ಬೆಳಗಾವಿ ನಗರಕ್ಕೆ ಬಂತು ಕಾಡಾನೆ!

A B Dharwadkar
ಬೆಳಗಾವಿ ನಗರಕ್ಕೆ ಬಂತು ಕಾಡಾನೆ!

ಬೆಳಗಾವಿ‌, ೧:  ಆಹಾರ ಅರಸಿ ಕಾಡಿನಿಂದ ಬೆಳಗಾವಿಗೆ ಬಂದ ಆನೆಯೊಂದು ಶುಕ್ರವಾರ ನಸುಕಿನ ಜಾವ ನಗರದ ಹೊರವಲಯದ ಹಿಂಡಾಲ್ಕೋ ಬಳಿಯ ಕಂಗ್ರಾಳಿಯಲ್ಲಿ ನಂತರ ಬಾಕ್ಸಿಟ್ ರಸ್ತೆಯ ಆಜಮ ನಗರ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಸಂಚರಿಸಿ ನಾಗರಿಕರಲ್ಲಿ ಆತಂಕ, ಮಕ್ಕಳಲ್ಲಿ ಸಂಭ್ರಮಕ್ಕೆ ಕಾರಣವಾಗಿತ್ತು.

ಅದೃಷ್ಟವಶಾತ್‌ ಯಾವುದೇ ಜೀವ ಮತ್ತು ಆಸ್ತಿ ಹಾನಿ ಸಂಭವಿಸಿಲ್ಲ. ಅದು ಬಹುಶ: ಕಾಕತಿ ಅರಣ್ಯ ಪ್ರದೇಶದಿಂದ ಬಂದಿದೆ ಎನ್ನಲಾಗಿದೆ.

ನಸುಕಿನ ಜಾವ ಕಂಗ್ರಾಳಿಯಲ್ಲಿ ವಾಕಿಂಗ್‌ ಹೋಗುತ್ತಿದ್ದ ಜನರು ಮೊದಲು ಆನೆಯನ್ನು ಕಂಡು ದಂಗಾದರು. ಈ ವಿಷಯ ನಗರದಲ್ಲಿ ಹರಡುತ್ತಿದ್ದಂತೆ ಜನ ತಂಡೋಪತಂಡವಾಗಿ ಆಗಮಿಸಿ ಆನೆ ನೋಡಲು ಮುಗಿಬಿದ್ದರು. ಆನೆ ಸಂಚಾರಿಸಿದೆಡೆಯಲ್ಲಿ ಜನ ವಿಡಿಯೋ ರೆಕಾರ್ಡಿಂಗ್ ಮಾಡುವುದು ಮತ್ತು ದೂರದಿಂದಲೇ ಸೆಲ್ಫಿ ತೆಗೆದುಕೊಳ್ಳುವುದು ಸಾಮಾನ್ಯವಾಗಿತ್ತು.

ಸುಮಾರು ಮೂರು ಗಂಟೆಗಳ ಕಾಲ ಕಂಗ್ರಾಳಿ ಸುತ್ತಮುತ್ತ ಪ್ರದೇಶಗಳಲ್ಲಿ ಸಂಚರಿಸಿದ ಆನೆಯು ಉಚಗಾವಿ ಕಡೆ ಸಾಗಿದೆ. ಕಾಡಾನೇ ನಗರಕ್ಕೆ ನುಗ್ಗಿರುವ ಮಾಹಿತಿ ಪಡೆದು ಧಾವಿಸಿದ ಅರಣ್ಯಾಧಿಕಾರಿಗಳು ಅದನ್ನು ಹಿಡಿಯಲು ಹರಸಾಹಸ ಪಡುತ್ತಿದ್ದಾರೆ. ಕಾಡಾನೇ ಆಗಿರುವುದರಿಂದ ಹಿಡಿಯುವುದು ಕಷ್ಟ, ಅದಕ್ಕೆ ಅರವಳಿಕೆಯ ಮದ್ದು ನೀಡಿ ನಂತರವಷ್ಟೇ ಬೃಹತ್ ಲಾರಿಯಲ್ಲಿ ಪುನಃ ಅರಣ್ಯಕ್ಕೆ ಸೇರಿಸುವುದು ಉತ್ತಮ ಉಪಾಯವೆಂದು ಚರ್ಚೆ ನಡೆದಿದೆ.

ಕಳೆದ ವರ್ಷ ಚಿರತೆ ಬೆಳಗಾವಿಯ ಜಾಧವ ನಗರದಲ್ಲಿ ಕಟ್ಟಡ ಕಾರ್ಮಿಕರೊಬ್ಬರನ್ನು ಗಾಯಗೊಳಿಸಿ ನಂತರ ರೇಸ್ ಕೋರ್ಸ ಮೈದಾನದಲ್ಲಿ ಸೇರಿ ಸುಮಾರು 1 ತಿಂಗಳು ಪೊಲೀಸರನ್ನು, ಅರಣ್ಯ ಅಧಿಕಾರಿಗಳನ್ನು ಅಲೆದಾಡಿಸಿತ್ತು.
ಜನರಲ್ಲಿ ಆತಂಕ ಸೃಷ್ಟಿ ಮಾಡಿ ಓರ್ವನಿಗೆ ಗಾಯ ಮಾಡಿ‌ ಹೋಗಿತ್ತು. ಈಗ ಆನೆ ಕಂಡ ಜನರಲ್ಲಿ ಆತಂಕ ಉಂಟಾಗಿದೆ.

ಕಳೆದ ಒಂದೆರಡು ದಶಕಗಳಲ್ಲಿ ಮನುಷ್ಯನ ಹಣದ ದಾಹಕ್ಕೆ ಅರಣ್ಯ ಪ್ರದೇಶ ಕಬಳಿಕೆ ಅವ್ಯಾಹತವಾಗಿ ನಡೆದಿದ್ದು ಅರಣ್ಯ ಜೀವಿಗಳಿಗೆ ನೆಲೆ ಇಲ್ಲದಂತಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.