ಬೆಂಗಳೂರು: ರಾಜ್ಯದ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರ ಸರ್ಕಾರಿ ನಿವಾಸಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಹಲವು ಮುಖಂಡರೊಂದಿಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಶಿಕಾರಿಪುರದಲ್ಲಿ ಹೊಸದಾಗಿ ನಿರ್ಮಾಣವಾಗಲಿರುವ ಕುಟ್ರಳ್ಳಿ ಟೋಲ್ನಿಂದ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಯ ಬಗ್ಗೆ ಚರ್ಚೆ ನಡೆಸಿದ್ದಾರೆ.
ಭೇಟಿ ಬಳಿಕ ಮಾತನಾಡಿದ ವಿಜಯೇಂದ್ರ, ನಮ್ಮ ಕ್ಷೇತ್ರದ ಮುಖಂಡರೊಂದಿಗೆ ಸಚಿವರನ್ನು ಭೇಟಿ ಮಾಡಿದ್ದೇವೆ. ನಮ್ಮ ಜಿಲ್ಲೆಯಲ್ಲಿ ಎರಡು ಹೈವೇ ಟೋಲ್ಗಳು ಬಂದಿವೆ. ಇದರಿಂದ ಮೂರು ಜಿಲ್ಲೆಗಳ ಜನರಿಗೆ ಸಮಸ್ಯೆ, ಬಡವರಿಗೆ ತೊಂದರೆ ಆಗುತ್ತಿದೆ. ಟೋಲ್ ಸ್ಥಳಾಂತರ ಮಾಡುವಂತೆ ಒತ್ತಾಯಿಸಿದ್ದೇವೆ. ಸಚಿವರು ಅಧಿಕಾರಿಗಳ ಸಭೆ ಕರೆದು ಚರ್ಚಿಸುತ್ತೇನೆ ಎಂದಿದ್ದಾರೆ ಎಂದು ತಿಳಿಸಿದರು.
ಪ್ರತ್ಯೇಕ ಮಾತುಕತೆ:
ಈ ಭೇಟಿಯ ಸಮಯದಲ್ಲೇ ಜಾರಕಿಹೊಳಿ ಜೊತೆ ವಿಜಯೇಂದ್ರ ಪ್ರತ್ಯೇಕ ಮಾತುಕತೆ ನಡೆಸಿದ್ದಾರೆ. ಮನವಿ ಸ್ವೀಕಾರದ ಬಳಿಕ ನಿಮ್ಮ ಜೊತೆಗೆ ಮಾತುಕತೆ ನಡೆಸಬೇಕು ಬನ್ನಿ ಸಾರ್ ಎಂದು ವಿಜಯೇಂದ್ರ ಅವರು ಸತೀಶ ಅವರನ್ನು ಕರೆದರು. ಆಗ ಸತೀಶ ಜಾರಕಿಹೊಳಿ ಮತ್ತು ವಿಜಯೇಂದ್ರ ಒಂದು ಗಂಟೆ ಕಾಲ ಪ್ರತ್ಯೇಕ ಮಾತುಕತೆ ನಡೆಸಿದ್ದಾರೆ.