ವಿಜಯಪುರ: ಹೆಚ್ಚುವರಿಯಾಗಿ ಇಟ್ಟು ಕೊಂಡಿದ್ದ ಮತಯಂತ್ರಗಳನ್ನು ಮತ್ತು ವಿವಿ ಪ್ಯಾಟ್ ಗಳನ್ನು ಮತ ಕೇಂದ್ರದಿಂದ ಬೇರೆ ಕಡೆ ಸಾಗಿಸುವದನ್ನು ಕಂಡ ಗ್ರಾಮಸ್ಥರು ಅವುಗಳನ್ನು ಒಡೆದು, ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ಪ್ರಕರಣ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮಸಬಿನಾಳ ಗ್ರಾಮದಲ್ಲಿ ಜರುಗಿದೆ.
ಕಾಯ್ದಿರಿಸಲಾಗಿದ್ದ ಹೆಚ್ಚುವರಿ ಮತ ಯಂತ್ರಗಳನ್ನು ಬಿಸನಾಳ ಮತ್ತು ಡೋಣುರ ಗ್ರಾಮಗಳಿಂದ ವಿಜಯಪುರಕ್ಕೆ ತೆಗೆದುಕೊಂಡು ಕಾರಿನಲ್ಲಿ ತರುತ್ತಿದ್ದಾಗ ಮಸಬಿನಾಳನಲ್ಲಿ ಕಂಡ ಗ್ರಾಮಸ್ಥರು, ಅವನ್ನು ತಡೆದು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂದು ಸಂಶಯಗೊಂಡು ಇವಿಎಂ ಯಂತ್ರ ಹಾಗೂ ವಿವಿಪ್ಯಾಟ್ ಯಂತ್ರಗಳನ್ನು ಒಡೆದು ಹಾಕಿದ್ದಾರೆ.
ಅರ್ಧಕ್ಕೆ ಮತದಾನ ಕಾರ್ಯ ಸ್ಥಗಿತಗೊಳಿಸಿ ವಾಪಸ್ ಒಯ್ಯಲಾಗುತ್ತಿದೆ ಎಂದು ತಪ್ಪು ಭಾವಿಸಿದ್ದು ಈ ಘಟನೆಗೆ ಕಾರಣ ಎನ್ನಲಾಗಿದೆ. ಸದ್ಯ ಮಸಬಿನಾಳ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣ ಆಗಿದ್ದು, ಮತಯಂತ್ರ ಕೆಟ್ಟಲ್ಲಿ ಬಳಕೆ ಎಂದು ರಿಸರ್ವ್ ಇಡಲಾಗಿದ್ದ ಇವಿಎಂ, ವಿವಿಪ್ಯಾಟ್ ಯಂತ್ರಗಳನ್ನು ವಾಪಸ್ ತೆಗೆದುಕೊಂಡು ಹೋಗುವುದನ್ನು ಗಮನಿಸಿದ ಜನರು ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ. ಆಗ ತಡಬಡಿಸಿದ ಸಿಬ್ಬಂದಿಯಿಂದ ಸರಿಯಾದ ಉತ್ತರ ಸಿಗದಿದ್ದಾಗ ಸಂಶಯಗೊಂಡ ಜನರು ಮತಯಂತ್ರ ಒಡೆದು ಹಾಕಿದ್ದಾರೆ. ಗ್ರಾಮಸ್ಥರು ಮತ ಯಂತ್ರ ಒಡೆದು ಹಾಕಿದ್ದಲ್ಲದೇ ಅಧಿಕಾರಿಗಳ ಕಾರನ್ನು ಕೂಡ ಜಖಂಗೊಳಿಸಿದ್ದಾರೆ. ಜೊತೆಗೆ ಚುನಾವಣಾ ಸಿಬ್ಬಂದಿಯನ್ನೂ ಥಳಿಸಿದ್ದಾರೆ ಎಂದು ಹೇಳಲಾಗಿದೆ.