ಸಮದರ್ಶಿ ವಿಶೇಷ
ಬೆಳಗಾವಿ: ನೀರಿನ ಕೊರತೆಯಿಂದ 166 ವರ್ಷಗಳ ಹಳೆಯ ಉತ್ತರ ಕರ್ನಾಟಕ ಭಾಗದ ಅತ್ಯಂತ ಪ್ರತಿಷ್ಠಿತ ಕ್ಯಾಂಪ್ ಪ್ರದೇಶದ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಮಾಧ್ಯಮಿಕ ಸೇಂಟ್ ಪಾಲ್ಸ್ ಶಾಲೆಯು ಶನಿವಾರದಿಂದ ಆನಲೈನ್ ಅಭ್ಯಾಸ ಪ್ರಾರಂಭಿಸಲಿದೆ.
ಈ ಕುರಿತು ವಿದ್ಯಾರ್ಥಿಗಳ ಪಾಲಕರಿಗೆ ಶಾಲೆಯಿಂದ ಮೊಬೈಲ್ ವಾಟ್ಸಪ್ ಸಂದೇಶ ಕಳುಹಿಸಲಾಗಿದ್ದು, ಶನಿವಾರದಿಂದ ಮುಂದಿನ ಆದೇಶ ನೀಡುವವರೆಗೆ ಶಾಲೆಗೆ ಮಕ್ಕಳನ್ನು ಕಳುಹಿಸಬೇಡಿ. ಅಲ್ಲಿಯವರೆಗೂ ಮಕ್ಕಳಿಗೆ ಮೊಬೈಲ್, ಲ್ಯಾಪ್ ಟಾಪ್, ಕಂಪ್ಯೂಟರ್ ಮೂಲಕ ಆನ್ಲೈನ್ ತರಗತಿ ತೆಗೆದುಕೊಳ್ಳಲಾಗುವುದು. ಶಾಲೆಗೆ ನೀರು ಸರಬರಾಜು ಮಾಡುವ ಮೂಲಗಳಾದ ಕೊಳವೆ ಮತ್ತು ತೆರೆದ ಬಾವಿಗಳು ಬತ್ತಿ ಹೋಗಿವೆ. ಹಾಗಾಗಿ ಶಾಲೆಯ ಕ್ಯಾಂಪಸ್ ನಲ್ಲಿ ವ್ಯಾಸಂಗ ಮಾಡುವ ಸುಮಾರು 2,200 ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ, ಸಹಕರಿಸಿ ಎಂದು ಶಾಲೆ ವಿನಂತಿಸಿಕೊಂಡಿದೆ.
ಸೋಮವಾರದವರೆಗೆ ಮಳೆಯಾಗದಿದ್ದರೆ, ಕ್ಯಾಂಟೋನ್ಮೆಂಟ್ ವಲಯದ ಸೇಂಟ ಜೋಸೆಫ್ ಮತ್ತು ಇತರ ಕೆಲವು ಶಾಲೆಗಳೂ ಕೂಡ ಕೋವಿಡ್ ಲಾಕಡೌನ್ ಸಂದರ್ಭದಲ್ಲಿ ನಡೆಸಿದಂತೆ ಆನಲೈನ್ ಅಭ್ಯಾಸಕ್ಕೆ ತೆರಳಲಿವೆ ಎನ್ನಲಾಗುತ್ತಿದೆ.
ಶಿಕ್ಷಣ ಸಂಸ್ಥೆಗಳು ಮಾತ್ರವಲ್ಲ, ಅನೇಕ ಕೈಗಾರಿಕೆಗಳು, ಉದ್ದಿಮೆಗಳೂ ಶಿಫ್ಟ್ ಸಂಖ್ಯೆ ಕಡಿಮೆ ಮಾಡುತ್ತಿವೆ. ಅನೇಕ ಖಾಸಗಿ ಆಸ್ಪತ್ರೆಗಳು ಕೇವಲ ಗಂಭೀರವಾದ ಶಸ್ತ್ರ ಚಿಕಿತ್ಸೆ ಮಾತ್ರ ಮಾಡುತ್ತಿವೆ. ಸುಮಾರು ಒಂದು ಸಾವಿರ ಒಳರೋಗಿಗಳನ್ನು ಹೊಂದಿರುವ ಜಿಲ್ಲಾ ಆಸ್ಪತ್ರೆ ಕೂಡ ಚಿಕ್ಕಪುಟ್ಟ ಶಸ್ತ್ರ ಚಿಕಿತ್ಸೆಗಳನ್ನು ಮುಂದೂಡಿ ಕೇವಲ ಗಂಭೀರ ಶಸ್ತ್ರಚಿಕಿತ್ಸೆಗಳನ್ನು ಮಾತ್ರ ಮಾಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಸುಮಾರು 15 ವರುಷಗಳ ಹಿಂದೆ, ತೀವ್ರ ನೀರಿನ ಕೊರತೆಯಿಂದ ಜಿಲ್ಲಾ ಆಸ್ಪತ್ರೆ ಇದೇ ಪದ್ಧತಿ ಪಾಲಿಸಿತ್ತು.
ಇನ್ನೊಂದು ವಾರದಲ್ಲಿ ಮಳೆ ಬಾರದೇ ಹೋದರೆ 7 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಬೆಳಗಾವಿ ನಗರದಲ್ಲಿ ನೀರಿಗಾಗಿ ಹಾಹಾ:ಕಾರ ಉಂಟಾಗಲಿದೆ. ನಗರದ ಸರಕಾರಿ ಮತ್ತು ಖಾಸಗಿ ತೆರೆದ ಮತ್ತು ಕೊಳವೆ ಬಾವಿಗಳು ಬತ್ತಿ ಹೋಗಿವೆ. ಖಾಸಗಿ ನೀರಿನವರು ಸಾವಿರ ಲೀಟರ್ ನ ಒಂದು ಟ್ಯಾಂಕರ್ ಬೆಲೆ ನೀರಿಗೆ ₹ 650 ರಿಂದ ₹ 1,000 ಕ್ಕೇರಿಸಿದ್ದಾರೆ. ಅದೂ ಸಹ ಬುಕ್ ಮಾಡಿದ ಎರಡು ದಿನಗಳ ನಂತರ ಸರಬರಾಜು ಮಾಡಲಾಗುತ್ತಿದೆ.
ನೀರಿನ ಅತೀವ ಕೊರತೆಯೆದುರಿಸುತ್ತಿರುವ ಬೆಳಗಾವಿ ನಗರಕ್ಕೆ ನೀರು ಸರಬರಾಜು ಮಾಡುವ ರಕ್ಕಸಕೊಪ್ಪ ಜಲಾಶಯದಲ್ಲಿ ಡೆಡ್ ಸ್ಟೋರೇಜ್ ಹೊರತು ಪಡೆಸಿ ಕೇವಲ ಅರ್ಧ ಅಡಿ ನೀರು ಮಾತ್ರ ಉಳಿದಿದೆ. 5-6 ದಿನಕೊಮ್ಮೆ ನೀರು ಸರಬರಾಜು ಮಾಡಿದರೂ 10 ದಿನಕ್ಕೆ ಸಾಕಾಗಬಹುದು. ಇನ್ನೊಂದು ವಾರದಲ್ಲಿ ಮಳೆ ಬಾರದಿದ್ದರೆ ಪರಸ್ಥಿತಿ ಇನ್ನಷ್ಟು ಕಠಿಣವಾಗಿ, ನೀರಿಗೆ ಹಾಹಾಕಾರ ಉಂಟಾಗುವ ಸಾಧ್ಯತೆಯಿದೆ.
ಈ ಕುರಿತು ಶುಕ್ರವಾರ ತಡರಾತ್ರಿ ಸೇಂಟ ಪಾಲ್ಸ ಶಾಲೆಯ ಪ್ರಾಚಾರ್ಯ ಫಾದರ್ ಸೆಬಾಸ್ಟಿನ್ ಅವರು ಪ್ರತಿಕೃಯಿಸಿ, ಶಾಲೆಯ ಪಾಲಕರಿಗೆ ಕಳುಹಿಸಿದ ಸಂದೇಶದ ನಂತರ ಕೂಡಲೇ ಸ್ಪಂದಿಸಿದ ಬೆಳಗಾವಿ ಕ್ಯಾಂಟೋನಮೆಂಟ್ ಬೋರ್ಡನ ಹಿಂದಿನ ಉಪಾಧ್ಯಕ್ಷ ಸಾಜೀದ ಶೇಖ ಅವರು, ತಮ್ಮ ಸ್ವಂತ ಬಾವಿಗಳಿಂದ ಟ್ಯಾಂಕರ್ ಗಳಲ್ಲಿ ನೀರು ತುಂಬಿಸಿ ಖುದ್ದಾಗಿ ಚಾಲನೆ ಮಾಡುತ್ತ ಎರಡು ಟ್ಯಾಂಕ್ ನೀರನ್ನು ಸರಬರಾಜು ಮಾಡಿದ್ದಾರೆ. ಇದರಿಂದ ಎರಡು ದಿನ ನಿರ್ವಹಿಸಬಹುದು ಎಂದು ತಿಳಿಸಿದರು. ಸಮದರ್ಶಿಯ ಕರೆಗೆ ಕೂಡಲೇ ಸ್ಪಂದಿಸಿದ ಶೇಖ ಅವರು, ತಕ್ಷಣವೇ ಎರಡು ಟ್ರಿಪ್ ನೀರನ್ನು ಶಾಲೆಗೆ ಪೂರೈಸಿ ಮಾನವೀಯತೆ ಮೆರೆದಿದ್ದಾರೆ.
ನೀರಿನ ಸಮಸ್ಯೆ ಬಗ್ಗೆ ಸಮದರ್ಶಿಗೆ ಪ್ರತಿಕ್ರಿಯಿಸಿರುವ ಬೆಳಗಾವಿ ಉತ್ತರ ಕಾಂಗ್ರೆಸ್ ಶಾಸಕ ಆಸೀಫ ಸೇಠ ಅವರು, ರಕ್ಕಸಕೊಪ್ಪ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದರೂ ಆತಂಕ ಪಡುವ ಕಾರಣವಿಲ್ಲ. ಹಿಡಕಲ್ ಜಲಾಶಯದಿಂದ ಮೊದಲಿಗಿಂತ ಹೆಚ್ಚು ನೀರು ರಕ್ಕಸಕೊಪ್ಪ ಜಲಾಶಯಕ್ಕೆ ಬಿಡುಗಡೆ ಮಾಡಲಾಗುವುದು. ಅಲ್ಲದೇ ಬೆಳಗಾವಿ ನಗರದಲ್ಲಿ 100 ಹೊಸ ಕೊಳವೆ ಬಾವಿ ತೋಡಿಸಲು ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರಿಗೆ ಸೂಚಿಸಲಾಗಿದೆ. ಕೂಡಲೇ ಕೊಳವೆ ಬಾವಿ ತೋಡಿ ನೀರು ಪೂರೈಸಲಾಗುವದು ಎಂದು ಅವರು ತಿಳಿಸಿದರು.