ಕೋಲಕತ್ತಾ, ೧೭ : ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ವೇದಿಕೆಯ ಮೇಲೆಯೇ ಹಠಾತ್ ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ. ತಕ್ಷಣವೇ ವೈದ್ಯರು ಅವರನ್ನು ತಪಾಸಣೆ ನಡೆಸಿ, ಚಿಕಿತ್ಸೆ ನೀಡಲಾಗುತ್ತಿದೆ.
ಚತುಷ್ಪಥ ಎಲಿವೇಟೆಡ್ ರಸ್ತೆ ನಿರ್ಮಾಣ ಕಾಮಗಾರಿ ಸೇರಿದಂತೆ 1,206 ಕೋಟಿ ರೂಪಾಯಿ ವೆಚ್ಚದ ಮೂರು ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ನಿತಿನ್ ಗಡ್ಕರಿ ಭಾಗವಹಿಸಿದ್ದರು. ಈ ಕಾರ್ಯಕ್ರಮದ ಮಧ್ಯದಲ್ಲೇ ವೇದಿಕೆ ಮೇಲೆ ಅವರು ಏಕಾಏಕಿ ಅಸ್ವಸ್ಥರಾದರು.
ಅನಾರೋಗ್ಯ ಉಂಟಾದ ಹಿನ್ನೆಲೆಯಲ್ಲಿ ಕೇಂದ್ರ ಸಚಿವರಿಗೆ ಗ್ರೀನ್ ರೂಂನಲ್ಲಿ ಪ್ರಥಮ ಚಿಕಿತ್ಸೆ ನೀಡಲಾಯಿತು. ಬಳಿಕ ಡಾರ್ಜಿಲಿಂಗ್ನ ಬಿಜೆಪಿ ಸಂಸದರ ಮನೆಯಲ್ಲೇ ಗಡ್ಕರಿ ಅವರಿಗೆ ಚಿಕಿತ್ಸಾ ವ್ಯವಸ್ಥೆ ಮಾಡಲಾಗಿತ್ತು ಎಂದು ತಿಳಿದು ಬಂದಿದೆ.
ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಅನಾರೋಗ್ಯದ ಸುದ್ದಿ ಕೇಳಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಳವಳ ವ್ಯಕ್ತಪಡಿಸಿದ್ದಾರೆ. ನಿತಿನ್ ಗಡ್ಕರಿ ಅವರ ಚಿಕಿತ್ಸೆಯಲ್ಲಿ ಯಾವುದೇ ತೊಂದರೆಯಾಗದಂತೆ ಎಲ್ಲ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆಯೂ ಸೂಚಿಸಿದ್ದಾರೆ.