ಸಮದರ್ಶಿ ವಿಶೇಷ
ಬೆಳಗಾವಿ : ಎರಡನೇ ರಾಜಧಾನಿಯೆಂದು ಕರೆಸಿಕೊಂಡಿರುವ ಬೆಳಗಾವಿಯ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರಕಾರ ನಿರ್ಧರಿಸಿದ್ದು, ಅದರ ಪ್ರಾರಂಭಿಕ ಹಂತವೆಂದು ಬೆಳಗಾವಿ ಮಹಾನಗರಪಾಲಿಕೆ ವಾರ್ಡಗಳ ಪುನರ್ ನಿರ್ಮಾಣ ಮತ್ತು ಸುತ್ತಲಿನ ಗ್ರಾಮಗಳನ್ನು ಸೇರಿಸಿ ಬೆಂಗಳೂರು ಮಾದರಿಯಲ್ಲಿ “ಬೃಹತ್ ಬೆಳಗಾವಿ ಮಹಾನಗರಪಾಲಿಕೆ” (ಬಿಬಿಎಂಪಿ) ನಿರ್ಮಿಸಲಿದೆ.
ಬೆಳಗಾವಿ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿಯವರ ದೂರದೃಷ್ಠಿ ಇದಕ್ಕೆಲ್ಲ ಕಾರಣವಾಗಲಿದ್ದು ಬೆಳಗಾವಿ ಮಹಾನಗರಪಾಲಿಕೆಯನ್ನು ಬಿಬಿಎಂಪಿ ದರ್ಜೆಗೇರಿಸಿದರೆ ಸರಕಾರದಿಂದ ಹೆಚ್ಚಿನ ಅನುದಾನ ಬರುವುದು ಮಾತ್ರವಲ್ಲ, ಹೊಸದಾಗಿ ಸೇರಿಸಲ್ಪಡುವ ಗ್ರಾಮಗಳೂ ಅಭಿವೃದ್ಧಿ ಹೊಂದುತ್ತವೆ.
1984ರಲ್ಲಿ ಬೆಳಗಾವಿ ಪಟ್ಟಣವು ನಗರಸಭೆ ಸ್ಥಾನಹೊಂದಿತು. 1991ರಲ್ಲಿ 58 ವಾರ್ಡಗಳು ರಚಿಸಲ್ಪಟ್ಟು ಮಹಾನಗರಸಭೆಯಾಗಿ ಉನ್ನತ ದರ್ಜೆಗೇರಿತು. ಅಂದಿನಿಂದ ಸುಮಾರು 35 ವರ್ಷ ಗತಿಸಿದರೂ ಅದೇ ಸ್ಥಾನದಲ್ಲಿದೆ. ನಗರದ ಹೊರವಲಯ ಸಾಕಷ್ಟು ಬೆಳೆದಿದೆ. ದೂರದಲ್ಲಿದ್ದ ಗ್ರಾಮಗಳು ಈಗ ನಗರಕ್ಕೆ ಹೊಂದಿಕೊಂಡಿವೆ. ನಗರಕ್ಕೂ ಗ್ರಾಮಗಳಿಗೂ ವ್ಯತ್ಯಾಸ ಕಡಿಮೆಯಾಗಿದೆ. ಸುತ್ತಲಿನ ಗ್ರಾಮಗಳು ಪಂಚಾಯತ್ ವ್ಯಾಪ್ತಿಯಲ್ಲಿ ಬರುವುದರಿಂದ ಅವುಗಳಿಗೆ ಬರುವ ಅನುದಾನವೂ ಕಡಿಮೆಯೇ.
1991ರಲ್ಲಿ 58 ವಾರ್ಡಗಳು ರಚಣೆಯಾದಾಗ ಪ್ರತಿ ವಾರ್ಡಿನ ಜನಸಂಖ್ಯೆ ಅಂದಾಜು 25,000 ರಿಂದ 30,000 ಸಾವಿರ ಮತ್ತು ಮತದಾರರ ಸಂಖ್ಯೆ 4,500 ರಿಂದ 5,000 ಇತ್ತು. ಆದರೆ 2021ರಲ್ಲಿ ಜರುಗಿದ ಜನಗಣತಿಯ ಪ್ರಕರಣ ಬೆಳಗಾವಿ ನಗರದ ಅಂದಾಜು ಜನಸಂಖ್ಯೆ 7 ಲಕ್ಷ ಮತ್ತು ಪ್ರತಿದಿನ ಹೊರಗಿನಿಂದ ಬಂದು ಹೋಗುವವರ ಸಂಖ್ಯೆ 4 ಲಕ್ಷ. ಸರಕಾರದಿಂದ ನಗರಪಾಲಿಕೆಗೆ ಬರುವ ಅನುದಾನ ಸ್ವಲ್ಪ ಹೆಚ್ಚಾಗಿರಬಹುದು, ಆದರೆ ಮೂಲಭೂತ ಸೌಲಭ್ಯಗಳಲ್ಲಿ ಹೆಚ್ಚಳವಾಗಿಲ್ಲ.
ಜನಸಂಖ್ಯೆಯಾಧಾರದ ಮೇಲೆ ಈಗಿರುವ ವಾರ್ಡಗಳನ್ನು ಪುನಃ ರಚಿಸಿದರೆ, ವಾರ್ಡಗಳ ಸಂಖ್ಯೆ 58ರಿಂದ ಸುಮಾರು 75ರ ವರೆಗೂ ಮತ್ತು ಬೆಳಗಾವಿ ಸುತ್ತ ಬೆಳೆದಿರುವ ವಸತಿ ಪ್ರದೇಶ ಮತ್ತು ಸುತ್ತಲಿನ ಗ್ರಾಮಗಳನ್ನು ಸೇರಿಸಿದರೆ 90ಕ್ಕೂ ಹೆಚ್ಚು ವಾರ್ಡಗಳಾಗುತ್ತವೆ. ಆಗ ಬೆಳಗಾವಿ ಮಹಾನಗರಪಾಲಿಕೆಯು ಬೃಹತ್ ಬೆಳಗಾವಿ ಮಹಾನಗರಪಾಲಿಕೆಯ ಸ್ಥಾನ ಪಡೆದು ಹೆಚ್ಚಿನ ಅನುದಾನಕ್ಕೆ ಅರ್ಹವಾಗುತ್ತದೆ. ಸುತ್ತಲಿನ ಗ್ರಾಮಗಳೂ ಸೇರಿದಂತೆ ಸಮಗ್ರ ಪ್ರದೇಶದ ಅಭಿವೃದ್ಧಿ ಸಾಧ್ಯವೆಂದು ಸಚಿವ ಜಾರಕಿಹೊಳಿ ಅವರ ದೂರದೃಷ್ಟಿ, ಅಭಿಪ್ರಾಯ.
ಈ ಕುರಿತು ಅವರು ಬೆಳಗಾವಿ ಸುತ್ತಲಿನ ಗ್ರಾಮಗಳಾದ ಹಿಂಡಲಗಾ, ಕಾಕತಿ, ಹಲಗಾ, ಬಸ್ತವಾಡ, ಕಂಗ್ರಾಳಿ, ಮೊದಗಾ, ಸಾಂಬ್ರಾ, ಪೀರನವಾಡಿ, ಮಚ್ಛೆ ಮತ್ತು ದಾಮನೆ ಗ್ರಾಮಗಳನ್ನು ಬೆಳಗಾವಿ ಮಹಾನಗರಪಾಲಿಕೆಗೆ ಸೇರಿಸುವ ಯೋಜನೆ ಹೊಂದಿದ್ದು, ಈ ಕುರಿತು ನಗರಾಭಿವೃದ್ಧಿ ಇಲಾಖೆಯೊಂದಿಗೆ ಚರ್ಚಿಸಿ, ಮಹಾನಗರಪಾಲಿಕೆ ಅಧಿಕಾರಿಗಳಿಗೂ ವರದಿ ಸಲ್ಲಿಸಲು ಸೂಚಿಸಿದ್ದಾರೆ. ಬೆಳಗಾವಿ ಬಿಬಿಎಂಪಿ ಸ್ಥಾನ ಪಡೆದರೆ ಬೆಂಗಳೂರಿಗೆ ದೊರೆಯುವಂತೆ ವಾರ್ಷಿಕ ಸಾವಿರಾರು ಕೋಟಿ ರೂಪಾಯಿ ಅನುದಾನ ಬೆಳಗಾವಿಗೂ ದೊರೆಯುತ್ತದೆ.
ಈ ಕುರಿತು ಸಮದರ್ಶಿಯೊಂದಿಗೆ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಸಂಚಾಲಕ ಅಶೋಕ ಚಂದರಗಿ ಅವರು ಮಾತನಾಡಿದರು. “ಸಚಿವ ಸತೀಶ ಜಾರಕಿಹೊಳಿ ಅವರ ಯೋಜನೆ ಯೋಗ್ಯವಾಗಿದೆ. ಬೆಳಗಾವಿ ಎರಡನೇ ರಾಜ್ಯಧಾನಿ ಎಂದು ಕರೆಸಿಕೊಂಡು, ಅಧಿವೇಶನ ನಡೆಸಲು ಸುವರ್ಣ ವಿಧಾನಸೌಧ ಹೊಂದಿದ್ದರೂ ರಾಜ್ಯದ ಇತರ ನಗರಗಳಿಗಿಂತ ಹಿಂದಿದೆ. ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ ನಗರಗಳು ಬೆಳಗಾವಿಗಿಂತಲೂ ಎಷ್ಟೋ ಅಭಿವೃದ್ಧಿ ಹೊಂದಿವೆ. ಬೆಳಗಾವಿ ಜಿಲ್ಲೆಯ ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆ ಇದಕ್ಕೆ ಕಾರಣ” ಎಂದು ಚಂದರಗಿ ಹೇಳಿದರು.
ಸಚಿವ ಜಾರಕಿಹೊಳಿಯವರ ಈ ಯೋಜನೆಯಲ್ಲಿ ಯಾವುದೇ ರಾಜಕೀಯವಿರಲಾರದು, ಯಾಕೆಂದರೆ ಹೊಸದಾಗಿ ಸೇರಿಸಲ್ಪಡುವ ಪ್ರದೇಶಗಳಲ್ಲಿ ಕನ್ನಡಿಗರು, ಮರಾಠಿಗರು, ಬಿಜೆಪಿ ಮತ್ತು ಕಾಂಗ್ರೆಸ್ ಬೆಂಬಲಿಗರು ಸಮಸಂಖ್ಯೆಯಲ್ಲಿದ್ದಾರೆ ಎಂದು ಚಂದರಗಿ ತಿಳಿಸಿದರು.
ಬೆಳಗಾವಿ ಚೇಂಬರ್ ಆಫ್ ಕಾಮರ್ಸ ಅಂಡ್ ಇಂಡಸ್ಟ್ರೀಸನ ಮಾಜಿ ಅಧ್ಯಕ್ಷ ವಿಕಾಸ ಕಲಘಟಗಿ ಅವರು ಪ್ರತಿಕ್ರಯಿಸಿ, ಇಲ್ಲಿನವರ ರಾಜಕೀಯ ಇಚ್ಛಾಶಕ್ತಿಯ ಕೊರತೆ, ಕನ್ನಡ-ಮರಾಠಿ ಗಲಾಟೆ, ಗಡಿ ವಿವಾದ ಮುಂತಾದ ಕಾರಣಗಳಿಂದ ಬೆಳಗಾವಿ ಅಭಿವೃದ್ಧಿ ಹೊಂದಿಲ್ಲ. ಈ ಜಿಲ್ಲೆ ಔದ್ಯೋಗಿಕವಾಗಿ ಪೂರಕ ವಾತಾವರಣ ಹೊಂದಿದೆ. ನೆರೆಯ ಗೋವಾ ಮತ್ತು ಮಹಾರಾಷ್ಟ್ರಗಳಿಗೆ ಕೊಂಡಿಯಾಗಿದೆ. ಇಲ್ಲಿನ ಕಾಸ್ಟಿಂಗ್ ಉತ್ಪಾದನೆಗೆ ಅಂತರಾಷ್ಟ್ರೀಯ ಬೇಡಿಕೆಯಿದೆ. ಆದರೆ ಮೇಲಿನ ಕಾರಣಗಳಿಂದ ಉದ್ದಿಮೆಗಳು ನೆರೆ ರಾಜ್ಯಗಳಿಗೆ ತೆರಳುತ್ತಿವೆ. ಹೂಡಿಕೆದಾರರೂ ಮುಂದೆ ಬರುತ್ತಿಲ್ಲ ಎಂದು ಹೇಳಿದ್ದಾರೆ.
ಸಚಿವ ಜಾರಕಿಹೊಳಿಯವರ ಯೋಜನೆ ಸ್ತುತ್ಯವಾಗಿದೆ, ಅದು ಸಾಕಾರಗೊಂಡರೆ ಇಡೀ ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಲಾಭ ದೊರೆಯಲಿದೆ, ಬೆಳಗಾವಿಯ ಚಿತ್ರಣವೇ ಬದಲಾಗಲಿದೆ ಎಂದು ಕಲಘಟಗಿ ಅಭಿಪ್ರಾಯ ಪಟ್ಟರು.