ಜನವರಿ 25 ಮತದಾರರ ದಿನ. ಬೇರೆಲ್ಲ ಸರ್ಕಾರಿ ದಿನಗಳ ಹಾಗೆ ಇದೂ ಕಡತದಲ್ಲಿ ಭದ್ರ. ಅಂದು ರಾಜಕೀಯ ಮಂದಿ, ಅಧಿಕಾರಿಗಳು ಭಾಷಣ ಮಾಡುತ್ತಾರೆ. ಮತ್ತೊಂದು ಮತದಾರರ ದಿನ ಬರುವವರೆಗೂ ಅತ್ತ ಯಾರ ಗಮನವೂ ಹೋಗುವುದಿಲ್ಲ. ಇದು ನಮ್ಮಲ್ಲಿನ ಬಹುದೊಡ್ಡ ದುರಂತ. ಈ ಬಾರಿ ಮತದಾರರ ದಿನದ ವೇಳೆಗೆ ಹೊಸ ಕಾರ್ಯಕ್ರಮ ಒಂದನ್ನು ಚುನಾವಣಾ ಆಯೋಗ ಜಾರಿಗೆ ತಂದಿದೆ. ಅದೆಂದರೆ, ಹದಿನೇಳು ವರ್ಷ ತಲುಪಿದವರು ಮುಂದಾಗಿಯೇ ಮತದಾರರಾಗಿ ನೋಂದಾಯಿಸಬಹುದು, ಅವರಿಗೆ ಹದಿನೆಂಟು ತುಂಬುತ್ತಿದ್ದ ಹಾಗೆ ಮತದಾನದ ಹಕ್ಕು ದೊರೆಯುತ್ತದೆ.
ನಮ್ಮಲ್ಲಿ ಚುನಾವಣಾ ಆಯೋಗ ತನ್ನ ನಿಜ ಅಧಿಕಾರ ಬಳಸಿದ್ದು ತೀರಾ ಕಡಿಮೆ. ಟಿ.ಎನ್. ಶೇಷನ್ ಅವರು ಚುನಾವಣಾ ಆಯೋಗದ ಮುಖ್ಯಸ್ಥರಾದಾಗ ಈ ಆಯೋಗ ಏನೆಲ್ಲ ಮಾಡಬಹುದು ಎಂದು ತೋರಿಸಿದ್ದನ್ನು ಬಿಟ್ಟರೆ, ಬಹುಪಾಲು ಆಯೋಗದ ಮುಖ್ಯಸ್ಥರು ಕೇಂದ್ರ ಸರ್ಕಾರದ ಮರ್ಜಿಯಲ್ಲಿ ಕೆಲಸ ಮಾಡಿದವರು. ವರ್ಷಕ್ಕೆ ಮೊದಲೇ ಮತದಾನದ ಹಕ್ಕು ಕೊಡಲು ನಿರ್ಧರಿಸಿರುವ ಆಯೋಗ, ಹಲವು ಕಡೆಯಲ್ಲಿ ಮತದಾರರ ಪಟ್ಟಿಯಿಂದ ಲಕ್ಷ ಲಕ್ಷ ಸಂಖ್ಯೆಯಲ್ಲಿ ಅರ್ಹ ಮತದಾರರ ಹೆಸರುಗಳು ನಾಪತ್ತೆ ಆಗಿರುವ, ಆಗುತ್ತಿರುವ ಬಗ್ಗೆ ಕ್ರಮ ಕೈಗೊಳ್ಳಲು ಮುಂದಾಗುವದಿಲ್ಲ, ಏಕೆಂದರೆ ಅದು ಕೆಲವರಿಗೆ ಇಷ್ಟ ಆಗುವುದಿಲ್ಲ.
ಈಗಿನ ಪರಿಸ್ಥಿತಿಯನ್ನೇ ನೋಡಿ. ದೆಹಲಿಯಲ್ಲಿ ಮುನಿಸಿಪಲ್ ಕಾರ್ಪೋರೇಷನ್ ಚುನಾವಣೆ ನಡೆದು ತಿಂಗಳು ಕಳೆಯುತ್ತಾ ಬಂದಿದೆ. ಅಲ್ಲಿ ಒಬ್ಬ ಮೇಯರ್ ಆಯ್ಕೆ ಮಾಡುವುದು ಸಾಧ್ಯ ಆಗಿಲ್ಲ. ಚುನಾವಣೆ ನಡೆದು ಬಹುಮತ ಗಳಿಸಿದ್ದು ಆಮ್ ಆದ್ಮಿ ಪಾರ್ಟಿ. ಆದರೆ ಫಲಿತಾಂಶ ಬರುತ್ತಿದ್ದಂತೆ, ಕೇಂದ್ರ ಗೃಹ ಸಚಿವರು ದೆಹಲಿ ಮುನಿಸಿಪಾಲಿಟಿಯಲ್ಲಿ ಅಧಿಕಾರ ಹಿಡಿಯುವುದು ತಮ್ಮ ಪಕ್ಷವೇ ಎಂದು ಅಪ್ಪಣೆ ಕೊಡಿಸಿದರು. ಕಳೆದ ಕೆಲವು ದಿನಗಳಿಂದ ಎರಡು ಬಾರಿ ಮೇಯರ್ ಆಯ್ಕೆಗೆ ದಿನ ನಿಗದಿ ಮಾಡಿ ಸಭೆ ಕರೆಯಲಾಗಿದೆ. ಪ್ರತಿ ಬಾರಿಯೂ ಬಿಜೆಪಿ ಸದಸ್ಯರು ಗದ್ದಲ ಎಬ್ಬಿಸಿ ಸಭೆ ನಡೆಯದಂತೆ ನೋಡಿಕೊಂಡಿದ್ದಾರೆ. ಇಲ್ಲಿ ಸೂಕ್ತ ವ್ಯವಸ್ಥೆ ಮಾಡಬೇಕು, ಸಹಜವಾಗಿ ಮೇಯರ್ ಆಯ್ಕೆ ಆಗುವಂತೆ ನೋಡಿಕೊಳ್ಳಬೇಕು ಎಂದು ಆಯೋಗಕ್ಕೆ ಅರಿವು ಬರುವುದು ಸದ್ಯಕ್ಕಂತೂ ಸಾಧ್ಯ ಇಲ್ಲ. ಆದರೆ ಅದೇ ಆಯೋಗದ ಅಧಿಕಾರಿಗಳು ಮತದಾರರ ದಿನದ ಮುನ್ನಾ ದಿನ ಆಕಾಶವಾಣಿ ಮತ್ತು ದೂರದರ್ಶನದಲ್ಲಿ ತಾಸುಗಟ್ಟಲೇ ಸುದೀರ್ಘ ಭಾಷಣ ಮಾಡುತ್ತಾರೆ. ಅವರು ಹಿಂದಿಯಲ್ಲಿ ಮಾಡುವ ಭಾಷಣವನ್ನು ದಕ್ಷಿಣ ಭಾರತದ ಎಲ್ಲ ಆಕಾಶವಾಣಿ ನಿಲಯಗಳೂ ಯಥಾವತ್ತಾಗಿ ಪ್ರಸಾರ ಮಾಡುತ್ತವೆ. ಆಕಾಶವಾಣಿ ಕೇಳುಗರು ಹೆಚ್ಚಾಗಿ ಗ್ರಾಮೀಣ ಪ್ರದೇಶದ ಜನ. ಅವರದಲ್ಲದ ಭಾಷೆಯ ಯಾವುದೇ ಕಾರ್ಯಕ್ರಮ ಬಂದರೆ ಅವರು ರೇಡಿಯೋ ಬಂದ್ ಮಾಡಿ ಸುಮ್ಮನಾಗುತ್ತಾರೆ ಎಂಬ ಕನಿಷ್ಠ ಜ್ಞಾನವೂ ಇಲ್ಲದ ವ್ಯವಸ್ಥೆ ನಮ್ಮಲ್ಲಿ ಇದೆ.
ಚುನಾವಣೆ ಬಂದಾಗ ಮಾತ್ರ ಸಕ್ರಿಯ ಎನಿಸಿಕೊಳ್ಳುವ ಆಯೋಗ ನಿರಂತರ ಕೆಲಸ ಮಾಡಬೇಕು ಮತ್ತು ತನ್ನ ಎಲ್ಲ ಶಕ್ತಿ ಬಳಸಿ ಅನ್ಯಾಯ, ಅಕ್ರಮ ನಡೆಯದಂತೆ ನೋಡಿಕೊಳ್ಳಬೇಕು. ಆದರೆ ಹಾಗೇನೂ ಆಗುವುದಿಲ್ಲ. ಬದಲಿಗೆ ನಡೆಯಬಾರದ ಎಡವಟ್ಟುಗಳು ರಾಜಾರೋಷವಾಗಿ ನಡೆಯುತ್ತವೆ. ಚುನಾವಣೆಗ ನಿಲ್ಲುವ ಅಭ್ಯರ್ಥಿಗಳನ್ನೇ ಗಮನಿಸಿದರೆ ಕ್ರಿಮಿನಲ್ಗಳು, ಕೊಲೆಗಡುಕರು, ಅತ್ಯಾಚಾರ ಮಾಡಿ ಬಂದವರು ಕಾಣಿಸಿಕೊಳ್ಳುತ್ತಾರೆ. ಅಂಥವರು ಚುನಾವಣೆಗೆ ಸ್ಪರ್ಧಿಸದಂತೆ ತಡೆಯುವ ಸಣ್ಣ ಕೆಲಸ ಕೂಡ ಆಯೋಗದಿಂದ ಇದುವರೆಗೆ ಸಾಧ್ಯ ಆಗಿಲ್ಲ. ಮತದಾನ ಮಾಡದೇ ಇರುವುದು ದೊಡ್ಡ ದೋಷ ಎಂದು ಪದೇ ಪದೇ ಕನವರಿಸಲಾಗುತ್ತದೆ. ಆದರೆ ಯಾವುದೇ ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿ ಗಮನಿಸಿದರೆ, ಸಜ್ಜನರು ಯಾರೂ ಇಲ್ಲಿನ ಯಾವೊಬ್ಬನಿಗೂ ಮತ ಕೊಡಲು ಮನಸ್ಸು ಮಾಡುವುದಿಲ್ಲ. ಹಾಗೆಂದು ನೋಟಾ ಒತ್ತಿ ಬಂದರೆ, ಸಜ್ಜನರ ಒಂದು ಮತಕ್ಕೆ ಬದಲಾಗಿ ಅತ್ಯಂತ ಕೆಟ್ಟ ಅಭ್ಯರ್ಥಿ ಪರ ನೂರಾರು ಮತಗಳು ಬಂದಿರುತ್ತವೆ. ನೋಟಾ ಎನ್ನುವುದು ಕೂಡ ಕೇವಲ ಕಣ್ಣೊರೆಸುವ ತಂತ್ರ ಆಗಿ ಉಳಿಯುತ್ತದೆ. ನಮ್ಮಲ್ಲಿ ಕಾನೂನು ಮತ್ತು ನಿಯಮಗಳನ್ನು ಹೇಗೆ ದುರ್ಬಳಕೆ ಮಾಡಿಕೊಳ್ಳಬೇಕೆಂಬ ಸತ್ಸಂಪ್ರದಾಯವೇ ಬೆಳೆದು ಬಂದಿದೆ. ಚುನಾವಣೆಯ ಎಲ್ಲ ನಿಯಮ ಮತ್ತು ಕಾನೂನು ಗಾಳಿಗೆ ತೂರಿ ದೇಶ ಹಾಳು ಮಾಡುವವರೆಲ್ಲ ಚುನಾವಣೆಗಳಲ್ಲಿ ಆರಿಸಿ ಬಂದು, ಜನರನ್ನು ಮಹಾ ಮೂರ್ಖರಾಗಿಸುತ್ತಾರೆ. ಆದರೂ ಆಯೋಗ ಮತದಾರರ ದಿನದಂದು ಸ್ವಲ್ಪವೂ ಅಳುಕಿಲ್ಲದೇ, ತನ್ನ ಹಿರಿಮೆಯನ್ನು ಸಾರುವ ಭಾಷಣಗಳನ್ನು ಬಿತ್ತರಿಸುತ್ತದೆ. ಒಂದು ಮುನಿಸಿಪಲ್ ಕಾರ್ಪೋರೇಷನ್ ಮೇಯರ್ ಆಯ್ಕೆ ಸುಗಮವಾಗಿ ನಡೆಯಲು ಅನುವು ಮಾಡಿಕೊಡದ ಆಯೋಗ ದೇಶದಲ್ಲಿ ಸುಸಾಮರ್ಥ್ಯದ ಜನಪ್ರತಿನಿಧಿಗಳ ಆಯ್ಕೆಗೆ ಶ್ರಮಿಸುತ್ತದೆ ಎಂಬುದು ವಿಚಿತ್ರ.
ಒಂದು ವ್ಯವಸ್ಥೆ ತನ್ನ ಕರ್ತವ್ಯ ನಿರ್ವಹಣೆಯಲ್ಲಿ ವಿಫಲ ಆದಾಗ ಇಡೀ ದೇಶದ ಜನತೆ ತೊಂದರೆಗೆ ಒಳಗಾಗುತ್ತಾರೆ. ನಮ್ಮಲ್ಲಿನ ಬಹುಪಾಲು ವ್ಯವಸ್ಥೆಗಳು ಈಗ ಇರುವುದೇ ಹಾಗೆ. ಸ್ವಲ್ಪ ಮಟ್ಟಿಗೆ ತನ್ನ ಘನತೆ ಉಳಿಸಿಕೊಂಡಿರುವ ಹೈಕೋರ್ಟ ಮತ್ತು ಸುಪ್ರೀಮ ಕೋರ್ಟುಗಳನ್ನು ಕೂಡ ತನ್ನ ಸೂತ್ರದ ಬೊಂಬೆಯಂತೆ ಕುಣಿಸಲು ಪ್ರಯತ್ನಿಸಲಾಗುತ್ತಿದೆಯಾದರೂ ಅದು ಸಾಧ್ಯ ಆಗುತ್ತಿಲ್ಲ. ಎಲ್ಲವನ್ನೂ ಹದಗೆಡಿಸಿರುವಾಗ, ನ್ಯಾಯಾಂಗ ಒಂದು ಮಾತ್ರ ಸ್ವಚ್ಛವಾಗಿ ಏಕಿರಬೇಕು ಎಂಬ ಧೋರಣೆ ಇಲ್ಲಿ ಎದ್ದು ಕಾಣುತ್ತಿದೆ. ಅದಕ್ಕಿಂತ ಹೆಚ್ಚಾಗಿ, ತಾವು ನಡೆಸುವ ಎಲ್ಲ ದುಷ್ಟ ಪ್ರಕ್ರಿಯೆಗಳನ್ನೆಲ್ಲ ನ್ಯಾಯಾಂಗ ಎತ್ತಿ ಹಿಡಿಯಬೇಕು ಎನ್ನುವ ದುರುದ್ದೇಶವೂ ಇಲ್ಲಿ ಕಾಣುತ್ತದೆ. ಮತದಾರರ ದಿನದ ನೆಪದಲ್ಲಿ ವಿಷಯ ಅರಸಿ ಹೋದಾಗ, ಕೇವಲ ಚುನಾವಣಾ ಆಯೋಗ ಒಂದೇ ಅಲ್ಲ, ಯಾವುದೇ ವ್ಯವಸ್ಥೆಯನ್ನೂ ನಮ್ಮ ರಾಜಕಾರಣ ಸರಿಯಾಗಿ ಉಳಿಸಿಲ್ಲ ಎನ್ನುವುದು ಮಾತ್ರ ಸ್ಪಷ್ಟ ಆಗುತ್ತಿದೆ.
ಇದರ ನಡುವೆ ಯುವಕರ ನಿರುದ್ಯೋಗ, ಬೆಲೆ ಏರಿಕೆ, ಆರ್ಥಿಕ ಹಿಂಜರಿತ, ಈಗ ವಿದೇಶಗಳಲ್ಲಿ ಕೆಲಸ ಕಳೆದುಕೊಂಡಿರುವ ನಲವತ್ತು ಸಾವಿರಕ್ಕೂ ಹೆಚ್ಚು ಭಾರತೀಯರ ವಿಚಾರ, ಇಲ್ಲಿ ಕೂಡ ಕೆಲಸ ಕಳೆದುಕೊಳ್ಳುತ್ತಿರುವ ಯುವ ಜನತೆಯ ಪಾಡು ಏನು ಎಂದು ತಿಳಿಯದೇ ಕಕ್ಕಾಬಿಕ್ಕಿ ಆಗುವಂತೆ ಮಾಡಿದೆ. ಆದರೂ ನಮ್ಮ ರಾಜಕೀಯ ಮಂದಿ ತಾವು ಅತ್ಯದ್ಭುತ ಆಡಳಿತ ನಡೆಸುತ್ತಿದ್ದು, ಜನರು ಸ್ವರ್ಗ ಸುಖದಲ್ಲಿ ತೇಲುತ್ತಿದ್ದಾರೆ ಎಂಬಂತೆ ಮಾತಾಡುತ್ತಾರೆ. ಜೊತೆಗೆ ತಮ್ಮ ಅಧಿಕಾರ ಭದ್ರಗೊಳಿಸಿಕೊಳ್ಳುವ ದುಷ್ಟ ಯೋಜನೆಗಳನ್ನು ಜನರ ಉದ್ಧಾರದ ಹೆಸರಲ್ಲಿ ಜಾರಿಗೆ ತರುತ್ತಿದ್ದಾರೆ. ಹದಿನೇಳಕ್ಕೆ ಮತದಾನದ ಹಕ್ಕು ನೀಡಲು ಮುಂದಾಗುವ ಆಯೋಗ, ಮತದಾರರ ಪಟ್ಟಿಯಿಂದ ಮಾಯವಾಗುವ ಅರ್ಹ ಮತದಾರರ ಕಾಳಜಿ ತೆಗೆದುಕೊಳ್ಳುವುದು ಮುಖ್ಯ ಅಲ್ಲವೇ?
-ಎ.ಬಿ.ಧಾರವಾಡಕರ