ಹೊಸ ಸರ್ಕಾರ ಬಂದಿದೆ. ಏನು ಮಾಡಬೇಕು, ಮಾಡಬಾರದು ಎಂದು ತಿಳಿದಿರುವ ಜನ ಅಲ್ಲಿದ್ದಾರೆ. ಆದರೆ ಅಧಿಕಾರದ ನೆಲೆ ಎನಿಸಿದ ವಿಧಾನಸೌಧವನ್ನು ಮೊದಲು ಶುದ್ಧಗೊಳಿಸುವ ಅಗತ್ಯ ಇದೆ. ಹಿಂದಿನ ಸರ್ಕಾರದ ಸಮಯದಲ್ಲಿ ಸಮಾಜ ಒಡೆಯುವ ಶಕ್ತಿಗಳು ಸಚಿವರುಗಳ ಕಚೇರಿ ಪ್ರವೇಶಿಸಿ, ತಾವೇ ದರ್ಬಾರು ಮಾಡುತ್ತಿದ್ದರು. ಅದರಿಂದಾಗಿ ಹಿಂದಿನ ಎಡಬಿಡಂಗಿ ಸಚಿವರುಗಳಿಗೆ ಕಚೇರಿಗೆ ಬರುವ ಅಗತ್ಯವೇ ಇರಲಿಲ್ಲ. ಮುಖ್ಯಮಂತ್ರಿಗಳು ಬೆಂಗಳೂರಲ್ಲಿ ಇರುತ್ತಿದ್ದರಾದರೂ, ಅವರು ಕೈಯಲ್ಲಿ ಕತ್ತರಿ ಹಿಡಿದು ಈ ದಿನ ಹೊಸದಾಗಿ ಏನು ಕತ್ತರಿಸೋಣ ಎನ್ನುವ ಯೋಚನೆಯಲ್ಲಿಯೇ ಇರುತ್ತಿದ್ದುದರಿಂದ ತಮ್ಮ ಸರ್ಕಾರ ಹೊರಡಿಸಿದ ಅನರ್ಥಕಾರಿ ಆದೇಶಗಳ ಬಗ್ಗೆಯೇ ಅವರಿಗೆ ಗೊತ್ತಿರುತ್ತಿರಲಿಲ್ಲ. ಇಂಥ ಅಪಸವ್ಯಗಳು ಇನ್ನು ನಡೆಯಬಾರದು.
ವಿಧಾನಸೌಧಕ್ಕೆ ನಿತ್ಯವೂ ಸಚಿವರುಗಳು ಹಾಜರಿರಬೇಕು ಮತ್ತು ಕಡ್ಡಾಯವಾಗಿ ಸಂಜೆ ನಿಗದಿ ಮಾಡಿರುವ ನಾಲ್ಕು ಗಂಟೆಯ ನಂತರ ಅವರು ಸಾರ್ವಜನಿಕರಿಗೆ ದೊರೆಯುವಂತೆ ಇರಬೇಕು. ಸಾರ್ವಜನಿಕರು ಅವರನ್ನು ಭೇಟಿ ಮಾಡಲು ಅನುಕೂಲ ಕಲ್ಪಿಸಬೇಕು. ಈಗಾಗಲೇ ಲೋಕಾಯುಕ್ತ ಮತ್ತು ಇತರ ಸಂಸ್ಥೆಗಳು ನಡೆಸಿರುವ ದಾಳಿಯಿಂದ ಯಾರ್ಯಾರು ಏನೇನು ದುಡಿದು ದುಂಡಗಾಗಿದ್ದಾರೆ ಎಂದು ತಿಳಿದೇ ಇರುತ್ತದೆ. ಅವರೆಲ್ಲರಿಗೂ ತಾರ್ಕಿಕವಾದ ನ್ಯಾಯ ದೊರೆಯುವಂತಾಗಬೇಕು. ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಸಂತೋಷ ಪಾಟೀಲ ಪ್ರಕರಣದಲ್ಲಿ ಶಿಕ್ಷೆಯಿಂದ ತಪ್ಪಿಸಿಕೊಂಡ ಮಂತ್ರಿಯನ್ನು ಹಿಡಿದು ಪ್ರಕರಣದ ಮರು ವಿಚಾರಣೆ ನಡೆಸುವುದಲ್ಲದೇ ಈ ವರೆಗೆ ತಿಂದಿರುವ ಹಣ ವಸೂಲು ಮಾಡಬೇಕು. ಇದು ಪ್ರತೀಕಾರದ ದೃಷ್ಟಿಯಿಂದ ಅಲ್ಲ, ಮುಂದೆ ಇಂಥದ್ದನ್ನು ಯಾರೂ ಮಾಡಬಾರದು ಎಂದು ಎಚ್ಚರಿಸಲು ಇದಾಗಬೇಕು.
ನಿಗಮ, ಮಂಡಳಿಗಳಿಗೆ ಚನ್ನಗಿರಿಯ ಶಾಸಕನಂತೆ ದುಡ್ಡು ಹೊಡೆಯುವವರನ್ನು ತಂದು ಕೂರಿಸದೇ ನಿಜಕ್ಕೂ ಅಭಿವೃದ್ಧಿ ಕೆಲಸ ಮಾಡುವವರನ್ನು ಆಯಾ ಜಾಗೆಗಳಿಗೆ ತರÀಬೇಕು. ಇದು ಆಗದೇ ಹೋದಲ್ಲಿ ಅಂಥ ಸ್ಥಾನಗಳು ಕೇವಲ ಅಲಂಕಾರಿಕ ಇಲ್ಲವೇ ದುಡ್ಡು ಹೊಡೆಯುವ ಸುಂಕ ವಸೂಲಿ ಕಟ್ಟೆಗಳಾಗುತ್ತವೆ. ಇದು ಮೊದಲು ತಪ್ಪಬೇಕು. ಈ ಹಿಂದೆ ಸಾಂಸ್ಕøತಿಕ ಮತ್ತು ಸಾಹಿತ್ಯಕ ಸಂಸ್ಥೆಗಳಲ್ಲಿ ಸಲ್ಲದ ವ್ಯಕ್ತಿಗಳನ್ನು ತಂದು ಕೂರಿಸಿ, ಇಡೀ ಸಮಾಜ ಕುಲಗೆಡಿಸುವ ಕೆಲಸ ಮಾಡಿದ್ದನ್ನು ಗಮನದಲ್ಲಿಟ್ಟುಕೊಂಡು ನಿಜಕ್ಕೂ ಆಯಾ ರಂಗಗಳಲ್ಲಿ ಕ್ರಿಯಾಶೀಲವಾಗಿ ಕೊಡುಗೆ ನೀಡುವಂಥವರನ್ನು ತಂದು ಕೂರಿಸಬೇಕು.
ಈಗಾಗಲೇ ಕೆಲವು ಉಚಿತ ಉಡುಗೊರೆಗಳನ್ನು ನೀಡುವ ಭರವಸೆ ನೀಡಿರುವ ಪಕ್ಷ ರಾಜ್ಯದ ಅಭಿವೃದ್ಧಿಗೆ ಪೂರಕವಾದ ಯೋಜನೆ ರೂಪಿಸುವಲ್ಲಿ ತಜ್ಞರ ಸಲಹೆ, ಸೂಚನೆಗಳನ್ನು ಪಡೆಯಬೇಕು. ಈಗಾಗಲೇ ತಮಿಳುನಾಡಲ್ಲಿ ನಿವೃತ್ತ ರಿಸರ್ವ ಬ್ಯಾಂಕ್ ಗವರ್ನರ್ ರಘುರಾಮ ರಾಜನ್ ಸೇರಿದಂತೆ ಹಲವು ತಜ್ಞರನ್ನು ನೇಮಿಸಿಕೊಂಡು, ಅವರ ಸಲಹೆ ಸೂಚನೆ ಮೇರೆಗೆ ನಡೆಯುತ್ತಿರುವುದು ನಮಗೆ ಪಾಠವಾಗಬೇಕು. ಧರ್ಮದ ಹೆಸರಲ್ಲಿ ಆಸ್ತಿ ಕಬಳಿಸುವ, ಸಾರ್ವಜನಿಕ ಜೀವನದಲ್ಲಿ ಅಶಾಂತಿ ಉಂಟು ಮಾಡುವ ದೇವ ಮಾನವರ ಹಾವಳಿ ಹೆಚ್ಚುತ್ತಿದ್ದು, ಹಿಂದಿನ ಸರ್ಕಾರದಲ್ಲಿ ಸಾಕಷ್ಟು ಪ್ರೋತ್ಸಾಹ ಇದ್ದ ಕಾರಣ ಅವರೆಲ್ಲ ಕಬಳಿಸಿರುವ ಸಾರ್ವಜನಿಕರ ಜಮೀನುಗಳನ್ನು ವಾಪಸು ಪಡೆಯುವ ಮತ್ತು ಇಲ್ಲಿಗೆ ಕಾಲಿಟ್ಟು ಅನಾಹುತಕ್ಕೆ ಎಡೆ ಮಾಡಿಕೊಡದಂತೆ ನೋಡಿಕೊಳ್ಳಬೇಕು.
ಸರ್ಕಾರದೊಡನೆ ವ್ಯವಹರಿಸುವ ಎಲ್ಲ ಸಂಸ್ಥೆ ಮತ್ತು ವ್ಯಕ್ತಿಗಳ ಒಂದೇ ಕೊರಗೆಂದರೆ, ಸಕಾಲಕ್ಕೆ ಬಿಲ್ ಪಾವತಿ ಆಗುವುದಿಲ್ಲ ಮತ್ತು ಅದನ್ನು ಪಡೆಯಲು ಬಹಳಷ್ಟು ಲಂಚ ನೀಡಬೇಕಾಗುತ್ತದೆ ಎಂಬುದು. ಇದೆಲ್ಲ ಮೊದಲು ನಿಲ್ಲಬೇಕು. ಶಾಲಾ ಮಕ್ಕಳಿಗೆ ಸಮವಸ್ತ್ರ, ಬೂಟು, ಅಂಗನವಾಡಿ ಮಕ್ಕಳಿಗೆ ಹಾಲು ಪೂರೈಕೆ ನಿಂತಿದ್ದು ಅದನ್ನು ಕೂಡಲೇ ಪುನರಾರಂಭಿಸಬೇಕು. ಹಿಂದಿನ ಸರ್ಕಾರದ ಜನ ಮಾಡಿಟ್ಟ ತಪ್ಪುಗಳನ್ನು ಸರಿಪಡಿಸುವುದೇ ದೊಡ್ಡ ಕೆಲಸ ಆಗುತ್ತದೆ ನಿಜ, ಆದರೆ ಅದರ ನೆಪದಲ್ಲಿ ಹೊಸದಾಗಿ ಕೈಗೆತ್ತಿಕೊಳ್ಳಬೇಕಾದ ಕೆಲಸಗಳನ್ನು ಮುಂದೂಡಬಾರದು.
ಮುಖ್ಯವಾಗಿ ಬಹುಕಾಲದಿಂದ ಈಡೇರದ ಕನಸಾಗಿ ಉಳಿದಿರುವ ಮಹದಾಯಿ ಕುಡಿಯುವ ನೀರಿನ ಯೋಜನೆ ಅನುಷ್ಠಾನ ಆಗುವಂತೆ ನೋಡಿಕೊಳ್ಳಲು ನೆರೆಯ ಗೋವಾದೊಡನೆ ಮಾತುಕತೆ ನಡೆಸಿ ಅವರನ್ನು ಒಪ್ಪಿಸಲು, ಇಲ್ಲವೇ ಅನಿವಾರ್ಯ ಎನಿಸಿದರೆÀ ನ್ಯಾಯಾಲಯದ ಮೂಲಕ ಕ್ರಮ ಕೈಗೊಳ್ಳಲು ಮುಂದಾಗಬೇಕು. ಹೋದ ಚುನಾವಣೆ ಸಮಯಕ್ಕೆ ಯಡಿಯೂರಪ್ಪ ಅವರು ಗದಗ ಮತ್ತು ಧಾರವಾಡ ಭಾಗಗಳಿಗೆ ಪ್ರಚಾರಕ್ಕೆ ಹೋದಾಗ, ತಮ್ಮ ಪಕ್ಷ ಅಧಿಕಾರಕ್ಕೆÀ ಬಂದ ಮರುದಿನವೇ ನಿಮಗೆಲ್ಲ ಕುಡಿಯುವ ನೀರು ದೊರೆಯುತ್ತದೆ ಎಂದು ಹೇಳಿದ್ದರು. ಅದೇ ಭರವಸೆಯಿಂದ ಕಳೆದ ಬಾರಿ ಉತ್ತರ ಕರ್ನಾಟಕ ಜನ ಬಿಜೆಪಿಗೆ ಭರ್ಜರಿ ಬಹುಮತ ನೀಡಿದ್ದರು. ಆದರೆ ಆಗ ಉತ್ತರ ಕರ್ನಾಟಕದ ನಮ್ಮ ಜನ ವಂಚನೆಗೊಳಗಾದರು. ಅದನ್ನು ಸರಿದೂಗಿಸುವ ರೀತಿಯಲ್ಲಿ ಈಗಿನ ಸರ್ಕಾರ ಕುಡಿಯುವ ನೀರು ಮತ್ತು ರೈತರ ಬವಣೆ ನಿವಾರಣೆಗೆ ಕ್ರಮ ಕೈಗೊಳ್ಳಬೇಕು, ಆಗ ಮಾತ್ರ ಮತ ನೀಡಿ ಪಕ್ಷ ಗೆಲ್ಲಿಸಿದ್ದಕ್ಕೂ ಸಾರ್ಥಕ ಆಗುತ್ತದೆ.
ಕಾಂಗ್ರೆಸ್ನಲ್ಲಿ ಇನ್ನೂ ಜನಪರ ಕಾಳಜಿ ಉಳಿದುಕೊಂಡಿದೆ ಮತ್ತು ಜನರ ಭಾವನೆಗಳಿಗೆ ಗೌರವ ನೀಡುವ ಪ್ರವೃತ್ತಿ ಈಗಲೂ ಮುಂದುವರಿದಿದ್ದು ಜನರಿಗೆ ಹೆಚ್ಚಿನ ತೊಂದರೆ ಆಗುವುದಿಲ್ಲ ಎಂದು ಭಾವಿಸೋಣ. ಮುಖ್ಯವಾಗಿ ಇಡೀ ಸರ್ಕಾರದ ಆಡಳಿತ ಎಂದರೆ ಲಂಚ ಮತ್ತು ಭ್ರಷ್ಠಾಚಾರಕ್ಕೆ ಇಂಬು ನೀಡುವ ಕೂಪ ಎಂಬಂತೆ ವರ್ತಿಸಿದ ಹಿಂದಿನ ಸರ್ಕಾರದ ಮುಖಕ್ಕೆ ಮಂಗಳಾರತಿ ಎತ್ತುವಂತೆ ನಡೆ, ನುಡಿಯಲ್ಲಿ ಆಚರಣೆ ಇರಬೇಕು. ಕರ್ನಾಟಕ ಎಲ್ಲ ರಾಜ್ಯಗಳಿಗೆ ಮಾದರಿ ಎಂಬಂತಾಗಿದ್ದು ಮುಂದೆಯೂ ಕೂಡ ಅದೇ ಭಾವನೆ ಉಳಿಸಿಕೊಂಡು ಹೋಗುವ ಜವಾಬ್ದಾರಿ ಹೊಸ ಸರ್ಕಾರದ್ದು. ಅದು ಸಾಧ್ಯ ಆಗಲಿ ಎಂದು ಹಾರೈಸೋಣ.