ಬೆಳಗಾವಿ, ೧೦- ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳು ತನಿಖೆಯಿಂದ ದೃಢ ಪಟ್ಟಿದ್ದು, ಕಾರಾಗೃಹಗಳ ಇಲಾಖೆಯು ಇಬ್ಬರು ಅಧಿಕಾರಿಗಳನ್ನು ಗುರುವಾರ ಅಮಾನತ್ತು ಮಾಡಿದೆ.
ಜೈಲಿನ ಮುಖ್ಯ ವಾರ್ಡನ್ ಬಿ ಎಲ್ ಮೆಳವಂಕಿ ಮತ್ತು ವಾರ್ಡನ್ ವಿ ಟಿ ವಾಘಮೋರೆ ಅಮಾನತ್ತುಗೊಂಡವರು. ಜೈಲಿನ ಹೊರಗೆ ದೊರೆಯುವ ಸೌಲಭ್ಯಗಳನ್ನಲ್ಲದೇ ಇವರು ಕೈದಿಗಳಿಗೆ ತಮ್ಮ ಮೊಬೈಲ್ ಫೋನ್ ಗಳನ್ನೂ ಸಹ ಬಳಸಲು ಕೊಟ್ಟಿರುವುದು ತನಿಖೆಯಿಂದ ದೃಢ ಪಟ್ಟಿದೆ.
ಕುಂದಾಪುರದ ಪ್ರಶಾಂತ ಮೊಗವೀರ ಎಂಬ ಜೀವಾವಧಿ ಶಿಕ್ಷೆಗೊಳಗಾದ ಕೈದಿ ಜೈಲಿನಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳ ಕುರಿತು ಮೊಬೈಲ್ ನಲ್ಲಿ ಚಿತ್ರೀಕರಿಸಿ ಮಂಗಳೂರು, ಉಡುಪಿ, ಕುಂದಾಪುರ ಪತ್ರಕರ್ತರಿಗೆ ಮತ್ತು ತಮ್ಮ ಸಂಪರ್ಕಗಳಿಗೆ ಶೇರ್ ಮಾಡಿದ್ದರು. ಜೈಲಿನಲ್ಲಿನ ಸಿಸಿಟಿವಿ ಕ್ಯಾಮೆರಾಗಳು ಮತ್ತು ಮೊಬೈಲ್ ಫೋನ್ ಗಳು ಜೈಲಿನ ಒಳ ಆವರಣದಲ್ಲಿ ಕಾರ್ಯ ನಿರ್ವಹಿಸದಂತೆ ಅಳವಡಿಸಿರುವ ಜಾಮರ್ ಗಳು ಸುಮಾರು ಎರಡು ವರುಷದಿಂದ ಕಾರ್ಯ ನಿರ್ವಹಿಸದಿರುವುದು ಮತ್ತು ಜೈಲಿನಲ್ಲಿ ಕೈದಿಗಳು ಹೊರಗೆ ದೊರೆಯುವ ವಸ್ತು ಸೌಲಭ್ಯಗಳನ್ನು ಬಳಸುತ್ತಿರುವದು ಮುಂತಾದವುಗಳನ್ನು ಚಿತ್ರೀಕರಿಸಿದ್ದರು. ಈ ದೃಶ್ಯಗಳು ವೈರಲ್ ಆಗಿ ಜೈಲ್ ತೀವ್ರ ಟೀಕೆಗೆ ಒಳಗಾದಾಗ ಜೈಲಿನ ಉಪ ವರಿಷ್ಠಾಧಿಕಾರಿ ಕೆ ಶಹಾಬುದ್ದೀನ ಅವರು ಮೊಗವೀರ ಅವರು ಜೈಲಿನ ಕಾನೂನು ಉಲ್ಲಂಘಿಸಿದ್ದಾರೆಂದು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪೊಲೀಸರು ಮತ್ತು ಜೈಲು ಇಲಾಖೆ ನಡೆಸಿದ ತನಿಖೆಯಿಂದ ಮೊಗವೀರ ಬಿಡುಗಡೆ ಮಾಡಿದ ವಿಡಿಯೋದಲ್ಲಿರುವುದು ನಿಜವೆಂದು ಸಾಬೀತಾಗಿದ್ದರಿಂದ ಇಬ್ಬರನ್ನು ಸೇವೆಯಿಂದ ಅಮಾನತ್ತು ಮಾಡಲಾಗಿದೆ. ಕಾರಾಗೃಹ ಇಲಾಖೆಯ ಎಡಿಜಿಪಿ ಮಾಲಿನಿ ಕೃಷ್ಣಮೂರ್ತಿ ಅವರ ಆದೇಶದ ಮೇರೆಗೆ ಕಾರಾಗೃಹ ಇಲಾಖೆಯ ಉತ್ತರ ವಲಯದ ಉಪ ಮಹಾನಿರೀಕ್ಷಿಕ ಟಿ ಪಿ ಶೇಷ ಅವರು ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ.
ಈ ವಿಷಯ ಬಹಿರಂಗ ಪಡಿಸಿದ ಮೊಗವೀರ 2014 ರಲ್ಲಿ ಕುಂದಾಪುರದಲ್ಲಿ ವ್ಯಕ್ತಿಯೊಬ್ಬರ ಕೊಲೆ ಮಾಡಿ ಜೀವಾವಧಿ ಶಿಕ್ಷೆಗೆ ಒಳಗಾಗಿ ಫೆಬ್ರವರಿ 22, 2018 ರಿಂದ ಬೆಳಗಾವಿ ಜೈಲಿನಲ್ಲಿದ್ದಾನೆ.
ಬೆಳಗಾವಿ ಸೆರೆಮನೆ ಇತ್ತೀಚಿಗೆ ರಾಷ್ಟ್ರ ಮಟ್ಟದ ಗಮನ ಸೆಳೆದಿದೆ. ಕೊಲೆ ಮಾಡಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಉಡುಪಿಯ ಜಯೇಶ ಪೂಜಾರಿ ಎಂಬ ಕೈದಿಯು ಜಮ್ಮು ಕಾಶ್ಮೀರ ಉಗ್ರವಾದಿ ಸಂಘಟನೆಯ ಸದಸ್ಯ ಬಶೀರುದ್ದೀನ ನೂರಹ್ಮದ ಅಲಿಯಾಸ್ ಆಫ್ಸರ ಪಾಷಾ ಜೊತೆ ಸೇರಿ ಕೇಂದ್ರ ಸಚಿವ ನಿತಿನ್ ಗಡಕರಿ ಅವರ ಮಹಾರಾಷ್ಟ್ರದ ನಾಗಪುರನಲ್ಲಿರುವ ಅವರ ಸಾರ್ವಜನಿಕ ಸಂಪರ್ಕ ಕಚೇರಿಗೆ ಜೈಲಿನಿಂದಲೇ ಮೂರು ಬಾರಿ ಫೋನ್ ಮಾಡಿ 100 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಕೊಡದೇ ಇದ್ದರೆ ಸಚಿವರನು ಕೊಲೆ ಮಾಡುವ ಬೆದರಿಕೆಯನ್ನು ಹಾಕಿದ್ದರು.
ಉಗ್ರವಾದಿ ಪಾಷಾ ಸಂಪರ್ಕಕ್ಕೆ ಬಂದ ಪೂಜಾರಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ತನ್ನ ಹೆಸರನ್ನು ಶಾಕೀರ ಹುಸೇನ್ ಎಂದೂ ಬದಲಿಸಿಕೊಂಡಿದ್ದ. ಸಚಿವ ಗಡ್ಕರಿ ಕಚೇರಿಗೆ ಹಣಕ್ಕಾಗಿ ಕರೆಮಾಡಿದ್ದ ಈತ, ತಾನು ದಾವೂದ ಇಬ್ರಾಹಿಂ ಗುಂಪಿನ ಸದಸ್ಯನೆಂದು ಹೇಳಿಕೊಂಡು, ಬೆಂಗಳೂರಿನಲ್ಲಿರುವ ವ್ಯಕ್ತಿಯ ಹೆಸರು ಹೇಳಿ ಅವರಿಗೆ 100 ಕೋಟಿ ರೂಪಾಯಿ ತಲುಪಿಸಲು ಸೂಚಿಸಿ, ತಾನು ಕರ್ನಾಟಕದ ಬೆಳಗಾವಿಯಿಂದ ಕರೆ ಮಾಡಿರುವುದಾಗಿ ತಿಳಿಸಿದ್ದ. ಪೂಜಾರಿ ಅಲಿಯಾಸ್ ಶಾಕೀರ ಹುಸೇನ್ ಮತ್ತು ಪಾಷಾ ಉಗ್ರವಾದಿ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವುದು ಕಂಡು ಬಂದಿರುವುದರಿಂದ ಇಬ್ಬರನ್ನೂ ರಾಷ್ಟ್ರೀಯ ಭದ್ರತಾ ದಳ ವಶಕ್ಕೆ ಪಡೆದಿದೆ.
ಇಷ್ಟಲ್ಲದೇ ಕೊಲೆ ಮಾಡಿದ ಶಿಕ್ಷೆಗೆ ಗುರಿಯಾಗಿರುವ ಹುಬ್ಬಳ್ಳಿಯ 40 ವರುಷದ ಶಂಕರಪ್ಪ ಭಜಂತ್ರಿ ಮತ್ತು ಮಂಡ್ಯದ 21-ವರುಷದ ಸಾಯಿಕುಮಾರ ಎಂಬವರ ಮಧ್ಯೆ ಕಳೆದ ತಿಂಗಳು ಜೈಲಿನಲ್ಲಿ ಹೊಡೆದಾಟವಾಗಿತ್ತು. ಆಗ ಶಂಕಪ್ಪ ತಾನು ಧರಿಸಿದ್ದ ಜೈಲಿನ ಸಮವಸ್ತ್ರದಲ್ಲಿ ತಾನು ಅಡಗಿಸಿಟ್ಟಿದ್ದ ಮೋಳೆಯೊಂದನ್ನು ತೆಗೆದು ಸಾಯಿಕುಮಾರನ ಮೇಲೆ ಹಲ್ಲೆ ಮಾಡಿದ್ದಾನೆ. ಸಾಯಿಕುಮಾರನ ತಲೆಗೆ ಮತ್ತು ಕಿವಿಗೆ ಗಾಯವಾಗಿ ಆತ ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.