ಗೆಲುವಿಗೆ ಹಲವಾರು ಅಪ್ಪಂದಿರು ಎನ್ನುತ್ತಾರೆ. ಈಗ ರಾಜ್ಯದಲ್ಲಿ ಕಾಂಗ್ರೆಸ್ ಪಡೆದಿರುವ ಗೆಲುವಿಗೆ ತಾನೇ ಕಾರಣ ಎಂದು ಬೀಗುತ್ತ ಇರುವವರ ಸಂಖ್ಯೆ ಕಡಿಮೆ ಏನಲ್ಲ. ಇನ್ನು ಒಂದು ಹೆಜ್ಜೆ ಮುಂದೆ ಹೋಗಿ, ಅದಕ್ಕಾಗಿ ತಮಗೆ ಸೂಕ್ತ ಪ್ರತಿಫಲ ನೀಡಬೇಕು ಎನ್ನುವ ಚೌಕಾಶಿಯೂ ನಡೆಯುತ್ತಿದೆ. ಇವೆಲ್ಲ ರಾಜಕೀಯದಲ್ಲಿ ಮಾಮೂಲು. ಏಕೆಂದರೆ ರಾಜಕೀಯ ಪ್ರವೇಶಿಸುವ ಮಂದಿಯೇ ಹಾಗೆ, ತಮ್ಮ ಲೆಕ್ಕಾಚಾರ ಇಟ್ಟುಕೊಂಡೇ ಬಂದಿರುತ್ತಾರೆ. ಅಕಸ್ಮಾತ್ ಗಳಿಸಿದ ಗೆಲುವಿನಿಂದ ಬೀಗಿ ಇಲ್ಲದ ಅನಾಹುತಗಳಿಗೆ ದಾರಿ ಮಾಡಿಕೊಡುತ್ತಾರೆ. ರಾಜ್ಯದಲ್ಲಿ ಇತ್ತೀಚೆಗೆ ನಡೆದ ಚುನಾವಣೆ ಸಮಯಕ್ಕೆ ನಾನಾ ರೀತಿಯಲ್ಲಿ, ನಾನಾ ಮಂದಿ ಕೆಲಸ ಮಾಡಿದ್ದಾರೆ. ಬಿಜೆಪಿಯಿಂದ ಬಂದ ಮಹಾನ್ ನಾಯಕರು, ಅವರಿಗಾದ ಖರ್ಚು ವೆಚ್ಚ ಎಲ್ಲ ಲೆಕ್ಕ ಹಾಕಿದರೆ, ಆ ದುಡ್ಡಿನಲ್ಲೇ ಒಂದು ವರ್ಷ ಒಂದು ರಾಜ್ಯದ ಬಜೆಟ್ ತೂಗಿಸಬಹುದಿತ್ತು. ಅದೇ ರೀತಿ ಕಾಂಗ್ರೆಸ್ ಕೂಡ ತನ್ನ ದಿಗ್ಗಜ ನೇತಾರರರನ್ನು ಕರೆದು ತಂದು ಸಾಕಷ್ಟು ಪ್ರಚಾರ ಮಾಡಿತು. ಇಲ್ಲಿ ಇವರ ಪಕ್ಷವೇ ಇದಕ್ಕೆಲ್ಲ ಹಣ ತೆರಬೇಕಿತ್ತು. ಆದರೆ ಅದೇ ಪಧಾನಿ ಅವರಿಗೆ ಅವರ ಸ್ಥಾನದ ಮಹಿಮೆಯಿಂದ ಸರ್ಕಾರವೇ ಪ್ರಯಾಣ ಮತ್ತಿತರ ಎಲ್ಲ ಖರ್ಚು ವೆಚ್ಚ ಭರಿಸುವುದು ಅನಿವಾರ್ಯ ಆಗಿತ್ತು. ಇವೆಲ್ಲ ಮಾಮೂಲಾಗಿ ನಡೆಯುವ ಸಂಗತಿಗಳು.
ಇದೆಲ್ಲದರ ಜೊತೆಗೆ ಮುಂದೆ ಕಾಣಿಸದೇ ತೆರೆಮರೆಯಲ್ಲಿ ಕೆಲಸ ಮಾಡುವವರ ದಂಡೇ ಇರುತ್ತದೆ. ಅದರಲ್ಲೂ ಚುನಾವಣೆಯ ನಿಜವಾದ ವ್ಯಾಖ್ಯೆ ಏನು, ಅದನ್ನು ಅರ್ಥ ಮಾಡಿಕೊಂಡು ಜನರಿಗೆ ಹೇಗೆ ಸಂದೇಶ ಮುಟ್ಟಿಸಬೇಕು ಎಂಬ ಹೊಸ ಪರಂಪರೆಯೇ ಈಗ ಜಾರಿಗೆ ಬಂದಿದೆ. ದೇಶಕ್ಕೆ ಮೊಟ್ಟ ಮೊದಲ ಬಾರಿ ಭಾರೀ ಬಹುಮತದ ಬಿಜೆಪಿ ಸರ್ಕಾರವನ್ನು ದಯಪಾಲಿಸಿದ್ದು ಇದೇ ಚುನಾವಣಾ ತಂತ್ರ. ಆದರೆ ತಂತ್ರ ರೂಪಿಸಿದವರನ್ನೇ ಮರೆತು ತಾನು ಚಾಣಕ್ಯ, ಇನ್ನೊಬ್ಬ ಚಂದ್ರಗುಪ್ತ ಎಂದೆಲ್ಲ ಮೆರೆದ ಈ ಪಕ್ಷದ ನಾಯಕರು ಇದು ವರೆಗೂ ಯಾವೊಂದು ರಾಜ್ಯದಲ್ಲಿಯೂ ತಮ್ಮ ಪ್ರಾಬಲ್ಯ ಸ್ಥಾಪಿಸುವುದು ಸಾಧ್ಯ ಆಗಿಲ್ಲ. ಮುಂದೆಯೂ ಇದೇ ರೀತಿ ನಡೆದರೆ, ಅವರು ಕೇಂದ್ರದಿಂದ ಸಹ ಖುರ್ಚಿ ಖಾಲಿ ಮಾಡಿ ಮನೆಗೆ ಹೋಗುವುದು ಖಚಿತ.
ಈ ಬಾರಿಯ ರಾಜ್ಯ ವಿಧಾನಸಭೆ ಚುನಾವಣೆ ವೇಳೆ ತಂತ್ರ ರೂಪಿಸಲು ಕಾಂಗ್ರೆಸ್ ನೇಮಕ ಮಾಡಿದ್ದ ತಂಡದ ಮುಖ್ಯ ವ್ಯಕ್ತಿ ಸುನೀಲ ಕುನಿಗೊಳಿ. ಈತ 2014ರಲ್ಲಿ ಪ್ರಶಾಂತ ಕಿಶೋರ ತಂಡದಲ್ಲಿದ್ದು ಕೆಲಸ ಮಾಡಿ, ಬಿಜೆಪಿ ಗೆಲುವಿಗೆ ಕಾರಣ ಆಗಿದ್ದರು. ಮೂಲತಃ ಬಳ್ಳಾರಿ ಜಿಲ್ಲೆಯವರಾದ ಇವರು ಈಗ ಚೆನ್ನೈನಲ್ಲಿ ನೆಲೆಸಿದ್ದಾರೆ. 2016ರಲ್ಲಿ ಕಿಶೋರ ತಂಡ ತೊರೆದು ತಮಿಳುನಾಡಿನ ಸ್ಟಾಲಿನ್ ಅವರಿಗಾಗಿ ಕೆಲಸ ಮಾಡತೊಡಗಿದ ಇವರು, ಡಿಎಂಕೆ ಪಕ್ಷ ಅಧಿಕಾರಕ್ಕೆ ಬರುವಲ್ಲಿ ಮಹತ್ವದ ತಂತ್ರಗಾರಿಕೆ ರೂಪಿಸಿದ್ದರು. ಈ ಬಾರಿಯ ಕರ್ನಾಟಕ ವಿಧಾನಸಭೆ ಚುನಾವಣೆಗೆ ಇವರನ್ನು ಸಲಹೆಗಾರರನ್ನಾಗಿ ನೇಮಕ ಮಾಡಿಕೊಳ್ಳಲಾಗಿತ್ತು. ಇದಲ್ಲದೇ ಭಾರತ ಜೋಡೋ ಯಾತ್ರೆಯ ಪರಿಕಲ್ಪನೆ ರೂಪಿಸುವ ಕೆಲಸ ಮಾಡಿದ್ದ ಸುನೀಲ, ಚುನಾವಣೆ ಇನ್ನೂ ಹಲವಾರು ತಿಂಗಳು ಇರುವಾಗಲೇ ರೂಪಿಸಿದ ಪ್ರಚಾರ ತಂತ್ರ ಎಂದರೆ ‘ಪೇಸಿಎಮ್’. ಬಿಜೆಪಿಯ ಜನ ನಿರ್ಲಜ್ಜೆಯಿಂದ ಲಂಚ ಸ್ವೀಕರಿಸುತ್ತಾ ಠೇಂಕರಿಸುವ ಸಮಯಕ್ಕೆ ಶಾಕ್ ನೀಡಿದಂತೆ ಬಂದ ಬೆಳಗಾವಿಯ ಗುತ್ತಿಗೆದಾರ ಸಂತೋಷ ಪಾಟೀಲ ಅವರ ಆತ್ಮಹತ್ಯೆ ಸುದ್ದಿಯು ನೋಟು ಎಣಿಸುವ ಮಶೀನ ಇಟ್ಟುಕೊಂಡಿದ್ದ ಅಂದಿನ ಗ್ರಾಮೀಣಾಭಿವೃದ್ದಿ ಸಚಿವರ ತಲೆದಂಡ ಪಡೆಯಿತಾದರೂ ಇದು ಅಲ್ಲಿಗೆ ನಿಲ್ಲಲಿಲ್ಲ. ಇಡೀ ಪಕ್ಷವೇ ಸೋತು ಮನೆಗೆ ತೆರಳುವಂತೆ ಮಾಡುವಲ್ಲಿ ಈ ಪ್ರಚಾರ ಸಾಮಗ್ರಿಯ ಪಾತ್ರವೂ ಬಹಳ ದೊಡ್ಡದು. ಅದೇ ಸಮಯಕ್ಕೆ ಕರ್ನಾಟಕದಲ್ಲಿ ರಾಹುಲ್ ನಡೆಸಿದ ಭಾರತ ಜೋಡೋ ಯಾತ್ರೆ ಮತ್ತು ಪ್ರಿಯಾಂಕಾ ಗಾಂಧಿಯ ನೇರ, ದಿಟ್ಟ ಪ್ರಚಾರ ಭಾಷಣ ಕೂಡ ಹೆಚ್ಚು ಜನರನ್ನು ಆಕರ್ಷಿಸುವಲ್ಲಿ ಯಶಸ್ಸು ಪಡೆಯಿತು.
ಸರ್ಕಾರ ಭ್ರಷ್ಠ ಎಂದರೆ ಸಾಲದು, ಜನರಿಗೆ ಹೆಚ್ಚು ಮನದಟ್ಟಾಗುವಂಥ ಯೋಜನೆಗಳನ್ನು ಹಮ್ಮಿಕೊಳ್ಳಬೇಕು ಮತ್ತು ಅವುಗಳ ವಿಚಾರದಲ್ಲಿ ಜನರಿಗೆ ನಂಬಿಕೆ ಮೂಡಬೇಕು ಎಂದು ಚಿಂತಿಸಿದ ಸುನೀಲ, ಗ್ಯಾರಂಟಿ ಕಾರ್ಡ ರೂಪಿಸಿದ್ದು ಅಲ್ಲದೇ ಅದು ಮನೆ ಮನೆ ತಲುಪುವಂತೆ ಮಾಡಿ, ಜನ ಮತಗಟ್ಟೆಗಳಿಗೆ ಧಾವಿಸಿ ವೋಟು ನೀಡುವಂತೆ ಮಾಡಿತು. ಜನ ಹೀಗೆ ದಂಡು ದಂಡಾಗಿ ಬಂದು ಕಾಂಗ್ರೆಸ್ ಪರ ವೋಟು ಹಾಕದೇ ಹೋಗಿದ್ದರೆ ಈಗ ಗೆದ್ದು ಬೀಗುತ್ತಿರುವ ನಾಯಕರೆಲ್ಲ ಅದೇ ಪೆಚ್ಚು ಮೋರೆ ಮಾಡಿಕೊಂಡು ಮತ್ತೆ ವಿರೋಧ ಪಕ್ಷದಲ್ಲಿ ಕೂರಬೇಕಿತ್ತು.
ಈಗ ಅದೆಲ್ಲವೂ ಏನೂ ನಡೆದೇ ಇಲ್ಲ, ತಾವೇ ಗೆಲುವಿನ ರೂವಾರಿ, ತಮಗೇ ಇದರ ಎಲ್ಲ ಲಾಭ ದೊರೆಯಬೇಕು ಎಂದು ಹಟ ಹಿಡಿದಿರುವ ನಾಯಕರ ಪರಿಣಾಮ ರಾಜ್ಯದ ಕಾಂಗ್ರೆಸ್ನಲ್ಲಿ ತೋರಿಕೆಗೆ ಮಾತ್ರ ಸೀಮಿತ ಆಗಿದ್ದ ಸಾಮೂಹಿಕ ನಾಯಕತ್ವದ ನಿಜಬಣ್ಣ ಈಗ ಬಯಲಾಗುತ್ತಿದೆ. ಈ ತಿಕ್ಕಾಟ ಹೇಗೋ ಶಮನಗೊಂಡು ಹೊಸ ಮುಖ್ಯಮಂತ್ರಿ ಆಯ್ಕೆ ದಾರಿ ಕಂಡುಕೊಳ್ಳಲಾಗಿದ್ದು ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಸಮಾಧಾನಕರ ಸಂಗತಿ. ಭಾರತದಂಥ ಬೃಹತ್ ದೇಶ ಹಲವು ಬಾರಿ ವಿದೇಶಿಯರ ದಾಳಿಗೆ ತುತ್ತಾಗಿ, ವಿದೇಶೀ ದೊರೆಗಳ ತೆಕ್ಕೆಯಲ್ಲಿ ಸಿಕ್ಕಿ ನರಳಿದ್ದು ನಮ್ಮೊಳಗೆ ಇದ್ದ ಇಂಥ ಒಳಜಗಳಗಳಿಂದಲೇ. ಈ ಒಳಜಗಳ ಇಲ್ಲದೇ ನಮ್ಮ ಮಹಾನ್ ಹಿಂದೂ ರಾಜರು ನಡೆದುಕೊಂಡಿದ್ದರೆ ಈ ದೇಶಕ್ಕೆ ಮುಘಲರೂ ಬರುತ್ತಿರಲಿಲ್ಲ, ಅಲೆಕ್ಸಾಂಡರನೂ ಕಾಲಿಡುತ್ತಿರಲಿಲ್ಲ.
ಇತಿಹಾಸ ಚಕ್ರದ ಹಾಗೆ ಸುತ್ತುತ್ತ ಇರುತ್ತದೆ, ಆದರೆ ಅದರಿಂದ ಪಾಠ ಕಲಿಯುವುದು ಕಡಿಮೆ. ಅವರವರ ಅಹಂಕಾರ, ಸ್ವಾರ್ಥ ಮತ್ತು ಕುತರ್ಕಗಳಿಂದಲೇ ಎಲ್ಲವನ್ನೂ ನಿರ್ಣಯಿಸಲು ಯತ್ನಿಸುವ ಜನರು ದೇಶ ಮತ್ತು ರಾಜ್ಯಗಳ ಹಿತ ಮರೆತು ಸಂಘರ್ಷಕ್ಕೆ ಇಳಿಯುವುದರಿಂದಲೇ ತಾವು ನಾಶ ಆಗುವುದಲ್ಲದೇ ತಮ್ಮ ರಾಜ್ಯ ಮತ್ತು ದೇಶವನ್ನು ಕೂಡ ನಾಶ ಮಾಡುತ್ತಾರೆ. ಇಂದಿನ ಕಾಂಗ್ರೆಸ್ ವಿಜಯಕ್ಕೆ ನಿಜಕ್ಕೂ ಕಾರಣರಾದ ನಿಷ್ಠಾವಂತ ಮತದಾರರನ್ನು, ಅವರು ಮತಗಟ್ಟೆಗೆ ಬಂದು ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗುವಂತೆ ಮಾಡಿದವರನ್ನು ಈ ಹೊತ್ತಿನಲ್ಲಿ ನೆನೆದು, ಗೌರವಿಸುವುದು ಮುಖ್ಯ. ಅವರೇ ಈ ರಾಜ್ಯದ ನಿಜವಾದ ಶಕ್ತಿ ಮತ್ತು ಅವರು ಮನಸ್ಸು ಮಾಡಿದರೆ ಎಲ್ಲ ಅಧಿಕಾರ ಕೇಂದ್ರಗಳು ಗಾಳಿಗೆ ಸಿಕ್ಕ ತರಗೆಲೆಯಂತೆ ಹಾರಿ ಹೋಗುತ್ತವೆ ಎನ್ನುವುದನ್ನು ಮರೆಯಬಾರದು. -ಎ.ಬಿ.ಧಾರವಾಡಕರ