ಬೆಳಗಾವಿ, 1: ಆಹಾರ ಅರಸಿ ಶುಕ್ರವಾರ ಸೂರ್ಯೋದಯದ ಸಮಯಕ್ಕೆ ಬೆಳಗಾವಿ ನಗರಕ್ಕೆ ಲಗ್ಗೆಯಿಟ್ಟಿದ್ದ ಗಂಡು ಕಾಡಾನೆ ಬೆಳಗಾವಿ ಉತ್ತರ ಭಾಗದ ಅನೇಕ ವಸತಿ ಪ್ರದೇಶಗಳಲ್ಲಿ ಅಲೆದಾಡಿದ ನಂತರ ಮಹಾರಾಷ್ಟ್ರದ ಅರಣ್ಯ ಪ್ರದೇಶಕ್ಕೆ ತೆರಳಿದೆ.
ನಿದ್ದೆಯಿಂದ ಜನ ಎಚ್ಚರಗೊಳ್ಳುವ ಸಮಯದಲ್ಲಿ ಅದು ಅಲೆದಾಡಿದ್ದರಿಂದ ಜನರ ಹೆಚ್ಚಿನ ಗದ್ದಲವಿರಲಿಲ್ಲ. ಹಾಗಾಗಿ ಆನೆ ಶಾಂತವಾಗಿ ವಸತಿ ಪ್ರದೇಶಗಳಲ್ಲಿ ಯಾವುದೇ ಅನಾಹುತ ಮಾಡದೇ ತೆರಳಿದೆ.
ದಟ್ಟ ಜನವಸತಿ ಪ್ರದೇಶಗಳಾದ ಆಜಮ ನಗರ, ಶಾಹೂ ನಗರ, ಬಾಕ್ಸೈಟ ರಸ್ತೆಯ ಬಸವ ಕಾಲೋನಿ, ಬಿ ಕೆ ಕಂಗ್ರಾಳಿ ಮುಂತಾದ ಪ್ರದೇಶಗಳಲ್ಲಿ ತಿರುಗಾಡಿದೆ. ವೈಭವ ನಗರಕ್ಕೆ ಎದುರಾಗಿರುವ ವಸತಿ ಪ್ರದೇಶಯೊಂದರ ಇಕ್ಕಟ್ಟಾದ ರಸ್ತೆಯಲ್ಲಿ ಅಡ್ಡವಾಗಿ ಸಿಕ್ಕಿಕೊಂಡಿದ್ದ ಬೃಹತ್ ಗಾತ್ರದ ಆನೆ ಕ್ಷಣಹೊತ್ತು ಹೇಗೆ ಹೊರಗೆ ಬರಬೇಕೆಂದು ತಿಳಿಯದೇ ಗೊಂದಲಕ್ಕೀಡಾಗಿತ್ತು. ಅಲ್ಲಿಂದ ಹೊರಗೆ ಬಂದು ಹಿಂಡಾಲ್ಕೋ ಕಾರ್ಖಾನೆಯ ಈಚೆ ಬದಿಯ ಸರ್ವಿಸ್ ರಸ್ತೆ ಮೂಲಕ ಮತ್ತೊಂದು ವಸತಿ ಪ್ರದೇಶಕ್ಕೆ ತೆರಳಿ ಅಲ್ಲಿ ನಿಲ್ಲಿಸಿದ್ದ ಒಂದು ದ್ವಿಚಕ್ರ ವಾಹನದ ಸೀಟ್ ಕಿತ್ತು ಎಸೆದಿದೆ.
ಅರಣ್ಯ ಇಲಾಖೆಯ ಸಮಯೋಚಿತ ಸಲಹೆಯಿಂದ ಜನ ಮಧ್ಯಾಹ್ನ ಆನೆಯನ್ನು ಕಂಡರೂ ಗಲಾಟೆ ಮಾಡದ್ದರಿಂದ, ಇಲಾಖೆ ಅದನ್ನು ಇತರ ಜನವಸತಿ ಪ್ರದೇಶಗಳಿಗೆ ಹೋಗದಂತೆ ಮಾಡಿ ಕಾಡಿನ ಮೂಲಕವೇ ದೂರದಿಂದ ಸಾಗಿಸಿಕೊಂಡು ಹೋಗಿ ಬಂದಿದ್ದ ಕಾಡಿಗೆ ದಾಟಿಸಿದರು.
ಮಹಾರಾಷ್ಟ್ರದ ಅಂಚಿನಲ್ಲಿರುವ ಬೆಕ್ಕಿನಕೇರಿ ಗ್ರಾಮದ ಹೊರವಲಯದ ಅರಣ್ಯ ಪ್ರದೇಶದಿಂದ ಅದನ್ನು ಸಾಗುವಂತೆ ಮಾಡುತ್ತಿದ್ದಾಗ ಅದು ಗ್ರಾಮಕ್ಕೆ ಹೋಯಿತು. ಅಲ್ಲಿಂದ ಹತ್ತಿರದಲ್ಲಿದ್ದ ಪುಟ್ಟ ಹೊಂಡದ ನೀರಿನ ಬಳಿ ತೆರಳಿ ನಂತರ ಕಾಡಿನ ಮೂಲಕ ಮಹಾರಾಷ್ಟ್ರಕ್ಕೆ ತೆರಳಿದೆ.
ಈ ಕುರಿತು ಸಮದರ್ಶಿಗೆ ಮಾಹಿತಿ ನೀಡಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್ ಕೆ ಕಳ್ಳೊಳ್ಳಿಕರ ಅವರು, ನಗರಕ್ಕೆ ಬಂದಿದ್ದ ಗಂಡಾನೆಯು ದಕ್ಷಿಣ ಮಹಾರಾಷ್ಟ್ರದ ಕಾಡಿನಿಂದ ಬಂದಿತ್ತು. ಅದು ಸಹಜವಾಗಿ ಬೆಳಗಾವಿ ಜಿಲ್ಲೆಯ ಕಾಕತಿ, ದಡ್ಡಿ ಅರಣ್ಯ ಪ್ರದೇಶಗಳಲ್ಲಿ ಆಗಾಗ ಕಾಣಿಸಿಕೊಳ್ಳುತ್ತದೆ ಮತ್ತು ಪ್ರತಿ ವರುಷ ಬೆಕ್ಕಿನಕೇರಿ ಗ್ರಾಮದ ಹಿಂದಿರುವ ಅರಣ್ಯ ಪ್ರದೇಶದವರೆಗೆ ಬರುತ್ತದೆ. ಆದರೆ ಈ ವರುಷ ಬೆಕ್ಕಿನಕೇರಿ ಗ್ರಾಮ ದಾಟಿ, ಬಹುಶಃ ಬೆಳಗಾವಿ ನಗರಕ್ಕೆ ಬಂದಿರಬಹುದು ಎಂದರು. ಈ ಆನೆಗೆ ಅಳವಡಿಸಿರುವ ಕಾಲರ್ ಐಡಿಯಿಂದ ಇದು ಮಹಾರಾಷ್ಟ್ರದಿಂದ ಬಂದಿದೆ ಎಂದು ಗೊತ್ತಾಗಿದೆ.
ನಸುಕಿನಲ್ಲಿ ನಗರಕ್ಕೆ ಆನೆ ಬಂದದ್ದು ಒಳ್ಳೆಯದಾಯಿತು. ಜನ ಹೊರಗೆ ಬರುವ ಹೊತ್ತಿಗೆ, ವಾಹನ ಸಂಚಾರ ಹೆಚ್ಚಾದ ನಂತರ ಬಂದಿದ್ದರೆ ಅಪಾಯಕ್ಕೆ ಆಸ್ಪದವಿತ್ತು. “ಹಾಗಾಗಿ ನಮ್ಮ ಇಲಾಖೆ ವಿವೇಕದಿಂದ ವರ್ತಿಸಿ ಆದಷ್ಟು ಅದನ್ನು ವಸತಿ ಪ್ರದೇಶದಿಂದ ದೂರವಿರುವಂತೆ ನೋಡಿಕೊಂಡು ಬೆಕ್ಕಿನಕೇರಿ ಗ್ರಾಮದ ಹೊರವಲಯದ ಮೂಲಕ ಅದನ್ನು ಪುನಃ ಅದರ ಸ್ಥಳಕ್ಕೆ ಯಶಸ್ವಿಯಾಗಿ ಸಾಗಿಸಿದ್ದಾರೆ” ಎಂದು ಡಿಸಿಎಫ್ ಕಲ್ಲೋಳಕರ ತಿಳಿಸಿದರು.
ಗಂಡಾನೆಗಳು ನಗರಗಳಿಗೆ ನುಗ್ಗಿ ಪುಂಡಾಟ ಮಾಡುವುದು, ಜನರ ಮತ್ತು ಮನೆಗಳ ಮೇಲೆ ದಾಳಿ ಮಾಡುವುದು ಸಾಮಾನ್ಯ. ಹಾಗಾಗಿ ನಾವು ಅವುಗಳನ್ನು ಪುನಃ ಅರಣ್ಯಕ್ಕೆ ಸಾಗಿಸುವುದು, ಅರವಳಿಕೆ ಚುಚ್ಚು ಮದ್ದು ನೀಡಿ ನಂತರ ಲಾರಿ ಮುಂತಾದ ವಾಹನಗಳಲ್ಲಿ ಹಾಕಿ ಅರಣ್ಯಕ್ಕೆ ಬಿಡುವುದು ಸಾಮಾನ್ಯ. ಇದೆಲ್ಲ ಸಿದ್ದ ಮಾಡಿಕೊಂಡು ಕಾರ್ಯಾಚರಣೆ ಮಾಡಿದ್ದೇವು” ಎಂದು ಅಧಿಕಾರಿ ಕಳ್ಳೊಳ್ಳಿಕರ ತಿಳಿಸಿದರು.