ಮಹಾಭಾರತ ಎರಡು ಸಂಗತಿಗಳ ಕುರಿತು ಹೇಳುತ್ತದೆ. ಒಂದು ಜ್ಞಾತಿ ಕಲಹ, ಇನ್ನೊಂದು ಯಾದವೀ ಕಲಹ. ದಾಯಾದಿ ಕಲಹದಲ್ಲಿ ಒಳಿತು ಗೆಲುವು ಪಡೆಯುತ್ತದೆ, ಆದರೆ ಯಾದವೀ ಕಲಹದಲ್ಲಿ ಇಡೀ ಕುಲವೇ ನಾಶ ಹೊಂದುತ್ತದೆ. ಆ ಸಮುದಾಯದ ಜನರ ಒಣ ಪ್ರತಿಷ್ಠೆ, ತಾವು ಏನು ಬೇಕಾದರೂ ಮಾಡಿ ಗೆದ್ದು ಸಾಧಿಸಬಲ್ಲೆವು ಎಂಬ ಠೇಂಕಾರ ಮತ್ತು ಎಲ್ಲದಕ್ಕಿಂತ ಹೆಚ್ಚಾಗಿ ಹಿರಿಯರಲ್ಲಿ ಅಗೌರವ ಇಡೀ ಕುಲದ ನಾಶಕ್ಕೆ ಮೂಲ ಪ್ರೇರಣೆ. ಬಹುಷಃ ನಮ್ಮ ರಾಜ್ಯದಲ್ಲಿನ ಬಿಜೆಪಿ ಅಂಥದೊಂದು ಕಲಹಕ್ಕೆ ತನ್ನೊಳಗೆ ನಾಂದಿ ಹಾಡಿದೆ ಎನ್ನಿಸುತ್ತದೆ. ಹಿರಿಯರಾದ ಯಡಿಯೂರಪ್ಪ ಒಂದು ಕಡೆ ಮತ್ತು ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ಮತ್ತೊಂದು ಕಡೆ ನಡೆಸಿದ ಕಾರ್ಯಕರ್ತರ ಸಭೆಯಲ್ಲಿ ಅನಿಯಂತ್ರಿತ ಟೀಕೆ, ಗಲಾಟೆ, ನಿಂದನೆ ಎಲ್ಲ ನಡೆದಿದೆ. ಬಹುಷಃ ಮುಂದಿನ ದಿನಗಳಲ್ಲಿ ಇದು ಇನ್ನೂ ತೀವ್ರ ಸ್ವರೂಪ ಪಡೆಯಲಿದೆ ಎಂದು ಕಾಣುತ್ತದೆ.
ಬಿಜೆಪಿಗೆ ಹೆಚ್ಚು ಬಲ ಇರುವುದು ಉತ್ತರ ಕರ್ನಾಟಕದಲ್ಲಿ, ಅದರಲ್ಲೂ ಇಲ್ಲಿನ ವೀರಶೈವ ಸಮುದಾಯದ ಬೆಂಬಲದಿಂದ ಎನ್ನುವ ಮಾತಿದೆ. ಆದರೀಗ ಇಲ್ಲಿನ ಒಂದೊಂದು ಜಿಲ್ಲೆಯಲ್ಲೂ ಅಪರೂಪಕ್ಕೆ ಎನ್ನುವಂತೆ ಬಿಜೆಪಿ ಗೆದ್ದಿದೆ, ಮಂತ್ರಿಗಳು ಸೋತಿದ್ದಾರೆ. ಬಹಳಷ್ಟು ಜನ ಠೇವಣಿ ಕಳೆದುಕೊಂಡಿದ್ದಾರೆ. ಇದಕ್ಕೆಲ್ಲ ಅವರವರ ನಡವಳಿಕೆ ಒಂದು ಕಾರಣ ಆದರೆ, ಇಡೀ ಪಕ್ಷ ಆಡಳಿತ ಕುರಿತು ತೋರಿದ ನಿರ್ಲಕ್ಷ ಮತ್ತೊಂದು ಕಾರಣ. ಹೇಗೂ ಗೆಲ್ಲುತ್ತೇವೆ ಎಂದೋ, ಪಕ್ಷದ ವರಿಷ್ಠರ ಜವಾಬ್ದಾರಿ ಅದು, ಅವರು ಹೇಗೋ ಗೆಲ್ಲಿಸುತ್ತಾರೆ ಬಿಡಿ ಎಂಬ ಉಡಾಫೆಯೂ ಕಾರಣ ಇರಬಹುದು. ಆದರೆ ಎಲ್ಲರೂ ಜನರ ವಿಶ್ವಾಸ ಕಳೆದುಕೊಂಡಿದ್ದರು ಎಂಬುದಂತೂ ನಿಜ. ಇವರ ಲಂಗುಲಗಾಮಿಲ್ಲದ ಆಡಳಿತದ ವಿರುದ್ಧ ಜನ ಮತ ಚಲಾಯಿಸಿದ್ದಾರೆ ಎನ್ನುವುದು ಸತ್ಯ. ಹೀಗಾಗಿಯೇ ಇಂಥ ಹೀನಾಯ ಸೋಲು. ಅದಕ್ಕೀಗ ಕಾರಣ ಹುಡುಕಲು ಹೊರಟಾಗ, ಕಾರಣ ಹುಡುಕುವುದಕ್ಕಿಂತ ಪರಸ್ಪರ ಟೀಕೆಯಲ್ಲಿಯೇ ರಾಜ್ಯದ ಬಿಜೆಪಿ ನಾಯಕರು ತೊಡಗಿದ್ದರು.
ಅವರ ಪಕ್ಷದ ಮಾಜಿ ಸಚಿವರೊಬ್ಬರು ಇದೆಲ್ಲಕ್ಕಿಂತ ವಿಲಕ್ಷಣವಾದ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ನವರನ್ನು ಪಕ್ಷಕ್ಕೆ ಸೇರಿಸಿಕೊಂಡು ಸರ್ಕಾರ ರಚಿಸಿದ್ದು ತಪ್ಪಾಯಿತು. ಅದರಿಂದಲೇ ಸೋಲು ಎಂದು ವಗ್ಗರಣೆ ಹಾಕಿದ್ದಾರೆ. ಇದೇ ಕಾಂಗ್ರೆಸ್ಸಿಗರ ಬೆನ್ನುಬಿದ್ದು, ಪಕ್ಷಕ್ಕೆ ಸೆಳೆದು ತಂದು ಅಧಿಕಾರದಲ್ಲಿ ವಿಜೃಂಭಿಸುವಾಗ, ಗುತ್ತಿಗೆದಾರರಿಂದ ಲಂಚ ಪಡೆಯುವಾಗ, ಇವರ ಪೀಡನೆಗೆ ಗುತ್ತಿಗೆದಾರನೊಬ್ಬ ಆತ್ಮಹತ್ಯೆ ಮಾಡಿಕೊಂಡಾಗ ಇವರಿಗೆ ಸೋಲಿಗೆ ಕಾರಣ ಹೊಳೆದಿರಲಿಲ್ಲ. ಈಗ ಆರ್ಕಿಮಿಡೀಸ್ನ ಹಾಗೆ ಹೊಸದೊಂದು ಸಿದ್ದಾಂತವನ್ನು ತೆರೆದಿಟ್ಟಿದ್ದಾರೆ.
ಇನ್ನು ವಿಜಯಪುರ ಮತ್ತು ಬಾಗಲಕೋಟ ಜಿಲ್ಲೆಗಳಲ್ಲಿ ಬಿಜೆಪಿ ಬಹುದೊಡ್ಡ ಸಂಕಟವನ್ನೇ ಎದುರಿಸಬೇಕಿದೆ. ಇಲ್ಲಿನ ಇಬ್ಬರು ನಾಯಕರು ಹೆಚ್ಚೂ ಕಡಿಮೆ ಬೀದಿ ಜಗಳಕ್ಕೆ ನಿಂತಿದ್ದಾರೆ. ಸಗಣಿ ತಿನ್ನುವುದು, ಹಲ್ಕಟ್ ಗಿರಿ ಎಂಬಂಥ ಪದ ಪ್ರಯೋಗಗಳು ನಡೆದು, ಈಗ ಗೆದ್ದಿರುವ ಈ ಭಾಗದ ಏಕೈಕ ಶಾಸಕ ಅಕ್ರಮ ಎಸಗಿ ಗೆದ್ದಿದ್ದಾನೆ ಎಂದು ಸುದ್ದಿ ಹರಡಲಾಗುತ್ತಿದೆ.
ಇದರ ಜೊತೆಗೇ ಇನ್ನು ಕೆಲವರು ಆಗಲೇ ಬೇಲಿ ಹತ್ತಿ ಕುಳಿತು ಯಾವ ಕಡೆ ಜಿಗಿಯುವುದು ಎಂದು ಅವಲೋಕಿಸುತ್ತಿದ್ದಾರೆ. ಅದರಂತೆ ಕೇಂದ್ರದಲ್ಲಿ ಅಧಿಕಾರ ಕಳೆದುಕೊಂಡರೆ ಹೇಗೆ ಎಂಬ ಸಂಕಟಕ್ಕೆ ಗುರಿ ಆಗಿರುವ ವರಿಷ್ಠರು, ರಾಜ್ಯದಲ್ಲಿ ಸಿದ್ದರಾಮಯ್ಯ ಅವರನ್ನು ಗುರಿ ಮಾಡಿಕೊಂಡು ಹೇಳಿಕೆ ನೀಡುತ್ತಿದ್ದರೆ ಈಚೆಗೆ ನಡೆದ ಹೊಸ ಶಾಸಕರ ಕಲಿಕಾ ಶಿಬಿರದಲ್ಲಿ ಹಲವು ನೂತನ ಬಿಜೆಪಿ ಶಾಸಕರು ಮುಕ್ತವಾಗಿಯೇ ಸಿದ್ದರಾಮಯ್ಯ ಅವರನ್ನು ಹೊಗಳಿ, ತಾವೂ ಸಹ ಅವರಂಥ ನಾಯಕತ್ವದ ಗುಣ ಬೆಳೆಸಿಕೊಳ್ಳುವ ಮಾತು ಆಡಿದ್ದಾರೆ. ಇದರ ಪರಿಣಾಮ ಎಂದರೆ ಮುಂದಿನ ದಿನಗಳಲ್ಲಿ ಕಾಳಗ ಜೋರಾಗಲಿದೆ.
ಈಗಾಗಲೇ ಮರಳಿ ನಾಯಕತ್ವ ಪಡೆಯುವ ಯತ್ನದಲ್ಲಿರುವ ಹಿರಿಯ ತಲೆಗಳು ನೀಡಿರುವ ಎರಡು ಸೂಚನೆಗಳು ಈಗ ಪಕ್ಷದವರನ್ನು ಹಾಗೆಯೇ ಹೊರಗಿನವರನ್ನು ಚಿಂತಿಸುವಂತೆ ಮಾಡಿವೆ. ಮೊದಲ ದಿನದಿಂದಲೇ ಕಲಾಪದಲ್ಲಿ ಧರಣಿ ನಡೆಸಲು ಕರೆ ನೀಡಿರುವ ಇವರು ವಯಸ್ಸಾದಂತೆ ಮಾತಿನ ತೂಕ ಕಳೆದುಕೊಳ್ಳುತ್ತಿದ್ದಾರೆ ಎಂಬುದನ್ನು ಸೂಚಿಸುತ್ತಿದೆ. ಅದರ ಜೊತೆಗೆ ಜನರಿಂದ ಚುನಾಯಿತ ಕಾಂಗ್ರೆಸ್ ಸರ್ಕಾರವನ್ನು ಕಿತ್ತು ಬಿಸಾಕಲು ಬೀದಿಗಿಳಿದು ಹೋರಾಟ ಮಾಡುವಂತೆ ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿರುವುದು ಇನ್ನೊಂದು ಹಾದಿ ತಪ್ಪಿದ ಮಾತು. ಎರಡೂ ಸಂಗತಿಗಳನ್ನು ಗಮನಿಸಿದಾಗ, ಬಿಜೆಪಿಯವರಿಗೆ ಅದೇಕೋ ಸಂವಿಧಾನದ ಬಗ್ಗೆಯೇ ಅಸಹನೆ ಇದ್ದಂತೆ ಕಾಣುತ್ತದೆ. ಯಾವ ಕಾರಣವೂ ಇಲ್ಲದೇ ವಿಧಾನಸಭೆ ಕಲಾಪ ನಡೆಯುವ ಮೊದಲ ದಿನದಿಂದಲೇ ಧರಣಿ ನಡೆಸುವುದು ಹುಚ್ಚುತನ. ಹಾಗೇ ಚುನಾಯಿತ ಸರ್ಕಾರವನ್ನು ಕಿತ್ತು ಹಾಕುವೆವು ಎನ್ನುವ ಕಲ್ಪನೆಯೇ ಹಾಸ್ಯಾಸ್ಪದ. ಈ ಹಿಂದೆ ಕೂಡ ಅವರು ಮುಖ್ಯಮಂತ್ರಿಯನ್ನು ಕುರ್ಚಿಯಿಂದ ಎಳೆದು ಬಿಸಾಕುವ ಮಾತು ಆಡಿ ನಗೆಗೀಡಾಗಿದ್ದರು. ಬಹುಷಃ ಪಾಳೇಗಾರಿಕೆ ಕಾಲದಲ್ಲಿ ಸಿಂಹಾಸನದ ಮೇಲೆ ಕುಳಿತವರನ್ನು ಎಳೆದು ಹಾಕಿ ಬೇರೊಬ್ಬ ಅದರ ಮೇಲೆ ಕುಳಿತು ಅಧಿಕಾರದ ಹಸ್ತಾಂತರ ಮಾಡಿಕೊಳ್ಳುತ್ತಿದ್ದನ್ನು ಅವರು ನೆನೆಸಿಕೊಳ್ಳುತ್ತಿರಬೇಕು.
ಮುಖ್ಯವಾಗಿ ಬಿಜೆಪಿಗೆ ಈಗ ರಾಜ್ಯದಲ್ಲಿ ದಿಕ್ಕು ತೋರಿಸುವ ನಾಯಕರೇ ಇಲ್ಲದಂತಾಗಿದೆ. ಬಿಜೆಪಿ ಅಧ್ಯಕ್ಷರು ಊರಲ್ಲಿ ಕುಳಿತು “ಹೇಳಿಕೆ” ಬಿಸಾಕಿದರೆ ಕೆಲಸ ಮುಗಿಯಿತು ಎಂದುಕೊಂಡಿದ್ದಾರೆ. ದೆಹಲಿ ಕಡೆಯಿಂದ ಇರುವ ಉಸ್ತುವಾರಿ ಅರುಣ ಸಿಂಗ್ ಬಗ್ಗೆಯೇ ದೂರು ಕೇಳಿ ಬಂದಿರುವುದರಿಂದ ಅದು ಇನ್ನೊಂದು ಕಗ್ಗಂಟು. ಕೇಂದ್ರದಲ್ಲಿ ಅಧಿಕಾರ ಉಳಿಸಿಕೊಳ್ಳುವ ಕುರಿತ ನೂರೆಂಟು ಸಂಗತಿಗಳೇ ವರಿಷ್ಠರಿಗೆ ಕಾಡುತ್ತಿದ್ದು ಕರ್ನಾಟಕದಲ್ಲಿ ಹೇಗೂ ಸೋತಿರುವುದರಿಂದ ಮತ್ತೊಂದು ತಲೆನೋವು ಏಕೆ ಹಚ್ಚಿಕೊಳ್ಳುವುದು ಎಂದು ಅವರ್ಯಾರೂ ಇತ್ತ ತಿರುಗಿ ನೋಡುತ್ತಿಲ್ಲ. ರಾಜ್ಯದ ಬಿಜೆಪಿ ಪರಿಸ್ಥಿತಿ ಅರಾಜಕ ಸೈನ್ಯದಂತಾಗಿದೆ. ಅವರ ಮೇಲೆ ಇವರು, ಇವರ ಮೇಲೆ ಅವರು ಮುಗಿ ಬೀಳುತ್ತಿದ್ದು ಈ ಯಾದವೀ ಕಲಹದ ಬಗ್ಗೆ ಅವರ ಪಕ್ಷದವರೇ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ಹಲವಾರು ವರ್ಷ ಕೆಲವರು ದುಡಿದು ಕಟ್ಟಿದ ಪಕ್ಷ ಈಗ ಅಧಿಕಾರ, ಹಣದ ದುರಾಸೆ ಮತ್ತು ಕೆಟ್ಟ ಆಡಳಿತದಿಂದ ಕುಸಿದಿದೆ. ಇಂಥ ಸಮಯದಲ್ಲಿ ಎದುರಾಳಿ ಮೇಲೆ ದಾಳಿ ಮಾಡುವ ಬದಲು, ಅವರವರೇ ಹೊಡೆದಾಟಕ್ಕೆ ಇಳಿದು ಬಡಿದಾಡಿಕೊಳ್ಳುತ್ತಿರುವುದು ಪಕ್ಷದ ಅವಸಾನದ ಮುನ್ಸೂಚನೆ. -ಎ.ಬಿ.ಧಾರವಾಡಕರ