ನಾಗಪುರ: ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವೆ ವಿವಾದವಿರುವ ಗಡಿ ಪ್ರದೇಶಗಳನ್ನೆಲ್ಲ ಕೇಂದ್ರಾಡಳಿತ ಪ್ರದೇಶ ಎಂದು ಕೇಂದ್ರ ಸರ್ಕಾರ ಘೋಷಿಸಬೇಕು ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ ಠಾಕ್ರೆ ಒತ್ತಾಯಿಸಿದ್ದಾರೆ.
ಗಡಿ ವಿವಾದ ಕುರಿತು ಮಹಾರಾಷ್ಟ್ರ ವಿಧಾನ ಪರಿಷತ್ತಿನಲ್ಲಿ ಅವರು ಮಾತನಾಡಿದರು. ಇದು ಕೇವಲ ಭಾಷೆ ಅಥವಾ ಗಡಿಗೆ ಸಂಬಂಧಿಸಿದ್ದಲ್ಲ, ಮಾನವೀಯತೆಗೆ ಸಂಬಂಧಿಸಿದ ವಿಷಯವಾಗಿದೆ ಎಂದು ಹೇಳಿದ್ದಾರೆ.
ಗಡಿ ಗ್ರಾಮಗಳಲ್ಲಿ ಮರಾಠಿಗರ ಅವರ ಭಾಷೆ, ಜೀವನಶೈಲಿ ಮರಾಠಿಯದ್ದಾಗಿದೆ. ಈಗ ವಿಷಯ ಸುಪ್ರೀಮ ಕೋರ್ಟನಲ್ಲಿರುವ ಕಾರಣ ಸದ್ಯ ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸಬೇಕು ಎಂದು ಆಗ್ರಹಿಸಿದರು.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರು ಗಡಿ ವಿವಾದ ಕುರಿತು ತಮ್ಮ ಸರ್ಕಾರದ ನಿಲುವು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.
ಮಹಾರಾಷ್ಟ್ರದ ಜೊತೆಗೆ ವಿಲೀನಗೊಳಿಸಿ ಎಂದು ಬೆಳಗಾವಿ ಮಹಾನಗರಪಾಲಿಕೆ ನಿರ್ಣಯ ಅಂಗೀಕರಿಸಿದರೆ ಅದರ ವಿರುದ್ಧವೇ ಕ್ರಮ ಜರುಗಿಸಲಾಗುತ್ತದೆ. ಕೇಂದ್ರ ಸರ್ಕಾರ ಈ ವಿಷಯದಲ್ಲಿ ರಾಜ್ಯದ ರಕ್ಷಣೆಗೆ ಬರಬೇಕು ಎಂದು ಸಲಹೆ ಮಾಡಿದರು.
ಮಹಾರಾಷ್ಟ್ರ ಗಡಿಯ ಕೆಲ ಗ್ರಾಮ ಪಂಚಾಯತಿಗಳು ತೆಲಂಗಾಣ ಮತ್ತು ಕರ್ನಾಟಕದ ಜೊತೆ ತಮ್ಮನ್ನು ವಿಲೀನಗೊಳಿಸಲು ಕೋರಿ ನಿರ್ಣಯ ಅಂಗೀಕರಿಸಿವೆ. ಅವುಗಳ ವಿರುದ್ಧ ಕ್ರಮ ಜರುಗಿಸುವ ಧೈರ್ಯ ಮಹಾರಾಷ್ಟ್ರದ ಮುಖ್ಯಮಂತ್ರಿಗೆ ಇದೆಯೇ ಎಂದು ಉದ್ಧವ ಪ್ರಶ್ನಿಸಿದರು.