ಬೆಳಗಾವಿ : ಎರಡನೇ ಪಟ್ಟಿ ಬಿಡುಗಡೆಗೊಳಿಸಿರುವ
ಕಾಂಗ್ರೆಸ್ ಪಕ್ಷವು ಮೂರನೇ ಪಟ್ಟಿಯನ್ನು ಗುರುವಾರ ಸಾಯಂಕಾಲ ಅಥವಾ ಶುಕ್ರವಾರ ಬೆಳಿಗ್ಗೆ ಬಿಡುಗಡೆಗೊಳಿಸುವ ಸಾಧ್ಯತೆಯಿದೆ. ರಾಜಕೀಯ ತಂತ್ರಗಾರಿಕೆಯನ್ವಯ ಬೆಳಗಾವಿ ಉತ್ತರ ಮತ್ತು ಅಥಣಿ ಕ್ಷೇತ್ರಗಳನ್ನು ಮರಳಿ ಪಡೆಯುವ ಯತ್ನವಾಗಿ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದ ನಂತರ ನಿರ್ಧರಿಸುವ ಸಾಧ್ಯತೆಯಿದೆ.
ಮೊದಲನೇ ಪಟ್ಟಿಯಲ್ಲಿ ಜಿಲ್ಲೆಯ 9 ಅಭ್ಯರ್ಥಿಗಳಿಗೆ ಟಿಕೆಟ್ ಘೋಷಣೆ ಮಾಡಿದ್ದ ಕಾಂಗ್ರೆಸ್ ಗುರುವಾರ ಮುಂಜಾನೆ ನಾಲ್ಕು ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿ, ಐದು ಉಮೇದುವಾರರ ಮೂರನೇ ಪಟ್ಟಿಯನ್ನು ಸಂಜೆ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಚುನಾವಣೆ ತಂತ್ರಗಾರಿಕೆಯಂತೆ ಬೆಳಗಾವಿ ಉತ್ತರ ಮತ್ತು ಅಥಣಿ ಕ್ಷೇತ್ರಗಳ ಅಭ್ಯರ್ಥಿಗಳನ್ನು ಬಿಜೆಪಿ ಪಟ್ಟಿ ಬಿಡುಗಡೆಯಾದ ನಂತರ ಬಿಡುಗಡೆ ಮಾಡುವ ಸಾಧ್ಯತೆಯಿದೆ.
ಬೆಳಗಾವಿ ಉತ್ತರ, ದಕ್ಷಿಣ, ಅಥಣಿ, ರಾಯಬಾಗ ಮತ್ತು ಅರಭಾವಿ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಬೇಕಿದೆ.
ಉತ್ತರದಿಂದ ಬಿಜೆಪಿ ಶಾಸಕ ಅನಿಲ್ ಬೆನಕೆಯವರನ್ನು ಕಣಕ್ಕಿಳಿಸಿದರೆ, ಮಾಜಿ ಶಾಸಕ ಫೀರೋಜ್ ಸೇಠ ಅಥವಾ ಅವರ ಸಹೋದರ ಆಸೀಫ (ರಾಜು) ಸೇಠ ಇಲ್ಲವೇ ಮಾಜಿ ನಗರ ಸೇವಕ ಅಝೀಮ ಪಟವೆಗಾರ ಇವರನ್ನು, ಲಿಂಗಾಯತ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಕೆಎಲ್ಈ ಆಡಳಿತ ಮಂಡಳಿಯ ಸದಸ್ಯ, ಬೈಲಹೊಂಗಲನ ಡಾ. ಸಾಧುನವರ ಕುಟುಂಬದ ಒಬ್ಬರನ್ನು ಕಣಕ್ಕಿಲಿಸುವ ಸಾಧ್ಯತೆಯಿದೆ.
ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯಲ್ಲಿ ಹೈಕಮಾಂಡ್ ಗೆ ಕಗ್ಗಂಟಾಗಿದ್ದು ಆಸೀಫ ಸೇಠ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಆಪ್ತರಲ್ಲಿ ಗುರುತಿಸಿಕೊಂಡಿರುವ ಪಾಲಿಕೆಯ ಕಾಂಗ್ರೆಸ್ ಸದಸ್ಯ ಅಜೀಮ ಪಟವೇಗಾರ ನಡುವೆ ತೀವ್ರ ಜಿದ್ದಾಜಿದ್ದಿ ನಡೆದಿರುವ ಹಿನ್ನೆಲೆಯಲ್ಲಿ ಟಿಕೆಟ್ ಘೋಷಣೆ ಮಾಡುವಲ್ಲಿ ಕೊಂಚ ವಿಳಂಬವಾಗಿದೆ.
ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ನೇಕಾರ ಸಮಾಜದ ಪ್ರಭಾವತಿ ಚಾವಡಿ, ಲಿಂಗಾಯತ ಸಮಯದಾಯದ ಪ್ರಭು ಯತ್ನಟ್ಟಿ, ಮರಾಠಾ ಸಮಾಜದ ರಮೇಶ ಗೋರಲ್ ನಡುವೆ ಟಿಕೆಟ್ ಗಾಗಿ ಪೈಪೋಟಿ ನಡೆದಿದೆ. ಹೀಗಾಗಿ ಇದನ್ನು ಮೂರನೇ ಪಟ್ಟಿಯಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆ ಇದೆ.
ರಾಯಬಾಗ ಮತಕ್ಷೇತ್ರದ ಕಾಂಗ್ರೆಸ್ ಆಕಾಂಕ್ಷಿಗಳ ಪೈಕಿ ಸತೀಶ ಜಾರಕಿಹೊಳಿ ಆಪ್ತ ಮಹಾವೀರ ಮೋಹಿತೆ ಸೇರಿದಂತೆ ಇಬ್ಬರ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದೆ.
ಬಿಜೆಪಿಯ ಟಿಕೆಟ್ ದೊರೆಯದಿದ್ದರೆ ಲಕ್ಷಣ ಸವದಿ ಕಾಂಗ್ರೆಸ್ ಸೇರಿ ತಮ್ಮ ಕ್ಷೇತ್ರ ಅಥಣಿಯಿಂದ ಸ್ಪರ್ಧಿಸುತ್ತಾರೆ ಎನ್ನುವ “ಗಾಳಿ ಸುದ್ದಿ” ಹರಡಿದೆ. ಇದು ಸಾಧ್ಯವಿಲ್ಲವೆಂದು ಹೇಳಲಾಗುತ್ತಿದೆಯಾದರೂ ಇದು ರಾಜಕೀಯ ಕ್ಷೇತ್ರವಾಗಿರುವದರಿಂದ ಇಲ್ಲಿ ಎಲ್ಲವೂ ಸಾಧ್ಯವೇ. ಹಾಗಾಗಿ ಕಾಂಗ್ರೆಸ್ ಅಥಣಿ ಕ್ಷೇತ್ರದಲ್ಲೂ “ಕಾಯ್ದು ನೋಡಿ” ತತ್ವ ಪಾಲಿಸಲಿದೆ. ಇಲ್ಲಿಂದ ಗಜಾನನ ಮಂಗಸೂಳಿಯ ಸ್ಪರ್ಧೆ ಬಹುತೇಕ ಖಚಿತವಾಗಿದೆ.
ಅರಭಾವಿ ಮತಕ್ಷೇತ್ರದಿಂದ ಭೀಮಪ್ಪ ಗಡಾದ, ಅರವಿಂದ ದಳವಾಯಿ ಮತ್ತು ಲಕ್ಕಣ್ಣ ಸವಸುದ್ದಿ ನಡುವೆ ಸ್ಪರ್ಧೆಯಿದೆ.