ಹೊಸದಿಲ್ಲಿ, ಮೇ ೨೩: ನಾನು ದೇವರಿಂದ ಕಳುಹಿಸಲ್ಪಟ್ಟಿದ್ದೇನೆ ಎಂದು ನನಗೆ ಮನವರಿಕೆಯಾಗಿದೆ, ಈ ರೀತಿಯ ಶಕ್ತಿಯು ಜೈವಿಕ ದೇಹದಿಂದ ಬರಲು ಸಾಧ್ಯವಿಲ್ಲ, ದೇವರು ಮಾತ್ರ ಅಂಥ ಶಕ್ತಿಯನ್ನು ನೀಡಬಲ್ಲನು ಎಂದು ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಹೇಳಿಕೆ ಎಲ್ಲೆಡೆ ವ್ಯಾಪಕ ಅಪಹಾಸ್ಯಕ್ಕೀಡಾಗಿದೆ.
ಪ್ರಧಾನಿ ಮೋದಿಯ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ನೀಡುತ್ತಿರುವಂತಹ ಹೇಳಿಕೆಗಳನ್ನು ಜನಸಾಮಾನ್ಯರಲ್ಲಿ ಯಾರಾದರೂ ನೀಡಿದ್ದರೆ ಅವರನ್ನು ನೇರವಾಗಿ ಮಾನಸಿಕ ತಜ್ಞರ ಬಳಿ ಕರೆದೊಯ್ಯಲಾಗುತ್ತದೆ ಎಂದು ಹೇಳಿದ್ದಾರೆ.
ಈಶಾನ್ಯ ದಿಲ್ಲಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕನ್ಹಯ್ಯ ಕುಮಾರ ಪರ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿಯ ಇತ್ತೀಚಿಗಿನ ಸಂದರ್ಶನಗಳಲ್ಲಿ ಅವರು ನೀಡುತ್ತಿರುವ ಹೇಳಿಕೆಗಳನ್ನು ಉಲ್ಲೇಖಿಸಿ, “ದೇವರು ಕಳುಹಿಸಿದ ಈ ವ್ಯಕ್ತಿ” ಕೇವಲ 22 ಜನರಿಗೆ ಕೆಲಸ ಮಾಡುತ್ತಿದ್ದು ಕೇವಲ 22 ಜನರಿಗೆ ಮಾತ್ರ ಪ್ರಧಾನಿ. ಪ್ರಧಾನಿ ಮೋದಿ ಎಲ್ಲವನ್ನೂ ಅಂಬಾನಿ ಮತ್ತು ಅದಾನಿ ಅವರ ಇಚ್ಛೆಗಳಂತೆ ಮಾಡುತ್ತಾರೆ. ದೇಶದ ಆಸ್ತಿ, ರೈಲ್ವೆ, ಬಂದರು, ವಿಮಾನ ನಿಲ್ದಾಣಗಳು ಅದಾನಿಗೆ ನೀಡುತ್ತಾರೆ. ಆದರೆ ಬಡ ಜನರು ಸಾಲ ಮನ್ನಾ, ರಸ್ತೆ, ಆಸ್ಪತ್ರೆ, ಶಿಕ್ಷಣ ಇತ್ಯಾದಿಗೆ ಕೇಳಿದಾಗ ಮೋದಿ ಏನನ್ನೂ ಮಾಡುವುದಿಲ್ಲ ಎಂದು ರಾಹುಲ್ ಹೇಳಿದರು.
ಗಂಗಾ ನದಿಯ ದಡದಲ್ಲಿ ಮೃತದೇಹಗಳು ಜಮಾಯಿಸುತ್ತಿದ್ದಾಗ, ‘ದೇವರ ದೂತರು’ ಮೊಬೈಲ್ ಫೋನ್ ಪ್ಲ್ಯಾಶ್ ಲೈಟನ್ನು ಆನ್ ಮಾಡಲು ಜನರಿಗೆ ಹೇಳಿದ್ದಾರೆ ಎಂದು ಕೋವಿಡ್ ಮೊದಲ ಹಂತದ ಲಾಕಡೌನ್ ವೇಳೆ ಪ್ರಧಾನಿ ಮೋದಿ ದೀಪಗಳು ಅಥವಾ ಟಾರ್ಚಗಳನ್ನು ಬೆಳಗಿಸಲು ನಾಗರಿಕರಿಗೆ ಸೂಚಿಸಿದ್ದನ್ನು ರಾಹುಲ್ ನೆನಪಿಸಿಕೊಂಡರು.
ಯಾರಾದರೂ ನನ್ನ ಬಳಿಗೆ ಬಂದು ತಾನು ಜೈವಿಕನಲ್ಲ ಮತ್ತು ದೇವರಿಂದ ಕಳುಹಿಸಲ್ಪಟ್ಟವನು ಎಂದು ಹೇಳಿದರೆ, ಅದನ್ನು ಯಾರಿಗೂ ಹೇಳಬೇಡಿ ಅಥವಾ ಇದನ್ನು ಜೋರಾಗಿ ಹೇಳಬೇಡಿ ಎಂದು ಕೈ ಮುಗಿದು ಕೇಳಿಕೊಳ್ಳುತ್ತೇನೆ. ಆದರೆ ಪ್ರಧಾನಿ ತಾನು ಜೈವಿಕ ಅಲ್ಲ ಎಂದು ಬಹಿರಂಗವಾಗಿ ಹೇಳುತ್ತಿದ್ದಾರೆ. ಬೇರೆ ಎಲ್ಲಾ ಜನರು ಜೈವಿಕರು ಮತ್ತು ನಾನು ಮಾತ್ರ ಅಲ್ಲ ಎಂದು ಹೇಳುತ್ತಿದ್ದಾರೆ ಎಂದು ರಾಹುಲ್ ವ್ಯಂಗ್ಯವಾಡಿದ್ದಾರೆ.
ಬೇರೆ ಯಾರಾದರೂ ಅಂತಹ ಮಾತುಗಳನ್ನು ಹೇಳಿದರೆ, ನೀವು ಏನು ಹೇಳುತ್ತೀರಿ? ನೀನು ನನ್ನನ್ನು ಕ್ಷಮಿಸು ಸಹೋದರ, ನೀನು ನಿನ್ನ ಕೆಲಸ ಮಾಡು, ನನ್ನ ಕೆಲಸ ಮಾಡಲು ನನಗೆ ಬಿಡು ಎಂದು ಹೇಳುತ್ತೀರಿ. ಆದರೆ ಅವರ ಭಕ್ತರು ಪ್ರಧಾನಿಯನ್ನು ಹೊಗಳುತ್ತಾರೆ ಮತ್ತು ಅವರು ದೇವರಿಂದ ಕಳುಹಿಸಲ್ಪಟ್ಟಿದ್ದಾರೆ ಎಂದು ಹೇಳುತ್ತಿದ್ದಾರೆ. ಸಾಂಕ್ರಾಮಿಕ ರೋಗದ ಸಮಯದಲ್ಲಿ ಚಪ್ಪಾಳೆ ತಟ್ಟುವಂತೆ ಅವರು ಜನರಿಗೆ ಹೇಳಿದ್ದಾರೆ. ಜನರು ಆಸ್ಪತ್ರೆಗಳ ಹೊರಗೆ ಕೊನೆಯುಸಿರೆಳೆದಾಗ, ಪ್ರಧಾನಿ ಇರಲಿಲ್ಲ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಈ ಜನರು ಯಾವತ್ತೂ ಭಾರತದ ಸಂವಿಧಾನ ಅಥವಾ ಧ್ವಜವನ್ನು ಒಪ್ಪಿಲ್ಲ. ಈ ಚುನಾವಣೆ ಭಾರತದ ಸಂವಿಧಾನವನ್ನು ರಕ್ಷಿಸಲು. ಅದು ಕೇವಲ ಒಂದು ಪುಸ್ತಕವಲ್ಲ, ಅದು ಸಾವಿರಾರು ವರ್ಷಗಳ ಸೈದ್ಧಾಂತಿಕ ಪರಂಪರೆಯನ್ನು ಹೊಂದಿದೆ ಎಂದು ರಾಹುಲ್ ಹೇಳಿದರು.
ಈ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ದ್ರಾವಿಡ ಮುನ್ನೇತ್ರ ಕಳಗಂ ನಾಯಕ ಎ ರಾಜಾ ಅವರು, ಪೆರಿಯಾರ್ ಅವರು ‘ದೇವರು ಅಸ್ತಿತ್ವದಲ್ಲಿಲ್ಲ’ ಎಂದು ಏಕೆ ಹೇಳಿದರು ಎಂಬುವುದು ಈಗ ಅನೇಕರಿಗೆ ಅರ್ಥವಾಗಿದೆ ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ನ ಲೋಕಸಭಾ ಅಭ್ಯರ್ಥಿ ಮಹುವಾ ಮೊಯಿತ್ರಾ ಮೋದಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ್ದು, ಅವರು ರಾಮನ ಬದಲಿಗೆ ದೇವಸ್ಥಾನಗಳಲ್ಲಿ ನರೇಂದ್ರ ಮೋದಿಯವರ ವಿಗ್ರಹಗಳನ್ನು ಪ್ರತಿಷ್ಠಾಪಿಸಬೇಕಿತ್ತು. ನರೇಂದ್ರ ಮೋದಿ ಮಾತನಾಡುವ ಕ್ಲಿಪ್ನ್ನು ನೋಡಿದೆ, ಅವರು ನಿಜವಾಗಿಯೂ ಮಾನವನಲ್ಲ, ದೈವಿಕವಾಗಿ ಹುಟ್ಟಿದ್ದಾರೆ, ನಮ್ಮೆಲ್ಲರನ್ನು ಉದ್ಧಾರ ಮಾಡಲು ಭೂಮಿಗೆ ಕಳುಹಿಸಲಾಗಿದೆ ಎಂದು ಅವರು ನಂಬುತ್ತಾರೆ. ರಾಮಲಲ್ಲಾ ಯಾಕೆ? ಬಿಜೆಪಿಯವರು ಎಲ್ಲ ದೇವಾಲಯಗಳಲ್ಲಿ ನಮೋ ಲಲ್ಲಾಗಳನ್ನು ಪ್ರತಿಷ್ಠಾಪಿಸಬೇಕಿತ್ತು ಎಂದು ಹೇಳಿದ್ದಾರೆ.
ನ್ಯೂಸ್ 18ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಪ್ರಧಾನಿ ಪ್ರಧಾನಿ ನರೇಂದ್ರ ಮೋದಿ ಅವರು, “ನನ್ನ ತಾಯಿ ಬದುಕಿರುವವರೆಗೂ ನಾನು ಜೈವಿಕವಾಗಿ ಹುಟ್ಟಿದ್ದೇನೆ ಎಂದು ಭಾವಿಸುತ್ತಿದ್ದೆ. ಆಕೆಯ ನಿಧನದ ನಂತರ, ನನ್ನ ಅನುಭವಗಳನ್ನು ನೋಡಿದಾಗ, ನಾನು ದೇವರಿಂದ ಕಳುಹಿಸಲ್ಪಟ್ಟಿದ್ದೇನೆ ಎಂದು ನನಗೆ ಮನವರಿಕೆಯಾಗಿದೆ. ಈ ಶಕ್ತಿ ನನ್ನ ದೇಹದ್ದಲ್ಲ. ಅದನ್ನು ದೇವರು ನನಗೆ ಕೊಟ್ಟಿದ್ದಾನೆ. ಅದಕ್ಕಾಗಿಯೇ ದೇವರು ನನಗೆ ಸಾಮರ್ಥ್ಯ, ಶಕ್ತಿ, ಶುದ್ಧ ಹೃದಯ ಮತ್ತು ಇದನ್ನು ಮಾಡಲು ಸ್ಫೂರ್ತಿ ನೀಡಿದ್ದಾನೆ. ನಾನು ದೇವರು ಕಳುಹಿಸಿದ ಸಾಧನವಲ್ಲದೆ ಬೇರೇನೂ ಅಲ್ಲ” ಎಂದು ಹೇಳಿದ್ದರು!.