ಬೆಳಗಾವಿ, ಮೇ ೨೩: ಗುರುವಾರ ಸಂಜೆ ನಗರದ ಶಹಾಪುರದ ಅಳವನ ಗಳ್ಳಿಯಲ್ಲಿ ಬಾಲಕರ ಎರಡು ತಂಡಗಳ ಕ್ರಿಕೆಟ್ ಆಟದಲ್ಲಿ ನಡೆದ ವಾಗ್ವಾದ ಹಿಂಸಾಚಾರಕ್ಕೆ ತೆರಳಿ ವ್ಯಾಪಕವಾಗಿ ಕಲ್ಲು ತೂರಾಟ ನಡೆದಿದ್ದು ಇಬ್ಬರು ಗಾಯಗೊಂಡು ಜಿಲ್ಲಾ ಆಸ್ಪತ್ರೆಯಲ್ಲಿ ಸೇರಿಸಲ್ಪಟ್ಟಿದ್ದಾರೆ.
ಅಳವನ ಗಲ್ಲಿಯ ಎರಡು ಕ್ರಿಕೆಟ್ ತಂಡಗಳು ಗುರುವಾರ ಸಂಜೆ ಯಥಾ ಪ್ರಕಾರ ಹತ್ತಿರದ ಮೈದಾನದಲ್ಲಿ ಕ್ರಿಕೆಟ್ ಮ್ಯಾಚ್ ಆಡುತ್ತಿದ್ದವು. ಆಗ ಯಾವುದೋ ಕಾರಣಕ್ಕೆ ಜಗಳ ಉಂಟಾಗಿದೆ. ಆದರೆ ಅದು ಮೈದಾನದಿಂದ ಹೊರಗೆ ಬಂದು ಉಭಯ ತಂಡಗಳ ಸದಸ್ಯರು ವಾಸವಾಗಿರುವ ನಿವಾಸ ಸ್ಥಳಕ್ಕೂ ವಿಸ್ತರಿಸಿಕೊಂಡಿದೆ.
ಕೆಲವರು ತಮ್ಮ ವಿರೋಧಿ ತಂಡದ ಅಳವಣ ಗಲ್ಲಿಯ ಆಟಗಾರರ ನಿವಾಸಗಳ ಮೇಲೆ ಕಲ್ಲು ಮತ್ತು ಇಟ್ಟಿಗೆಗಳನ್ನು ತೂರಿದರು. ಅವುಗಳಲ್ಲಿ ಕೆಲವು ಜನರ ಮೇಲೆ ಬಿದ್ದಿವೆ. ಇದರಿಂದ ಇಬ್ಬರು ಗಾಯಗೊಂಡಿದ್ದು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ಘಟನೆಯ ನಂತರ ಸಂಪೂರ್ಣ ಶಹಾಪುರ ವಲಯದಲ್ಲಿ ವಾಣಿಜ್ಯ ವ್ಯವಹಾರ ರಾತ್ರಿ ಎಂಟು ಗಂಟೆಯಿಂದ ಸ್ಥಗಿತಗೊಂಡಿದೆ.
ಪೊಲೀಸ್ ಆಯುಕ್ತ ಎಡಾ ಮಾರ್ಟೀನ್ ಸ್ಥಳಕ್ಕೆ ಭೆಟ್ಟಿ ನೀಡಿದ್ದಾರೆ. ಕೆಲವರು ಘಟನೆಗೆ ಕೋಮು ಬಣ್ಣ ಲೇಪಿಸುವುದರಿಂದ ಅಳವಣ ಗಲ್ಲಿಗೆ ಹೋಗುವ ಎಲ್ಲ ಮಾರ್ಗಗಳನ್ನು ಬ್ಯಾರಿಕೇಡಗಳನ್ನು ಹಾಕಿ ಬಂದ್ ಮಾಡಲಾಗಿದೆ.