ಬೆಂಗಳೂರು, ೪: ಬಿಜೆಪಿ ಎಸ್ಸಿ ಮೋರ್ಚಾದ ಮುಖಂಡ ಪೃಥ್ವಿ ಸಿಂಗ್ ಅವರ ಮೇಲೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಸಹೋದರ, ಎಂಎಲ್ಸಿ ಚನ್ನರಾಜ ಹಟ್ಟಿಹೊಳಿ ಅವರ ಗನ್ಮ್ಯಾನ್ ಮತ್ತು ಸಹಚರರು ಹಲ್ಲೆ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ.
ಬೆಳಗಾವಿಯಲ್ಲಿ ಪತ್ರಕರ್ತರೊಂದಿಗೆ ಅವರು ಮಾತನಾಡಿದರು. ದಲಿತ ಮುಖಂಡ, ಬಿಜೆಪಿ ಎಸ್ಸಿ ಮೋರ್ಚಾದ ಮುಖಂಡ ಪೃಥ್ವಿ ಸಿಂಗ್ ಅವರ ಮನೆಯ ಬಳಿ ಈ ಹಲ್ಲೆ ನಡೆದಿದೆ. ಈ ಸಂಬಂಧ ಲಕ್ಷ್ಮಿ ಹೆಬ್ಬಾಳ್ಕರ ಅವರ ಸಹೋದರ, ಇತರ ಅಪರಾಧಿಗಳನ್ನು ಕೂಡಲೇ ಬಂಧಿಸಬೇಕು. ಇವತ್ತು ರಾತ್ರಿಯೇ ಅವರನ್ನು ಬಂಧಿಸಿ ಎಂದು ಅವರು ಒತ್ತಾಯಿಸಿದರು.
ಇಲ್ಲಿನ ಪೊಲೀಸ್ ವ್ಯವಸ್ಥೆ ಬಗ್ಗೆ ನಮಗೆ ವಿಶ್ವಾಸ ಇಲ್ಲ ಎಂದು ಪೃಥ್ವಿ ಸಿಂಗ್ ಹೇಳಿದ್ದಾರೆ. ಮನೆಯವರಿಗೆ ರಕ್ಷಣೆ ಕೊಡಿಸಿ ಎಂದು ಕೋರಿದ್ದಾರೆ. ಈ ಘಟನೆಯನ್ನು ಮುಖ್ಯಮಂತ್ರಿಗಳು ಗಂಭೀರವಾಗಿ ಪರಿಗಣಿಸಬೇಕು. ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ಯಾವ ಕಾರಣಕ್ಕಾಗಿ ಹೀಗಾಗಿದೆ ಎಂಬ ಪ್ರಶ್ನೆ ಇದಲ್ಲ. ಆಡಳಿತ ಪಕ್ಷದ ವಿಧಾನ ಪರಿಷತ್ ಸದಸ್ಯ, ಹಾಲಿ ಸಚಿವರ ಸಹೋದರನಿಂದ ಮಾರಣಾಂತಿಕ ಹಲ್ಲೆ ನಡೆದರೆ ಹೇಗೆ ಎಂದು ಅವರು ಪ್ರಶ್ನಿಸಿದರು.
ಗುಲ್ಬರ್ಗದಲ್ಲೂ ಬಿಜೆಪಿ ಪರಾಜಿತ ಅಭ್ಯರ್ಥಿ ಮಣಿಕಂಠ ರಾಠೋಡ ಮೇಲೆ ಹಲ್ಲೆ ನಡೆದಿತ್ತು. ಇಂಥ ಘಟನೆ ಇಲ್ಲಿ ಮರುಕಳಿಸಿದೆ ಎಂದು ಆಕ್ಷೇಪಿಸಿದರು.
ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ಈ ರೀತಿ ಹಲ್ಲೆ ಮಾಡುವುದು ಸರಿಯಲ್ಲ. ಚುನಾವಣೆ ಬರುತ್ತವೆ ಹೋಗುತ್ತವೆ, ಸಹೋದರತ್ವ ಕಳಕೊಳ್ಳಬಾರದು ಎಂದರು.
ಇದಕ್ಕೂ ಮೊದಲು ವಿಜಯೇಂದ್ರ ಅವರು ಪೃಥ್ವಿ ಸಿಂಗ್ ಅವರು ಚಿಕಿತ್ಸೆ ಪಡೆಯುತ್ತಿರುವ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ, ವಿಚಾರಿಸಿದರು.