ಕೋಮು ಭಾವನೆ ಪ್ರಚೋದಿಸುವ ಯಾವುದೇ ಸಂಘಟನೆ ಇದ್ದರೂ ನಿಷೇಧಿಸುತ್ತೇವೆ –ಎಂ.ಬಿ.ಪಾಟೀಲ

A B Dharwadkar
ಕೋಮು ಭಾವನೆ ಪ್ರಚೋದಿಸುವ ಯಾವುದೇ ಸಂಘಟನೆ ಇದ್ದರೂ ನಿಷೇಧಿಸುತ್ತೇವೆ –ಎಂ.ಬಿ.ಪಾಟೀಲ

ವಿಜಯಪುರ : ಕೋಮು ಭಾವನೆ ಕೆರಳಿಸುವ ಬಜರಂಗದಳ ಮತ್ತು ಪಿಎಫ್‍ಐ ಮಾತ್ರವಲ್ಲ ಹಿಂದೂ, ಮುಸ್ಮಿಮ, ಕ್ರಿಶ್ಚಿಯನ್ ಸೇರಿದಂತೆ ಯಾವುದೇ ಧಾರ್ಮಿಕ ಸಂಘಟನೆ ಇದ್ದರೂ ನಿಷೇಧಿಸಲಾಗುತ್ತದೆ. ಜನರ ಮುಂದೆ ಹೋಗಲು ಏನೂ ವಿಷಯ ಇಲ್ಲದ ಪ್ರಧಾನಿ ಮೋದಿ ಅವರು ಬಜರಂಗದಳದ ವಿಷಯವನ್ನು ಪ್ರಸ್ತಾಪಿಸಲು ಮುಂದಾಗಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಹೇಳಿದ್ದಾರೆ.

ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಜಾಬ್, ಹಲಾಲ್ ಅಂತೆಲ್ಲ ಭಾವನೆ ಪ್ರಚೋದನಾತ್ಮಕ ವಿಚಾರಗಳಿಂದ ಅಧಿಕಾರ ನಡೆಸಿದ ಬಿಜೆಪಿ ನಾಯಕರಿಗೆ ಅಭಿವೃದ್ಧಿ ವಿಷಯ ಮಾಡಿದ್ದನ್ನು ಹೇಳಿಕೊಳ್ಳಲು ಏನೂ ಇಲ್ಲ. ಹೀಗಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇದೀಗ ಬಜರಂಗದಳ ನಿಷೇಧದ ಕುರಿತ ನಮ್ಮ ಪಕ್ಷದ ಪ್ರಣಾಳಿಕೆ ವಿಷಯ ಪ್ರಸ್ತಾಪಿಸುತ್ತಿದ್ದಾರೆ ಎಂದರು.

ಕಾಂಗ್ರೆಸ್ ಲಿಂಗಾಯತ ದಾಳಕ್ಕೆ ಜಗದೀಶ ಶೆಟ್ಟರ್, ಲಕ್ಷ್ಮಣ ಸವದಿ ಬಲಿಯಾಗಲಿದ್ದಾರೆ ಎಂದು ಅಪಪ್ರಚಾರ ನಡೆಸಿದ್ದಾರೆ. ವೀರೇಂದ್ರ ಪಾಟೀಲ ಅವರ ಸಂದರ್ಭವನ್ನು ಅನಗತ್ಯವಾಗಿ ಎಳೆದು ತರುತ್ತಿದ್ದಾರೆ. ಅವಾಸ್ತವ ಸಂಗತಿಗಳನ್ನು ಹೇಳುತ್ತಿದ್ದಾರೆ ಎಂದು ದೂರಿದರು.

ಲಿಂಗಾಯತ ನಾಯಕ ಯಡಿಯೂರಪ್ಪ ಅವರನ್ನು ಬಳಸಿಕೊಂಡು ಬಿಜೆಪಿ ನಾಯಕರು ಅನೈತಿಕ ಮಾರ್ಗದಲ್ಲಿ ಸರ್ಕಾರವನ್ನು ಅಧಿಕಾರಕ್ಕೆ ತಂದರೂ ಅವರನ್ನೇ ಅಧಿಕಾರದಿಂದ ಕೆಳಗೆ ಇಳಿಸಿದರು. ಜನಸಂಘದ ಕಾಲದಿಂದ ಬಿಜೆಪಿ ಕಟ್ಟಿದ ಆರು ಬಾರಿ ಗೆದ್ದಿದ್ದ ಜಗದೀಶ ಶೆಟ್ಟರ್ ಅವರಿಗೆ ಟಿಕೆಟ್ ನೀಡದೇ ಮೋಸ ಮಾಡಿದರು. ಇದೀಗ ಜಗದೀಶ ಶೆಟ್ಟರ್, ಲಕ್ಷ್ಮಣ ಸವದಿ ಅವರ ವಿರುದ್ಧ ಲಿಂಗಾಯತ ನಾಯಕ ಯಡಿಯೂರಪ್ಪ ಅವರನ್ನೇ ಬಳಸಲಾಗುತ್ತಿದೆ. ಬಿಜೆಪಿ ಪಕ್ಷದಲ್ಲಿ ಲಿಂಗಾಯತರನ್ನು ಬಳಸಿ ಬಿಸಾಡುವುದೇ ಕೆಲಸ ಎಂದರು.

ಡಬಲ್ ಎಂಜಿನ್‍ನ ಎರಡೂ ಸರ್ಕಾರಗಳ ವೈಫಲ್ಯದಿಂದ ರಾಜ್ಯದ ಜನ ಸಂಕಷ್ಟ್ಟ ಅನುಭವಿಸುತ್ತಿದ್ದು, ಮೋದಿ ಅವರ ಅಚ್ಛೇ ದಿನ್ ಬರಲೇ ಇಲ್ಲ. ಬದಲಾಗಿ ಜನ ದುಸ್ಥಿತಿ ಎದುರಾಗಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರ ಸರ್ಕಾರದ ಮಂತ್ರಿಗಳೆಲ್ಲ ಕರ್ನಾಟಕದಲ್ಲಿ ಠಿಕಾಣಿ ಹೂಡಿದ್ದಾರೆ ಎಂದು ಅವರು ಗೇಲಿ ಮಾಡಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.