ಮೈಸೂರು: ಗುಂಬಜ್ ಮಾದರಿಯ ಬಸ್ ನಿಲ್ದಾಣ ತೆರವುಗೊಳಿಸುವಂತೆ ಸಂಸದ ಪ್ರತಾಪ ಸಿಂಹ ಜಿಲ್ಲಾಡಳಿತಕ್ಕೆ ಗಡುವು ನೀಡಿರುವ ವಿಚಾರವಾಗಿ ಪ್ರತಿಕ್ರಿಯಿಸಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಒಬ್ಬ ಸಂಸದನಿಗೆ ಸಾಮಾನ್ಯ ಜ್ಞಾನ ಇಲ್ಲ ಎಂದರೆ ಏನು ಹೇಳುವುದು ಎಂದು ಕಿಡಿಕಾರಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ, ಗುಂಬಜ್ ಒಡೆಯುತ್ತೇನೆ ಅನ್ನೋದಕ್ಕೆ ಪ್ರತಾಪ ಸಿಂಹ ಯಾರು ? ಅವರ ಮನೆಯಿಂದ ದುಡ್ಡು ಹಾಕಿ ಬಸ್ ನಿಲ್ದಾಣ ಮಾಡಿದ್ದಾರಾ ? ಅಧಿಕಾರಿಗಳು ವಿನ್ಯಾಸ ಮಾಡುವಾಗ ಏನು ಮಾಡುತ್ತಿದ್ದರು ? ಈಗ ಗುಂಬಜ್ ಮಾದರಿಯ ಬಸ್ ನಿಲ್ದಾಣ ಒಡೆಯುತ್ತೇನೆ ಎಂದರೆ ಏನರ್ಥ ?ಎಂದು ಪ್ರಶ್ನಿಸಿದ್ದಾರೆ.
ಅಶಾಂತಿ ನಿರ್ಮಿಸಲು ಪ್ರತಾಪ ಸಿಂಹ ಈ ರೀತಿ ಮಾತನಾಡುತ್ತಿದ್ದಾರೆ. ಅಧಿಕಾರಿಗಳು ಪ್ಲಾನ್ ಮಾಡಿ ಬಸ್ ನಿಲ್ದಾಣ ನಿರ್ಮಿಸಿದ್ದಾರೆ. ಓರ್ವ ಸಂಸದನಾಗಿ ಜ್ಞಾನವಿಲ್ಲವೆಂದರೆ ಹೇಗೆ ? ಎಂದು ವಾಗ್ದಾಳಿ ನಡೆಸಿದ್ದಾರೆ.