ಹುಕ್ಕೇರಿ, 22: ತಾಲೂಕಿನ ಬೆನಕನಹೊಳಿ ಗ್ರಾಮದ ಬಳಿ ಸಾರಿಗೆ ಬಸ್ ಮೇಲೆ ಕಲ್ಲು ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಬೆನಕನಹೊಳಿ ಗ್ರಾಮದ ಪರುಶರಾಮ ನಾಯಕ (24),ಬಸವರಾಜ ಶಿಂಧೆ (26) ಬಂಧಿತರಾಗಿದ್ದು ಇಬ್ಬರೂ ಗೋವಾದಲ್ಲಿ ಕೆಲಸ ಮಾಡುತ್ತಾರೆ.
ಗುರುವಾರ ರಾತ್ರಿ ಹುಕ್ಕೇರಿಯಿಂದ ಬೆಳಗಾವಿಗೆ ಹೊರಟಿದ್ದ ಸಾರಿಗೆ ಬಸ್ ಸಂಖ್ಯೆ KA 22 G 1027 ಹುಕ್ಕೇರಿ ತಾಲೂಕಿನ ಬೆನಕನಹೊಳಿ ಗ್ರಾಮದ ಬಳಿ ಬರುತ್ತಿದ್ದಂತೆ ಕಿಡಿಗೇಡಿಗಳು ಚಲಿಸುತ್ತಿದ್ದ ಬಸ್ಸಿನ ಮೇಲೆ ಕಲ್ಲು ಎಸೆದಿದ್ದರು. ಆಗ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಹುಕ್ಕೇರಿ ಅಗ್ನಿಶಾಮಕದಳದ ವಾಹನ ಚಾಲಕ 55 ವರ್ಷದ ರಮೇಶ ಚಿವಟೆ ಎಂಬವರ ತಲೆಗೆ ಗಾಯವಾಗಿದ್ದು, ಅವರು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗಿತ್ತು.
ಯಮಕನಮರಡಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಗಾಯಾಳು ಪ್ರಯಾಣಿಕ ರಮೇಶ ಇವರನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಿದ್ದರು. ಈ ಘಟನೆ ತಿಳಿದ ಕೂಡಲೇ ಬೆಳಗಾವಿ ಜಿಲ್ಲಾ ಪೊಲೀಸ ವರಿಷ್ಠ ಭೀಮಾಶಂಕರ ಗುಳೇದ ಅವರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದರು.
ಈ ಕುರಿತು ಯಮಕನಮರಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ಎಸ್ ಪಿ ತಿಳಿಸಿದ್ದಾರೆ.