ಬಳ್ಳಾರಿ: ನನ್ನ ವಿರುದ್ಧ ಸೋಲಾರ್ ಹಗರಣದ ಆರೋಪ ಮಾಡಿದ್ದಾರೆ. ಪ್ರಕರಣವನ್ನು ಸಿಬಿಐ ತನಿಖೆಗೆ ಬೇಕಾದರೂ ಕೊಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ತಿಳಿಸಿದ್ದಾರೆ.
ಬಳ್ಳಾರಿಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ, ನನ್ನ ಅವಧಿಯ ಸೋಲಾರ್ ಯೋಜನೆ ಬಗ್ಗೆ ಚರ್ಚೆಗೆ ನಾನು ಸಿದ್ಧ. ಈಗ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿದೆ. ಹಗರಣ ನಡೆದಿದ್ದರೆ ತನಿಖೆಗೆ ಒಪ್ಪಿಸಲಿ. ಯೋಜನೆಗಳ ಬಗ್ಗೆ ಚರ್ಚೆಗೆ ನಾನು ರೆಡಿ. ಸಿಎಂ ಬೊಮ್ಮಾಯಿ ಯಾಕೆ ಮೌನವಾಗಿದ್ದಾರೆ. ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದ್ದಾರೆ.
ಕಾಂಗ್ರೆಸ್ 85% ಕಮಿಷನ್ ಸರ್ಕಾರವಾಗಿತ್ತು ಎಂದು ಸಿಎಂ ಈಗ ಆರೋಪ ಮಾಡುತ್ತಿದ್ದಾರೆ. ಮೂರುವರೆ ವರ್ಷಗಳಿಂದ ಬಿಜೆಪಿ ಅಧಿಕಾರದಲ್ಲಿದ್ದರೂ ಯಾಕೆ ತನಿಖೆಗೆ ಮುಂದಾಗಿಲ್ಲ. ರಾಜ್ಯದಲ್ಲಿರುವುದು ಬಿಜೆಪಿ ಸರ್ಕಾರ ಅಲ್ಲ. ಕಲುಷಿತ ಸರ್ಕಾರ. ರಾಹುಲ್ ಯಾತ್ರೆ ವೇಳೆ ಬಿಜೆಪಿ ನಾಯಕರು ತಮ್ಮ ಸಾಧನೆ ಹೇಳುವುದು ಬಿಟ್ಟು ನಮ್ಮ ವಿರುದ್ಧ ಜಾಹೀರಾತು ನೀಡುತ್ತಿದ್ದಾರೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯಿಂದ ಬಿಜೆಪಿಯವರಿಗೆ ಆತಂಕ ಶುರುವಾಗಿದೆ ಎಂದು ವಾಗ್ದಾಳಿ ನಡೆಸಿದರು.