ಬೆಳಗಾವಿ : ರಾಜ್ಯದ ವಿಶ್ವವಿದ್ಯಾಲಯಗಳ ಕುಲಪತಿಗಳು ತಾವು ಸೇವೆಯಿಂದ ನಿವೃತ್ತಿಯಾಗುವ ಎರಡು ತಿಂಗಳ ಅವಧಿಯಲ್ಲಿ ಹಣಕಾಸು, ಸಿಬ್ಬಂದಿ ನೇಮಕಾತಿ, ಯೋಜನೆ, ಕಟ್ಟಡ ನಿರ್ಮಾಣ ಮುಂತಾದ ಕಾರ್ಯಗಳನ್ನು ಕೈಗೆತ್ತಿಕೊಳ್ಳುವಂತಿಲ್ಲ ಎಂಬ ಕಟ್ಟಳೆ ಇದೆ. ವಿಶ್ವವಿದ್ಯಾಲಯಗಳ ಕುಲಾಧಿಪತಿಗಳೂ ಆಗಿರುವ ರಾಜ್ಯದ ರಾಜ್ಯಪಾಲರು 15-7-2016 ರಂದು ಹೊರಡಿಸಿರುವ ನಿಯಮಗಳಲ್ಲಿ 5ನೇ ನಿಯಮದಲ್ಲಿ ಈ ಕುರಿತು ಸೂಚಿಸಲಾಗಿದೆ. ಅತೀ ಅವಶ್ಯವಿದ್ದರೆ ಇದಕ್ಕೆ ರಾಜಪಾಲರ ವಿಶೇಷ ಅನುಮತಿ ಪಡೆಯಬೇಕು.
ಆದರೆ ಬೆಳಗಾವಿಯಲ್ಲಿ ಮುಖ್ಯ ಕಚೇರಿ ಹೊಂದಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಕರಿಸಿದ್ದಪ್ಪ ಅವರು ಇದೇ ಸೆಪ್ಟೆಂಬರ್ 30ರಂದು ಸೇವೆಯಿಂದ ನಿವೃತ್ತರಾಗಲಿದ್ದು ಎರಡು ತಿಂಗಳಲ್ಲಿ ಕೋಟ್ಯಾಂತರ ರೂಪಾಯಿಯ ಯೋಜನೆಗಳನ್ನು ಕೈಗೆತ್ತಿಕೊಂಡು ಹಣವನ್ನೂ ಬಿಡುಗಡೆ ಮಾಡಿದ್ದಾರೆ.
ಇದೇ ತಿಂಗಳ ಕೊನೆಯ ದಿನ ಸೇವೆಯಿಂದ ನಿವೃತ್ತರಾಗಲಿರುವ ಕರಿಸಿದ್ದಪ್ಪ ಅವರ ನಂತರದ ಕುಲಪತಿ ಆಯ್ಕೆಗೆ ರಾಜ್ಯಪಾಲ ಥಾವರ ಚಂದ ಗೆಹಲೊಟ್ ಅವರು ಮೂವರು ಶಿಕ್ಷಣ ತಜ್ಞರ ಸಮಿತಿ ನೇಮಿಸಿ ಕಾರ್ಯಪ್ರವೃತರಾಗಿರುವ ಹಂತದಲ್ಲಿ ವಿಶ್ವವಿದ್ಯಾಲಯವು ಅವರ ಆಜ್ಞೆ ಮೀರಿ ನಡೆದುಕೊಂಡಿರುವದು ಆಕ್ಷೇಪಾರ್ಹವಾಗಿದೆ ಎಂದು ವಿಶ್ವವಿದ್ಯಾಲಯದ ನಿವೃತ್ತ ಕುಲಪತಿಯೊಬ್ಬರು ತಿಳಿಸಿದ್ದಾರೆ.
ವಿಟಿಯುದಲ್ಲಿ ಉನ್ನತ ಹುದ್ದೆಯಲ್ಲಿದ್ದು ನಿವೃತ್ತರಾಗಿರುವ ಅನೇಕರು, ಕುಲಪತಿ ಕರಿಸಿದ್ದಪ್ಪ ಅವರು ನಿಯಮ ಮೀರಿರುವ ಕುರಿತು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ರಾಜ್ಯಪಾಲರು ಈ ಕುರಿತು ಗಮನಹರಿಸಬೇಕೆಂದೂ ಪತ್ರಿಕೆಯೊಂದಿಗೆ ಮಾತನಾಡುತ್ತ ಅವರು ಕೇಳಿಕೊಂಡರು.
ಸಮದರ್ಶಿಗೆ ದೊರೆತ ದಾಖಲೆಗಳ ಪ್ರಕಾರ, ಕುಲಪತಿ ಕರಿಸಿದ್ದಪ್ಪ ಅವರು ಕಲ್ಯಾಣ ಕರ್ನಾಟಕ ಯೋಜನೆಯಡಿ ಕಲಬುರಗಿಯಲ್ಲಿರುವ ವಿಶ್ವವಿದ್ಯಾಲಯದ ಕೇಂದ್ರದಲ್ಲಿ ಇಂಜಿನೀಯರುಗಳಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡುವ ಕೇಂದ್ರ ಸ್ಥಾಪಿಸಲು 9,85,50,000 ರೂಪಾಯಿಯನ್ನು 5-8-2022 ರಂದು ಬೆಂಗಳೂರಿನ ರಾಮಚಂದ್ರಪುರದ ರೆಡಿನಟೆಕ್ ಇಂಡಿಯಾಗೆ ಗುತ್ತಿಗೆ ನೀಡಿ 14 ತಿಂಗಳೊಳಗೆ ಕೆಲಸ ಪೂರೈಸಲು ಸೂಚಿಸಿದ್ದಾರೆ.
ಮೈಸೂರಿನ ಚೋರನಹಳ್ಳಿಯಲ್ಲಿ ಕೌಶಲ್ಯಾಭಿವೃದ್ಧಿ ಕುರಿತು ಇಂಜಿನೀಯರುಗಳಿಗೆ ತರಬೇತಿ ನೀಡಲು ನವೋದಯ ಕೇಂದ್ರ ಸ್ಥಾಪಿಸಲು ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಕರ್ನಾಟಕ ಗೃಹ ಮಂಡಳಿಗೆ 20 ಕೋಟಿ ರೂಪಾಯಿಯನ್ನು 1-9-2022 ರಂದು ನೀಡಿದೆ. ಒಟ್ಟು 60 ಕೋಟಿ ರೂಪಾಯಿ ಮೊತ್ತದ ಯೋಜನೆಯ ಎರಡನೇ ಕಂತೆಂದು ಈ ಹಣವನ್ನು ಬೆಳಗಾವಿಯ ವಿಶ್ವವಿದ್ಯಾಲಯದ ಆವರಣದಲ್ಲಿರುವ ಭಾರತೀಯ ಸ್ಟೇಟ್ ಬ್ಯಾಂಕಿನ ತನ್ನ ಖಾತೆಯ ಚೆಕ್ ನಂಬರ್ 160146 ರ ಮೂಲಕ ಸಂದಾಯ ಮಾಡಲಾಗಿದೆ.
ಬೆಳಗಾವಿ, ಕೋಲಾರ, ಮೈಸೂರು ಮತ್ತು ಮುದ್ದೇನಹಳ್ಳಿಯಲ್ಲಿರುವ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರಗಳಲ್ಲಿ ಅಭಿವೃದ್ಧಿಗೆ ಬೆಂಗಳೂರಿನ ಜಯನಗರದಲ್ಲಿರುವ M/s ARK ಇನ್ಫೋ ಸೊಲ್ಯೂಷನ್ ಪ್ರೈವೇಟ್ ಲಿಮಿಟೆಡ್ ಗೆ 18% ಜಿಎಸ್ ಟಿಯೊಂದಿಗೆ 86,10,000 ರೂಪಾಯಿಯ ಪರ್ಚೆಜ್ ಆರ್ಡರ್ 11-8-2022 ರಂದು ನೀಡಿದೆ.
ಈ ಮೊದಲು ಬೆಳಗಾವಿಯ ಕರ್ನಾಟಕ ಕಾನೂನು ಸಂಸ್ಥೆಯ (ಕೆ ಎಲ್ ಎಸ್ ) ಗೋಗಟೆ ಅಭಿಯಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯರಾಗಿದ್ದ, ಸದ್ಯ ವಿಶ್ವವಿದ್ಯಾಲಯದ ರಜಿಸ್ಟ್ರಾರ್ ಆಗಿರುವ ಆನಂದ ದೇಶಪಾಂಡೆ ಅವರು ಈ ಹಣವನ್ನು ಬಿಡುಗಡೆಗೊಳಿಸಿದ್ದಾರೆ. ವಿಶ್ವವಿದ್ಯಾಲಯದ ಕುಲಪತಿ ಹುದ್ದೆಯ ಆಕಾಂಕ್ಷಿಗಳಲ್ಲಿ ಆನಂದ ದೇಶಪಾಂಡೆ ಅವರೂ ಒಬ್ಬರಾಗಿದ್ದು ರಾಜ್ಯಪಾಲರಿಗೆ ಈ ಬಗ್ಗೆ ಅವರು ಅರ್ಜಿ ಸಲ್ಲಿಸಿದ್ದಾರೆ.