ಮಹಿಳೆ ವಿವಸ್ತ್ರ ಪ್ರಕರಣ : ನೆರವಿಗೆ ಧಾವಿಸದ ಗ್ರಾಮಸ್ಥರಿಗೆ ದಂಡ ವಿಧಿಸಬೇಕು

A B Dharwadkar
ಮಹಿಳೆ ವಿವಸ್ತ್ರ ಪ್ರಕರಣ : ನೆರವಿಗೆ ಧಾವಿಸದ ಗ್ರಾಮಸ್ಥರಿಗೆ ದಂಡ ವಿಧಿಸಬೇಕು

ಬೆಂಗಳೂರು, ೧೯: ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ವಂಟಮುರಿ ಗ್ರಾಮದ ಮಹಿಳೆಯನ್ನು ವಿವಸ್ತ್ರಗೊಳಿಸಿ ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸುತ್ತಿದ್ದಾಗ ನೆರವಿಗೆ ಬಾರದೇ ಅಮಾನವೀಯ ಘಟನೆಯನ್ನು ಅಸಹಾಯಕರಾಗಿ ಮೂಕ ಪ್ರೇಕ್ಷಕರಂತೆ ವೀಕ್ಷಿಸಿದ್ದ ಗ್ರಾಮಸ್ಥರ ಕ್ರಮವನ್ನು ರಾಜ್ಯ ಮುಖ್ಯ ನ್ಯಾಯಾಲಯ ಖಂಡಿಸಿ ಅವರಿಗೆ “ದಂಡ ರೂಪದಲ್ಲಿ ಕಂದಾಯ” ಪಡೆಯಲು ಸೂಚಿಸಿದೆ.

ಸಹಾಯಕ್ಕಾಗಿ ಕೂಗಿ ಗೋಳಾಡುತ್ತಿದ್ದ ಮಹಿಳೆಯ ನೆರವಿಗೆ ಧಾವಿಸದ ಗ್ರಾಮಸ್ಥರಿಂದ ಪರಿಹಾರದ ರೂಪದಲ್ಲಿ ಹಣ ಸಂಗ್ರಹಿಸಬೇಕು ಎಂದು ಕರ್ನಾಟಕ ಹೈಕೋರ್ಟ‌ ಸರ್ಕಾರಕ್ಕೆ ಮೌಖಿಕ ಸಲಹೆ ನೀಡಿದೆ. ಅಲ್ಲದೇ ಸಾಮೂಹಿಕ ಜವಾಬ್ದಾರಿ ನಿಗದಿಪಡಿಸಬೇಕು ಎಂದೂ ಅಭಿಪ್ರಾಯಪಟ್ಟಿದೆ.

ಮಹಿಳೆಯ ವಿವಸ್ತ್ರ ಘಟನೆ ಬಗ್ಗೆ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ‌ ಅವರ ನೇತೃತ್ವದ ವಿಭಾಗೀಯ ಪೀಠ ಮೌಖಿಕವಾಗಿ ಅಭಿಪ್ರಾಯಪಟ್ಟಿತು ಎಂದು ಬಾರ್‌ ಆಂಡ್ ಬೆಂಚ್‌ ವರದಿ ಮಾಡಿದೆ.

ಮುಖ್ಯ ನ್ಯಾಯಮೂರ್ತಿ ಪ್ರಸನ್ನ ವರಾಳೆ ಅವರು, ಅಡ್ವೊಕೇಟ‌ ಜನರಲ್‌ ಕೆ ಶಶಿಕಿರಣ‌ ಶೆಟ್ಟಿ ಅವರನ್ನು ಉದ್ದೇಶಿಸಿ “ಈ ಘಟನೆಯಲ್ಲಿ ಗ್ರಾಮಸ್ಥರು ಮೂಕ ಪ್ರೇಕ್ಷಕರಾಗಿದ್ದಾರೆ. ಗ್ರಾಮದ ಪ್ರತಿಯೊಬ್ಬರಿಂದ ತೆರಿಗೆ ರೂಪದಲ್ಲಿ ಒಂದಷ್ಟು ಹಣ ಸಂಗ್ರಹಿಸಿ, ಜನರಿಗೆ ಇದರಿಂದ ಸಂದೇಶ ರವಾನೆಯಾಗಲಿ ಎಂದರು.

ಆಗ ನ್ಯಾಯಮೂರ್ತಿ ದೀಕ್ಷಿತ‌ ಅವರು “ಸಂದೇಶ ರವಾನೆಯಾಗಬೇಕು. ಗ್ರಾಮದ ಎಲ್ಲರಿಗೂ, ನಿರ್ದಿಷ್ಟವಾಗಿ ತಪ್ಪು ಮಾಡಿದವರು ಹಣ ಪಾವತಿಸುವಂತೆ ಮಾಡಬೇಕು. ಬ್ರಿಟಿಷರ ಕಾಲದಲ್ಲಿ ವಿಲಿಯಮ್‌ ಬೆಂಟಿಂಗ್ ಎಂಬಾತ ಕಳ್ಳತನ ಮಾಡುವವರಿದ್ದ ಗ್ರಾಮಕ್ಕೆ ‘ಪುಂಡ ದಂಡ’ ಎಂಬ ತೆರಿಗೆ ವಿಧಿಸುತ್ತಿದ್ದ. ಅದೇ ರೀತಿಯಲ್ಲಿ ತೆರಿಗೆ ವಿಧಿಸಿದಲ್ಲಿ ಜನರಿಗೆ ಸ್ವಲ್ಪ ಜವಾಬ್ದಾರಿ ಹೆಚ್ಚಾಗುತ್ತದೆ. ಇಂತಹ ಘಟನೆಗಳು ನಡೆಯುತ್ತಿದ್ದ ಸಂದರ್ಭದಲ್ಲಿ ಮೌನವಾಗಿರದೇ ಜನ ಕ್ರಮಕ್ಕೆ ಮುಂದಾಗಬಹುದು ಎಂದರು.

“ಗ್ರಾಮದ ಸಾಕ್ಷರತೆ ಪ್ರಮಾಣವೆಷ್ಟು ? ಸರ್ಕಾರ ಯಾವಾಗಲೂ ಆಲಸಿಯಾಗಿ ವರ್ತಿಸುತ್ತದೆ. ಇಂಥ ಘಟನೆಗಳನ್ನು ನಿಯಂತ್ರಿಸುವುದಾದರೂ ಹೇಗೆ? ನಾವು ನಾಗರಿಕ ಸಮಾಜ ಎಂದು ಹೇಳಿಕೊಳ್ಳುತ್ತೇವೆ. ಇದರಲ್ಲಿ ಗ್ರಾಮಸ್ಥರ ಪಾತ್ರ ಏನಿದೆ? ಈ ಘಟನೆಗೆ ಜನರು ಏಕೆ ಮೂಕಪ್ರೇಕ್ಷಕರಾಗಿದ್ದರು ಎಂಬುದಕ್ಕೆ ಕಾರಣಗಳಿವೆಯೇ? ಅವರು ಪೊಲೀಸ್‌, ನ್ಯಾಯಾಂಗ, ರಾಜಕೀಯ ವ್ಯಕ್ತಿಗಳಿಗೆ ಹೆದರಿದ್ದಾರೆಯೇ?” ಎಂದು ಅವರು ಪ್ರಶ್ನಿಸಿದರು.

ಮುಖ್ಯ ನ್ಯಾಯಮೂರ್ತಿ ಪ್ರಸನ್ನ ವರಾಳೆ ಅವರು, “ಜನರು ಏಕೆ ಅಪರಾಧದ ಬಗ್ಗೆ ಮಾಹಿತಿ ನೀಡುವುದಿಲ್ಲ ಎಂಬ ಸಾಮಾಜಿಕ ಆಯಾವನ್ನು ನಿರ್ಲಕ್ಷಿಸಲಾಗದು. ತಮ್ಮನ್ನು ನ್ಯಾಯಾಂಗ ಪ್ರಕ್ರಿಯೆಯಲ್ಲಿ ಸಿಲುಕಿಸಲಾಗುತ್ತದೆ. ತಮಗೆ ಸೂಕ್ತ ಗೌರವ ಸಿಗುವುದಿಲ್ಲ ಎಂದು ಸಾಕ್ಷಿಗಳು ಹೆದರುತ್ತಾರೆ” ಎಂದು ಹೇಳಿದರು.

ಆಗ ನ್ಯಾ. ದೀಕ್ಷಿತ‌ ಅವರು “ಕೆಲವು ಕಡೆಗಳಲ್ಲಿ ಹೊರತುಪಡಿಸಿ ಪೊಲೀಸ್‌ ಠಾಣೆಗಳಲ್ಲಿ ಸಾಕ್ಷಿಗಳು ಮತ್ತು ಆರೋಪಿಗಳಿಗೆ ವ್ಯತ್ಯಾಸವೇ ಇರುವುದಿಲ್ಲ. ಇದು ಜನರಿಗೆ ಒಪ್ಪಿಗೆಯಾಗುವುದಿಲ್ಲ. ಪೊಲೀಸರ ನಡತೆ, ಅದೇ ರೀತಿ ನ್ಯಾಯಾಲಯಗಳೂ ನಡತೆ ಕೂಡ, ತಮ್ಮನ್ನು ಸೂಕ್ತ ರೀತಿಯಲ್ಲಿ ನಡೆಸಿಕೊಳ್ಳಲಾಗುವುದು ಎನ್ನುವ ವಿಶ್ವಾಸವನ್ನು ಜನರಲ್ಲಿ ಉಂಟು ಮಾಡುತ್ತಿಲ್ಲ. ಪೊಲೀಸರು ತಮ್ಮದು ಬ್ರಿಟಿಷ್‌ ಆಡಳಿತ ಎಂದುಕೊಳ್ಳಬಾರದು” ಎಂದರು.

“ಇಡೀ ಗ್ರಾಮದಲ್ಲಿ ಯಾರೂ ಏಕೆ ಮುಂದೆ ಬರಲಿಲ್ಲ. ಅದು ಏಕೆ ಹಾಗಾಯಿತು. ಈ ವಿಚಾರಗಳನ್ನು ಸಂಗ್ರಹಿಸಬೇಕು. ಇದನ್ನು ಕಾನೂನು ಆಯೋಗಕ್ಕೆ ತಿಳಿಸಬೇಕು. ಅದು ಕಾನೂನು ರೂಪಿಸಲು ಸಲಹೆ ಮಾಡಬಹುದು. ಈ ರೀತಿಯಲ್ಲಿ ಕಾನೂನು ಮುನ್ನಡೆಯುತ್ತದೆ. ಇಲ್ಲವಾದಲ್ಲಿ ಅದು ಜನರ ಕಾನೂನಾಗುವುದಿಲ್ಲ. ಕಾನೂನು ಜನರ ಬದುಕನ್ನು ಆಧರಿಸಿರಬೇಕು. ಆಗ ಅದಕ್ಕೆ ಅರ್ಥಬರುತ್ತದೆ. ಇಲ್ಲವಾದಲ್ಲಿ ಅದು ಅಪರಿಚಿತವಾಗಲಿದೆ” ಎಂದು ನುಡಿದರು.

ವಿಚಾರಣೆಯ ಕೊನೆ ಹಂತದಲ್ಲಿ ಮುಖ್ಯ ನ್ಯಾಯಮೂರ್ತಿಗಳು “ಆರೋಪಿಗಳ ಕ್ರಮಕ್ಕಿಂತ ಅದನ್ನು ನೋಡುತ್ತಾ ಮೂಕರಾಗಿ ನಿಂತಿದ್ದವರ ವರ್ತನೆ ಆತಂಕಕಾರಿ. ಇಲ್ಲಿ ಸಾಮೂಹಿಕ ಜವಾಬ್ದಾರಿಯನ್ನು ನಿಗದಿಪಡಿಸಬೇಕಿದೆ” ಎಂದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.