ಸವದತ್ತಿ : ನಿರ್ಮಾಣ ಹಂತದಲ್ಲಿರುವ ಕಟ್ಟಡದ ನೀರಿನ ಸಂಪನಲ್ಲಿ ಬಿದ್ದು ನರ್ಸರಿ ಶಾಲೆಯ ಇಬ್ಬರು ಮಕ್ಕಳು ಅಸುನೀಗಿದ ಘಟನೆ ಸವದತ್ತಿ ನಗರದಲ್ಲಿ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ.
ನಗರದ ಗುರ್ಲಹೊಸೂರಿನಲ್ಲಿ ವಾಲ್ಮೀಕಿ ಭವನ ಕಟ್ಟಡ ನಿರ್ಮಾಣ ಕಾರ್ಯಕ್ಕೆ ನೀರು ಸಂಗ್ರಹಿಸಲು ಟಾಕಿಯೊಂದನ್ನು ನಿರ್ಮಿಸಲಾಗಿದೆ. ಆದರೆ ಅದರ ಮೇಲ್ಬಾಗಕ್ಕೆ ಹೊದಿಕೆ ಹಾಕದೇ ಬಿಡಲಾಗಿದೆ. ಈ ಕಟ್ಟಡದ ಬದಿಯೇ ಪೂರ್ವ ಪ್ರಾಥಮಿಕ ಶಾಲೆಯಿದ್ದು ನೂರಾರು ಮಕ್ಕಳು ನರ್ಸರಿ, ಎಲ್ ಕೆಜಿ, ಯು ಕೆಜಿ ತರಗತಿಯಲ್ಲಿ ಓದುತ್ತಿದ್ದಾರೆ. ನರ್ಸರಿ ವಿಭಾಗದಲ್ಲಿ ಓದುತ್ತಿದ್ದ ನಾಲ್ಕು ವರುಷದ ಶ್ಲೋಕ ಶಂಭುಲಿಂಗಪ್ಪ ಗುಡಿ ಹಾಗೂ ಚಿದಾನಂದ ಪ್ರಕಾಶ ಸಾಲುಂಕೆ ಅವರು ನೀರಿನ ಟ್ಯಾಂಕ್ ಬಳಿ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಅದರಲ್ಲಿ ಬಿದ್ದು ಮೃತಪಟ್ಟಿದ್ದಾರೆ.
ಶ್ಲೋಕ ಹಾಗೂ ಚಿದಾನಂದ ಆಟವಾಡುತ್ತ ಹೋಗಿ ಸಂಪಿನಲ್ಲಿ ಬಿದ್ದಿದ್ದಾರೆ. ಎರಡು ಕಟ್ಟಡಗಳ ಸಣ್ಣ ಸಂದಿಯಲ್ಲಿ ನೀರಿನ ಟ್ಯಾಂಕ್ ಇರುವ ಕಾರಣ ಮಕ್ಕಳು ಬಿದ್ದಿದ್ದನ್ನು ಯಾರೂ ಗಮನಿಸಿಲ್ಲ. ಎರಡೂ ಮಕ್ಕಳು ಗ್ರಾಮದ ಪ್ರಗತಿ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಾಲೆಯಲ್ಲಿ ನರ್ಸರಿ ಓದುತ್ತಿದ್ದರು. ಶಾಲೆ ಬಿಟ್ಟ ನಂತರವೂ ಮಕ್ಕಳು ಮನೆಗೆ ಬಾರದ್ದನ್ನು ಕಂಡು ಪಾಲಕರು ಆ ಹುಡುಕಾಡಿದರು. ಆಗ ಮಕ್ಕಳು ಟ್ಯಾಂಕ್ ನಲ್ಲಿ ಬಿದ್ದಿದ್ದು ಗೊತ್ತಾಯಿತು.
ಸವದತ್ತಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.