ಬೆಂಗಳೂರು: ಮತದಾರರ ಪಟ್ಟಿ ಪರಿಷ್ಕರಣೆ ಹೆಸರಲ್ಲಿ ವೋಟರ್ ಐಡಿ ದುರ್ಬಳಕೆ ವಿಚಾರವಾಗಿ ಚಿಲುಮೆ ಸಂಸ್ಥೆಯ ಹಣಕಾಸಿನ ವಹಿವಾಟಿನ ಮೇಲೆ ಈ ಸಂಸ್ಥೆಗೆ ಹಣ ನೀಡಿದವರ ಮೇಲೆ ಯಾಕೆ ಸಿಬಿಐ, ಐಟಿ, ಇಡಿ ದಾಳಿ ನಡೆಸಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಈ ಸಂಬಂಧ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಖಾಸಗಿ ಸಂಸ್ಥೆ ಚಿಲುಮೆಗೆ ಮತದಾರರ ಪಟ್ಟಿ ಪರಿಷ್ಕರಣೆಗೆ ವಹಿಸಿದ್ದರ ಹಿಂದೆ ಬಿಬಿಎಂಪಿ ಮತ್ತು ಚುನಾವಣಾ ಆಯೋಗದ ಅಧಿಕಾರಿಗಳೂ ಇದ್ದಾರೆ. ಚುನಾವಣಾ ಆಯೋಗಕ್ಕೆ ಈ ಕುರಿತು ಮೊದಲೇ ಮಾಹಿತಿ ಇತ್ತು. ಚುನಾವಣಾ ಆಯೋಗದವರು ಬಿಬಿಎಂಪಿಗೆ ಈ ಕುರಿತು ಪತ್ರಗಳನ್ನೂ ಬರೆದಿದ್ದರು.
ಆದರೂ ಆಯೋಗಕ್ಕೂ ಕೇರ್ ಮಾಡದೇ ಚಿಲುಮೆ ಸಂಸ್ಥೆಯ ಅಕ್ರಮ ಹೆಚ್ಚಾಗುತ್ತಾ ಹೋಗಿದೆ. ಹಾಗಾಗಿ ಚುನಾವಣಾ ಆಯೋಗ ಈ ಅಕ್ರಮಕ್ಕೆ ಮೌನ ಸಮ್ಮತಿ ನೀಡಿದೆಯೇ, ಸುಪ್ರೀಮ ಕೋರ್ಟ ಚುನಾವಣಾ ಆಯೋಗದ ಮೇಲೆ ಮಾಡಿರುವ ವಿಮರ್ಶೆಗಳು ಸರಿಯಾಗಿವೆ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.