೆ ನಿರ್ಮಾಣ ಮಾಡಲಾಗಿತ್ತು. ಇನ್ನೊಂದು ಮಾರ್ಗಕ್ಕೆ ಹಳೆ ಸೇತುವೆಯನ್ನೇ ಬಳಸಲಾಗುತ್ತಿತ್ತು. ಸದ್ಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಐಆರ್ಬಿ ಕಂಪನಿ ವಿರುದ್ಧ ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರ ಸ್ಥಗಿತ
ಈ ನಡುವೆ ಕಾಳಿ ನದಿಗೆ ಕಟ್ಟಲಾಗಿದ್ದ ಹಳೆಯ ಸೇತುವೆ ಕುಸಿದ ಪರಿಣಾಮವಾಗಿ, ಅದರ ಹತ್ತಿರದಲ್ಲೇ ಕಟ್ಟಲಾಗಿರುವ ಹೊಸ ಸೇತುವೆಯ ಗುಣಮಟ್ಟವನ್ನು ಪರಿಶೀಲಿಸುವಂತೆ ಸರ್ಕಾರ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರವಾರದಿಂದ ಗೋವಾ ಕಡೆಗೆ ವಾಹನ ಸಂಚಾರ ಸ್ಥಗಿತಗೊಂಡಿದೆ.
ಸರ್ಕಾರದಿಂದ ಉತ್ತರ ಕನ್ನಡ ಜಿಲ್ಲಾಡಳಿತಕ್ಕೆ ರವಾನೆಯಾಗಿರುವ ಪತ್ರದಲ್ಲಿ, ‘ಕಾರವಾರ ಮತ್ತು ಸದಾಶಿವಗಡವನ್ನು ಸಂಪರ್ಕಿಸುವ ಕಾಳಿ ನದಿಯ ಹಳೆಯ ಸೇತುವೆಯು 07.08.2024 ರಂದು ಮಧ್ಯರಾತ್ರಿ 1:30 ಕ್ಕೆ ಕುಸಿದಿದೆ. ಯಾವುದೇ ಹೆಚ್ಚಿನ ಘಟನೆಗಳನ್ನು ತಡೆಯಲು ಕಾಳಿ ನದಿಯ ಹೊಸ ಸೇತುವೆಯ ಸ್ಥಿರತೆಯನ್ನು ಪರಿಶೀಲಿಸುವ ಮತ್ತು ಖಚಿತಪಡಿಸಿಕೊಳ್ಳುವ ತುರ್ತು ಅಗತ್ಯವಿದೆ ಎಂದು ತಿಳಿಸಲಾಗಿದೆ.
ಕಾರವಾರ ಮತ್ತು ಸದಾಶಿವಗಡವನ್ನು ಸಂಪರ್ಕಿಸುವ ಕಾಳಿ ನದಿಯ ಹೊಸ ಸೇತುವೆಯ ಸ್ಥಿರತೆಯನ್ನು ಪರಿಶೀಲಿಸಲು ಮತ್ತು ವರದಿ ಮಾಡಲು ಪ್ರಯತ್ನಗಳನ್ನು ಸಂಘಟಿಸಲು ಮತ್ತು ಮುನ್ನಡೆಸಲು. ಸ್ಥಿರತೆಯ ವರದಿಯನ್ನು 07.08.2024 ಮಧ್ಯಾಹ್ನ 12:00 ಗಂಟೆಯೊಳಗೆ ಸಲ್ಲಿಸಬೇಕು. ಈ ಆದೇಶದ ಅನುಸರಣೆಯನ್ನು ಯೋಜನಾ ನಿರ್ದೇಶಕರು ಖಚಿತಪಡಿಸಿಕೊಳ್ಳಬೇಕು ಎಂದು ಉಲ್ಲೇಖಿಸಲಾಗಿದೆ.
1983ರಲ್ಲಿ ಈ ನದಿಯ ಮೇಲೆ ನಿರ್ಮಿಸಲಾಗಿದ್ದ ಈ ಸೇತುವೆಯು ಕರ್ನಾಟಕ ಹಾಗೂ ಗೋವಾ ರಾಜ್ಯಗಳನ್ನು ಸಂಪರ್ಕಿಸುವ ಪ್ರಮುಖ ಸಂಪರ್ಕ ಸೇತುವೆಯಾಗಿದೆ. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರವಾರದಲ್ಲಿ ಒಟ್ಟು ಎರಡು ಸೇತುವೆಗಳಿದ್ದು ಈಗ ಕುಸಿದಿರುವುದು ಹಳೆಯ ಸೇತುವೆಯಾಗಿದೆ.