ಕಾರವಾರ: ಭಟ್ಕಳದಲ್ಲಿ ಕೋಮು ಸಂಘರ್ಷ ಸೃಷ್ಟಿಸಿ ಶಾಂತಿ ಕದಡಲು ಪ್ರಯತ್ನಿಸಿದ ಇಬ್ಬರು ಹಿಂದೂ ಕಾರ್ಯಕರ್ತರನ್ನು ಮುರುಡೇಶ್ವರ ಠಾಣೆ ಹಾಗೂ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನವೀನ ಸೋಮಯ್ಯ ನಾಯ್ಕ, ನವೀನ ವೆಂಕಟೇಶ ನಾಯ್ಕ ಬಂಧಿತ ಹಿಂದೂ ಕಾರ್ಯಕರ್ತರಾಗಿದ್ದಾರೆ. ನವೀನ ಸೋಮಯ್ಯ ನಾಯ್ಕ, ನವೀನ ವೆಂಕಟೇಶ ನಾಯ್ಕ ಎಂಬವರು ಭಟ್ಕಳದಲ್ಲಿ ಕೋಮು ಸೌಹಾರ್ದತೆ ಕದಡಲು ಮತ್ತು ಶಾಂತಿ ಭಂಗ ಮಾಡಲು ಇಬ್ಬರೂ ವೈಯಕ್ತಿಕ ಕಾರಣದಿಂದ ಒಬ್ಬರಿಗೊಬ್ಬರು ಜಗಳ ಮಾಡಿಕೊಂಡು ನವೀನ ಸೋಮಯ್ಯ ನಾಯ್ಕ ಎಂಬುವನು ನವೀನ ವೆಂಕಟೇಶ ನಾಯ್ಕ ತಲೆಗೆ ಹಲ್ಲೆ ನಡೆಸುತ್ತಾನೆ. ಬಳಿಕ ಹಲ್ಲೆಯನ್ನು ಅನ್ಯ ಕೋಮಿನವರು ಮಾಡಿದ್ದಾರೆ ಎಂದು ಆರೋಪಿಸಿ ನವೀನ ವೆಂಕಟೇಶ ನಾಯ್ಕ ಮುರುಡೇಶ್ವರ ಠಾಣೆಗೆ ಸುಳ್ಳು ದೂರು ನೀಡಿದ್ದಾನೆ.
ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಆರಂಭಿಸಿ ಸತ್ಯಾಸತ್ಯತೆಯನ್ನು ಬಯಲಿಗೆಳೆದಿದ್ದಾರೆ. ಇಬ್ಬರನ್ನೂ ತೀವ್ರ ವಿಚಾರಣೆ ನಡೆಸಿದಾಗ ಭಟ್ಕಳದಲ್ಲಿ ಕೋಮು ಸಂಘರ್ಷ ಮೂಡಿಸಿ ಶಾಂತಿ ಕದಡಲು ಪ್ರಯತ್ನಿಸಿರುವುದಾಗಿ ಇಬ್ಬರೂ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

