ಚಿಕ್ಕೋಡಿ, ನ. 11: ಎಲ್ಲೆಡೆ ಜನರು ದೀಪಾವಳಿ ಹಬ್ಬದ ಸಂಭ್ರಮದಲ್ಲಿದ್ದರೆ ಚಿಕ್ಕೋಡಿಯಲ್ಲಿ ರಾತ್ರೋರಾತ್ರಿ ಟಿಪ್ಪು ಸುಲ್ತಾನ್ ಸೇರಿದಂತೆ ಅನೇಕ ಮುಸ್ಲಿಮ ರಾಜರನ್ನು ಅವಮಾನಿಸುವ ವಾಟ್ಸಪ್ ಸ್ಟೇಟಸ್ ಹಾಗೂ ಬ್ಯಾನರ್ ಅಳವಡಿಕೆ ಮಾಡಿದ್ದರಿಂದಾಗಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಚಿಕ್ಕೋಡಿಯ ಹೊಸಪೇಟೆ ಗಲ್ಲಿಯಲ್ಲಿ ಕಿಡಗೇಡಿಗಳು ಟಿಪ್ಪು ಸುಲ್ತಾನ್ ಸೇರಿದಂತೆ ಮುಸ್ಲಿಮ ರಾಜರನ್ನು ಅವಮಾನಿಸುವ ವಾಟ್ಸಪ್ ಸ್ಟೇಟಸ್ ಇಟ್ಟಿದ್ದರು. ಇದಲ್ಲದೇ ಬ್ಯಾನರ್ ಕೂಡ ಹಾಕಿದ್ದರು.
ಈ ಘಟನೆ ಆಕ್ರೋಶಕ್ಕೆ ಕಾರಣವಾಯಿತಲ್ಲದೇ ಹಬ್ಬದ ಸಮಯದಲ್ಲಿ ಕಿಡಿಗೇಡಿಗಳು ಸಮಾಜದ ಶಾಂತಿಗೆ ಭಂಗ ತರುವಂತಹ ಕೆಲಸ ಮಾಡಿದ್ದು ವಾಟ್ಸಪ್ ಸ್ಟೇಟಸ್ ಇಟ್ಟವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಜನರ ಗುಂಪೊಂದು ಜಮಾಯಿಸಿತ್ತು
ಅವಹೇಳನಕಾರಿಯಾಗಿ ಭಿತ್ತಿಪತ್ರ, ಬ್ಯಾನರ್ ಹಾಕಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅಲ್ಪಸಂಖ್ಯಾತ ಸಮುದಾಯದ ಜನರು ಒತ್ತಾಯಿಸಿದ್ದಾರೆ. ವಾಟ್ಸಪ್ ಸ್ಟೇಟಸ್ನಲ್ಲಿ ಇಂತಹ ಪೋಸ್ಟರ್ಗಳನ್ನು ಶೇರ್ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಅವರು ಒತ್ತಾಯಿಸಿದ್ದಾರೆ.
ಇದರ ನಂತರ ಚಿಕ್ಕೋಡಿ ತಾಲೂಕಿನಲ್ಲಿ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದ್ದು ಮುಂಜಾಗ್ರತೆ ದೃಷ್ಟಿಯಿಂದ ಎಲ್ಲೆಡೆ ಪೊಲೀಸರನ್ನು ನಿಯೋಜನೆ ಮಾಡಲಾಯಿತು. ‘ಅಖಂಡ ಭಾರತ ಸಪ್ಮಾ ಹೈ ಅಫ್ಘಾನಿಸ್ತಾನ್ ತಕ್ ಅಪ್ನಾ ಹೈ’ ಅಖಂಡ ಭಾರತ ಹೆಸರಿನ ಬ್ಯಾನರ್ ಗೆ ಕೆಲವರು ಆಕ್ರೋಶ ಹೊರ ಹಾಕಿದರು. ಇದರಿಂದಾಗಿ ಸ್ಥಳಕ್ಕೆ ಡಿವೈಎಸ್ಪಿ ಸಿ.ಬಿ ಗೌಡರ, ಸಿಪಿಐ ಭೇಟಿ ನೀಡಿ ಪರಿಸ್ಥಿತಿಯನ್ನು ಹತೋಟಿಗೆ ತಂದರು.
ಪೊಲೀಸರು ಘಟನೆಯ ತನಿಖೆ ನಡೆಸಿ, ವಾಟ್ಸಪ್ ಸ್ಟೇಟಸ್ ಹಾಕಿ ಅಶಾಂತಿ ಕದಡಲು ಯತ್ನಿಸಿದ ಕಿಡಿಗೇಡಿಯನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ. ಚಿಕ್ಕೋಡಿಯ ಹೊಸಪೇಟೆ ಗಲ್ಲಿಯಲ್ಲಿ 50ಕ್ಕೂ ಹೆಚ್ಚು ಪೊಲೀಸರಿಂದ ಭದ್ರತೆ ನೀಡಲಾಗಿದೆ.
ದೀಪಾವಳಿ ನಿಮಿತ್ಯ ನಿರ್ಮಿಸುವ ಕೋಟೆ ಮಾದರಿ ಬಳಿ ಈ ಬ್ಯಾನರ್ ಹಾಕಲಾಗಿತ್ತು. ಬ್ಯಾನರ್ ಅಳವಡಿಸಿರುವ ಸ್ಥಳದಲ್ಲೂ ಪೊಲೀಸ್ ಬಿಗಿ ಬಂದೋಬಸ್ತ ನಿಯೋಜಿಸಲಾಗಿದೆ. ಘಟನೆ ಕುರಿತಂತೆ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.