ಬೆಳಗಾವಿ : ಇಂಟರ್ನೆಟ್ ಸಂಪರ್ಕದಿಂದ ಜಗತ್ತೇ ಮೊಬೈಲ್ ನಲ್ಲಿದೆ. ಕ್ಷಣಮಾತ್ರದಲ್ಲಿ ಜಗತ್ತಿನ ಯಾವುದೇ ಸ್ಥಳದಲ್ಲಿರುವವರೊಂದಿಗೆ ಸಂಪರ್ಕ ಹೊಂದಬಹುದು. ಹಾಗೆಯೇ ಈ ಸೌಲಭ್ಯದ ಅಡ್ಡ ಪರಿಣಾಮಗಳೂ ಇಲ್ಲವೆಂದಲ್ಲ, ಹಲವರು ಪ್ರಾಣವನ್ನೂ ಕಳೆದುಕೊಂಡಿದ್ದಾರೆ.
ಮೊಬೈಲ್, ಇಂಟರ್ನೆಟ್ ಬಂದ ಮೇಲೆ ಮೊದಲ ಪರಿಣಾಮವಾದದ್ದೇ ವೈಯಕ್ತಿಕ ಭೇಟಿ ಮೇಲೆ. ಮೊದಲು ವೈಯಕ್ತಿಕವಾಗಿ ಭೇಟಿಯಾಗುತ್ತಿದ್ದವರು ಈಗ ವಿಡಿಯೋಕಾಲ್ ಮೂಲಕ ಭೇಟಿಯಾಗುತ್ತಿದ್ದಾರೆ. ಜನರಲ್ಲಿ ಭಾಂದವ್ಯ ಕಡಿಮೆಯಾಗುತ್ತಿದೆ.
ಇದನ್ನು ತಪ್ಪಿಸಿ ಮತ್ತೇ ಮೊದಲಿನಂತೆ ಜನ ಪರಸ್ಪರ ಭೇಟಿಯಾಗಿ ಸಮಯ ಕಳೆಯಲೆಂದು, ಮಕ್ಕಳು ಎಲ್ಲ ಬಿಟ್ಟು ಅಭ್ಯಾಸದಲ್ಲಿ ತೊಡಗುವಂತೆ ಮಾಡಲು ಕರ್ನಾಟಕದ ಅಥಣಿ ತಾಲೂಕಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಮೋಹಿತೆ ವಡಗಾಂವ ಗ್ರಾಮವು ವಿನೂತನ ನಿರ್ಣಯ ಕೈಕೊಂಡಿದೆ.
ಗ್ರಾಮ ಹಿರಿಯರ ಒಪ್ಪಿಗೆಯೊಂದಿಗೆ ಮೋಹಿತೆ ವಡಗಾಂವ ಗ್ರಾಮ ಪಂಚಾಯತ್ ಸರ್ವ ಸಾಧಾರಣ ಸಭೆಯಲ್ಲಿ ನಿರ್ಣಯ ಕೈಕೊಂಡಿದ್ದು ಪ್ರತಿದಿನ ಸಂಜೆ ಏಳು ಗಂಟೆಯಿಂದ ಒಂಭತ್ತು ಗಂಟೆಯವರೆಗೆ ಗ್ರಾಮದ ಯಾವುದೇ ಮನೆಯಲ್ಲಿ ಟಿವಿ ಆನ್ ಆಗಿರುವಂತಿಲ್ಲ, ಜನ ಮೊಬೈಲ್ ಬಿಟ್ಟು ಅಕ್ಕಪಕ್ಕದವರೊಂದಿಗೆ ಚರ್ಚೆಯಲ್ಲಿರಬೇಕು, ಇಲ್ಲದಿದ್ದರೂ ಮೊಬೈಲ್ ಬಳಸುವಂತಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಪ್ರತಿ ವಿದ್ಯಾರ್ಥಿ ಅಭ್ಯಾಸದಲ್ಲಿರಬೇಕು.
ಅದಕ್ಕೆಂದೇ ಪ್ರತಿದಿನ ಸಂಜೆ ಏಳು ಗಂಟೆಗೆ ಗ್ರಾಮದಲ್ಲಿರುವ ದೇವಸ್ಥಾನದ ಸೈರನ್ ಹೊಡೆಯುತ್ತದೆ. ಆಗ ಎಲ್ಲರೂ ಮೊಬೈಲ್ ಬಿಡಬೇಕು, ಟಿವಿ ಆಫ್ ಮಾಡಬೇಕು ಮತ್ತು ಮಕ್ಕಳು ಕಡ್ಡಾಯವಾಗಿ ಅಭ್ಯಾಸ ಮಾಡಬೇಕು.
ಒಂಭತ್ತು ಗಂಟೆಗೆ ಮತ್ತೊಮ್ಮೆ ಸೈರನ್ ಆಗುತ್ತದೆ ಆಗ ಟಿವಿ ನೋಡಬಹುದು, ಮೊಬೈಲ್ ಬಳಸಬಹುದು. ಒಟ್ಟಿನಲ್ಲಿ ಜನ ಮಕ್ಕಳು ಟಿವಿ ಮೊಬೈಲ್ ನಿಂದ ದೂರ ಉಳಿಯಲೇಬೇಕು.
ಸುಮಾರು 7 ಸಾವಿರ ಜನಸಂಖ್ಯೆ ಹೊಂದಿರುವ ಮೋಹಿತೆ ವಡಗಾಂವ ಗ್ರಾಮದಲ್ಲಿ ಸುಮಾರು 500ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಕೋವಿಡ್ ನಿಂದ ಆರಂಭವಾದ ಆನಲೈನ್ ಕ್ಲಾಸ್ ಭರಾಟೆಯಿಂದ ಮಕ್ಕಳ ಕೈಗೂ ಮೊಬೈಲ್ ಸಿಕ್ಕಿತ್ತು.
ಇದು ಮಕ್ಕಳ ಮೇಲೆ ದುಷ್ಪರಿಣಾಮ ಬೀರದಿರಲಿ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಜಯ ಮೋಹಿತೆ ಹಾಗೂ ಊರಿನ ಗ್ರಾಮಸ್ಥರು ನಿರ್ಣಯ ಮಾಡಿಕೊಂಡು ಇಂತಹ ನಿರ್ಣಯ ಕೈಗೊಂಡಿದ್ದು ಸಂಜೆ 7 ಗಂಟೆಗೆ ದೇವಸ್ಥಾನದ ಸೈರನ್ ಆದ ತಕ್ಷಣ ಗ್ರಾಮದ ಪ್ರತಿಯೊಬ್ಬರೂ ಸಹ ತಮ್ಮ ಟಿವಿ ಕೈಲಿರುವ ಮೊಬೈಲ್ ಬಿಟ್ಟು ಸಂಬಂಧಿಕರೊಂದಿಗೆ ಅಕ್ಕಪಕ್ಕದವರೊಂದಿಗೆ ಬೆರೆತು ಮಾತನಾಡುವುದು ಮಾಡಬೇಕು.
ಎರಡು ತಿಂಗಳಿಂದ ಈ ನಿರ್ಣಯ ಜಾರಿಯಲ್ಲಿದ್ದು ಗ್ರಾಮಸ್ಥರು ಸ್ಪಂದಿಸಿದ್ದಾರೆ. ಮೊದಲು ಜನರಿಲ್ಲದೇ ಬಿಕೋ ಎನ್ನುತ್ತಿದ್ದ ಗ್ರಾಮವೀಗ ಜನರಿಂದ ಪುನಃ ಕಳೆಹೊಂದಿದೆ, ಯುವಕರು ಮನೆಯಲ್ಲಿರದೇ ಆಟ, ಚರ್ಚೆ ಮುಂತಾದವುಗಳಲ್ಲಿ ನಿರತರಾಗಿರುತ್ತಾರೆ.
ಗ್ರಾಮ ಮತ್ತೇ ತನ್ನ ಸೊಗಡನ್ನು ಪಡೆದುಕೊಂಡಿದೆ. ಗ್ರಾಮಸ್ಥರು ಹೊಸ ನಿರ್ಣಯಕ್ಕೆ ಹೊಂದಿಕೊಂಡು ಸಂತಸ ವ್ಯಕ್ತಪಡಿಸುತ್ತಿದ್ದಾರೆ ಎಂದು ಗ್ರಾಮ ಪಂಚಾಯತಿಯ ಅಧ್ಯಕ್ಷ ವಿಜಯ ಮೋಹಿತೆ ತಿಳಿಸಿದ್ದಾರೆ. ಜನ ಮೊಬೈಲ್ ಈ ಅವಧಿಯಲ್ಲಿ ಆಫ್ ಮಾಡಬೇಕಿಲ್ಲ, ಆದರೆ ತುರ್ತು ಸಂಧರ್ಭಗಳಲ್ಲಿ ಮಾತ್ರ ಬಳಸಬಹುದೇ ಹೊರತು ಹರಟೆಗೆ ಬಳಸುವಂತಿಲ್ಲವೆಂದು ಅವರು ತಿಳಿಸಿದರು.