ಬೆಳಗಾವಿ : ಬುಧವಾರ ರಾತ್ರಿ ಶಿವಬಸವ ನಗರದ ಡಬಲ್ ರಸ್ತೆಯ ಪಕ್ಕದಲ್ಲಿ ನಡೆದ ನಾಗರಾಜ ಗಾಡಿವಡ್ಡರ ಎಂಬವರ ಕ್ರೂರ ಕೊಲೆಗೆ ಸಂಬಂಧಿಸಿದಂತೆ ಬೆಳಗಾವಿ ಪೊಲೀಸರು ಮೂವರು ಸಂಶಯಿತರನ್ನು ವಶಕ್ಕೆ ಪಡೆದು ವಿಚಾರಣೆಯನ್ನು ತೀವ್ರಗೊಳಿಸಿದ್ದಾರೆ ಎಂದು ಗೊತ್ತಾಗಿದೆ.
ಕೊಲೆಯಾದ ಸ್ಥಳದ ಸಮೀಪವಿರುವ ರಾಮನಗರದಲ್ಲಿ ವಾಸವಾಗಿದ್ದ 26 ವರುಷದ ನಾಗರಾಜ ಎಂಬವ ಟೈಲ್ಸ್ ಫಿಟ್ಟಿಂಗ ಮಾಡುವ ಕೆಲಸ ಮಾಡುತ್ತಿದ್ದ. ರಾತ್ರಿ ಸುಮಾರು 8.30 ರ ಹೊತ್ತಿಗೆ ಮನೆಗೆ ಹಿಂದಿರುಗುತ್ತಿದ್ದಾಗ ಒಂದೇ ಬೈಕ್ ನಲ್ಲೇ ಹಿಂದಿನಿಂದ ಬಂದ ಮೂವರು ಹಂತಕರಲ್ಲಿ ಒಬ್ಬ ಕಲ್ಲುಗಳಿಂದ ಮುಖ, ತಲೆಗೆ ಹೊಡೆದು ಕೊಂದು ಹಾಕಿದ್ದು ನಂತರ ಕೂಡಲೇ ಅದೇ ಬೈಕ್ ನಲ್ಲಿ ಪರಾರಿಯಾಗಿದ್ದರು. ನಾಗರಾಜ ಸ್ಥಳದಲ್ಲೇ ಅಸುನೀಗಿದ.
ಮೊಬೈಲ್ನಲ್ಲಿ ಮಾತನಾಡುತ್ತ ಹೋಗುತ್ತಿದ್ದ ನಾಗರಾಜನ ಕೊಲೆ ಮಾಡಲು ಬೈಕ್ ಮೇಲೆ ಬಂದ ಮೂವರು ಆರೋಪಿಗಳು ಹೊಂಚು ಹಾಕಿ ಕಾಯುತ್ತಿದ್ದರು. ಬೈಕ್ನ್ನು ದಾಟಿ ಮುಂದೆ ನಾಗರಾಜ ಹೋಗುತ್ತಿದ್ದಂತೆ ಹಿಂದಿನಿಂದ ಓರ್ವ ಆರೋಪಿ ಕಲ್ಲಿನಿಂದ ಜೋರಾಗಿ ತಲೆಗೆ ಹೊಡೆದಿದ್ದಾನೆ. ಹೊಡೆತದ ರಭಸಕ್ಕೆ ನಾಗರಾಜ ಅಲ್ಲಿಯೇ ಕುಸಿದು ಬಿದ್ದಿದ್ದಾನೆ. ಬಳಿಕ ಆರೇಳು ಬಾರಿ ಮತ್ತೆ ಕಲ್ಲಿನಿಂದ ನಾಗರಾಜನ ತಲೆಗೆ ಹೊಡೆದು ಬಳಿಕ ಮೂವರು ಆರೋಪಿಗಳು ಬೈಕ್ ಮೇಲೇರಿ ಅಲ್ಲಿಂದ ಪರಾರಿಯಾಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಘಟನೆ ಬೆಳಗಾವಿ ಜನರನ್ನು ಬೆಚ್ಚಿ ಬೀಳಿಸಿದೆ.
ಬೆಳಗಾವಿ ಡಿಸಿಪಿ ಶೇಖರ್, ಎಸಿಪಿ ಸದಾಶಿವ ಕಟ್ಟಿಮನಿ ಮುಂತಾದವರು ಸ್ಥಳಕ್ಕೆ ಧಾವಿಸಿದ್ದರು. ರಸ್ತೆಯಲ್ಲಿ ಅಳವಡಿಸಿರುವ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಹಂತಕರನ್ನು ಗುರುತಿಸಿ ಬೇಟೆಗೆ ಬಲೆ ಬೀಸಿದ್ದರು. ಅಲ್ಲದೇ ಕೊಲೆಯಾದ ನಾಗರಾಜ ಅವರ ಮನೆಯ ಸದಸ್ಯರನ್ನು ವಿಚಾರಿಸಿ ನಾಗರಾಜ ಅವರಿಗೆ ಯಾರೊಂದಿಗೆ ಭಿನ್ನಾಭಿಪ್ರಾಯ, ವೈಶಮ್ಯ ಎಂದು ತಮ್ಮ ಪ್ರಾಥಮಿಕ ವಿಚಾರಣೆ ನಡೆಸಿದ್ದರು.
ಸಮದರ್ಶಿಯೊಂದಿಗೆ ಮಾತನಾಡಿದ ಬೆಳಗಾವಿ ಪೊಲೀಸ್ ಆಯುಕ್ತ ಸಿದ್ದರಾಮಪ್ಪ ಅವರು, ” ಹಂತಕರು ಯಾರೆಂದು ಗುರುತಿಸಲಾಗಿದೆ. ಶೀಘ್ರವೇ ಅವರನ್ನು ಬಂಧಿಸಲಾಗುವುದು. ವೈಯಕ್ತಿಕ ಕಾರಣಗಳಿಂದ ಈ ಹತ್ಯೆ ಮಾಡಿರಬಹುದು ಎಂಬ ಶಂಕೆ ಇದೆ” ಎಂದು ತಿಳಿಸಿದರು.