ಬೆಳಗಾವಿ : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ವಿದ್ಯಾಶಂಕರ ಅವರನ್ನು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿಯಾಗಿ ನೇಮಕ ಮಾಡಲಾಗಿದೆ.
ವಿಶ್ವವಿದ್ಯಾಲಯಗಳ ಕುಲಾಧಿಪತಿಗಳೂ ಆಗಿರುವ ರಾಜ್ಯಪಾಲ ಥಾವರ ಚಂದ ಗೆಹ್ಲೋಟ್ ತಾವು ನೇಮಕ ಮಾಡಿದ್ದ ನಾಲ್ಕು ಸದಸ್ಯರ ಆಯ್ಕೆ ಸಮಿತಿ ವಿದ್ಯಾಶಂಕರ, ರಾಷ್ಟ್ರೀಯ ತಾಂತ್ರಿಕ ಸಂಸ್ಥೆಯ ನಿರ್ದೇಶಕ ಗೋಪಾಲ ಮುಗರೈ ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಆನಂದ ದೇಶಪಾಂಡೆಯವರನ್ನು ಆಯ್ಕೆ ಮಾಡಿತ್ತು.
ಮೈಸೂರು ವಿಶ್ವವಿದ್ಯಾಲಯದ ಸಿನೆಟ್ ಸದಸ್ಯರಾಗಿದ್ದ, ರಾಜ್ಯ ಒಕ್ಕಲಿಗರ ಸಂಘದ ಮಾಜಿ ಕಾರ್ಯದರ್ಶಿಯೂ ಆಗಿದ್ದ ಮಹದೇವ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಭ್ರಷ್ಟಾಚಾರದ ಆರೋಪ ಹೊರಿಸಿ ಪ್ರಕರಣ ದಾಖಲಿಸಿದ್ದಾರೆ.
ಅಲ್ಲದೇ ವಿದ್ಯಾಶಂಕರ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದು, ಈ ಪ್ರಕರಣ ತಾವು ವಿಶ್ವೇಶ್ವರಯ್ಯ ವಿಶ್ವವಿದ್ಯಾಲಯಕ್ಕೆ ಕುಲಪತಿಯಾಗಲು ಅಡ್ಡಿಯಾಗುತ್ತದೆ ಎಂಬ ಆತಂಕದಿಂದ ಆ ಮಹಿಳೆಯ ಪತಿಯೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಸಂಧಾನಕ್ಕೆ ಪ್ರಯತ್ನಿಸಿದ ಆಡಿಯೋ ವನ್ನೂ ಮಹದೇವ ಬಿಡುಗಡೆ ಮಾಡಿದ್ದಾರೆ. 44 ನಿಮಿಷಗಳ ಈ ಆಡಿಯೋ ಸಂಭಾಷಣೆ ವೈರಲ್ ಗೊಂಡಿದೆ.