(ಸಮದರ್ಶಿ ವಿಶೇಷ)
ಬೆಳಗಾವಿ, ೧೭- ಬೆಳಗಾವಿ ಮಹಾನಗರಪಾಲಿಕೆ ಮತ್ತು ಪ್ರಾದೇಶಿಕ ಆಯುಕ್ತ ಕಚೇರಿ ಎದುರು ಸ್ಥಾಪಿಸಲಾಗಿರುವ ಕನ್ನಡ ಧ್ವಜಗಳ ತೆರವಿನ ಕಾರ್ಯಕ್ಕೆ ಸರಕಾರ ಚಾಲನೆ ನೀಡಲಿದೆಯೇ ಎಂಬ ಪ್ರಶ್ನೆ ಎದುರಾಗಿದೆ.
ಬೆಳಗಾವಿಯ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್ ) ಯ ಯುವಘಟಕ ನೀಡಿದ ದೂರಿನ ಅನ್ವಯ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಮತ್ತು ಬೆಳಗಾವಿ ಪೊಲೀಸ್ ಆಯುಕ್ತ ಸಿದ್ದರಾಮಪ್ಪ ಅವರಿಗೆ ಕಳೆದ ಜುಲೈ 27 ರಂದು ಪತ್ರ ಬರೆದು ಧ್ವಜಗಳ ತೆರವಿಗೆ ತೆಗೆದುಕೊಂಡ ಕ್ರಮಗಳ ಕುರಿತು ದೂರುದಾರರಿಗೆ ಮಾಹಿತಿ ನೀಡುವಂತೆ ಸೂಚಿಸಿದ್ದಾರೆಂದು ತಿಳಿದು ಬಂದಿದೆ.
ಕರ್ನಾಟಕ ಉಚ್ಛ ನ್ಯಾಯಾಲಯ 2012 ರಲ್ಲಿ ನೀಡಿದ ಆದೇಶ ಉಲ್ಲೇಖಿಸಿ ಎಂಇಎಸ್ ಯುವ ಘಟಕದ ಅಧ್ಯಕ್ಷ ಅಂಕುಶ ಕೇಸರಕರ ಜಿಲ್ಲಾಡಳಿತಕ್ಕೆ ದೂರು ನೀಡಿ ಧ್ವಜ ತೆರವುಗೊಳಿಸಬೇಕೆಂದು ಕೋರಿದ್ದರು. ನ್ಯಾಯಾಲಯವು ಸರಕಾರಿ ಕಚೇರಿಗಳ ಎದುರು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಕೆಂಪು–ಹಳದಿ ಬಣ್ಣದ ಧ್ವಜ ಹಾರಿಸಲು ನ್ಯಾಯಾಲಯ ಮಾನ್ಯತೆ ನೀಡಿಲ್ಲ. ಅಲ್ಲದೇ ಸರಕಾರಿ ಕಚೇರಿಗಳ ಎದುರು ಸ್ಥಾಪಿಸಲಾಗಿರುವ ಈ ಧ್ವಜಗಳಿಂದ ಕಚೇರಿ ಕಟ್ಟಡಗಳ ಮೇಲೆ ಹಾರಿಸಲಾಗಿರುವ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದಂತೆ ಆಗುತ್ತದೆ.ಕೆಲವು ಕಡೆ ಈ ಧ್ವಜಗಳಿಂದ ರಾಷ್ಟ್ರಧ್ವಜ ಸರಿಯಾಗಿ ಕಾಣಿಸುವುದಿಲ್ಲ. ಹಾಗಾಗಿ ಈ ಧ್ವಜಗಳನ್ನು ತೆರವುಗೊಳಿಸಬೇಕೆಂದು ತಮ್ಮ ದೂರಿನಲ್ಲಿ ಕೇಸರಕರ ಕೋರಿದ್ದರು.
2000ನೇ ಸಾಲಿನಲ್ಲಿ ಬೆಳಗಾವಿ ನ್ಯಾಯವಾದಿಗಳ ಸಂಘವು ಪ್ರಾದೇಶಿಕ ಆಯುಕ್ತರ ಕಛೇರಿಯ ಎದುರು ಮತ್ತು ಸರ್ವೋದಯ ಸೇವಾ ಸಂಘವು 2020ರಲ್ಲಿ ಮಹಾನಗರಪಾಲಿಕೆ ಎದುರು ಕನ್ನಡ ಧ್ವಜ ಸ್ಥಾಪನೆ ಮಾಡಿವೆ. ಪೊಲೀಸ ಇಲಾಖೆಯ ವಿರೋಧದ ಮಧ್ಯೆಯೂ ಪಾಲಿಕೆ ಎದುರು ಧ್ವಜಸ್ಥಾಪನೆ ಮಾಡಲಾಗಿತ್ತು.
ಪಾಲಿಕೆ ಎದುರು ಸ್ಥಾಪಿಸಲಾಗಿರುವ ಧ್ವಜ ತೆರವುಗೊಳಿಸಲು ಮಾರ್ಚ 8, 2021ರಲ್ಲಿ ಎಂಇಎಸ್ ಪ್ರತಿಭಟನಾ ಮೆರವಣಿಗೆ ನಡೆಸಿತ್ತು. ಆಗ ಪ್ರತಿಭಟನಾ ಮೆರವಣಿಗೆಯಲ್ಲಿದ್ದ ಮಹಿಳೆಯರು ಪಾಲಿಕೆ ಕಟ್ಟಡದ ಮೇಲೆ ಮರಾಠಿ ಧ್ವಜ ಹಾರಿಸಲು ವಿಫಲ ಯತ್ನ ನಡೆಸಿದ್ದರು.
ವಡಗಾವಿಯ ಸರ್ವೋದಯ ಸೇವಾ ಸಂಘದ ಸದಸ್ಯರು ಅಧ್ಯಕ್ಷ ಶ್ರೀನಿವಾಸ ತಾಳೂಕರ ನೇತೃತ್ವದಲ್ಲಿ ಪಾಲಿಕೆ ಎದುರು ರಾತ್ರೋರಾತ್ರಿ ಧ್ವಜದ ಕಟ್ಟೆ ನಿರ್ಮಿಸಿ ಕನ್ನಡ ಧ್ವಜ ಸ್ಥಾಪಿಸಿದ್ದರು. ಆಗ ಪೊಲೀಸರು ಧ್ವಜದ ಕಟ್ಟೆ ಒಡೆದು ಧ್ವಜ ವಶಕ್ಕೆ ಪಡೆದಿದ್ದರು. ಆದರೂ ಧೃತಿಗೆಡೆದ ಸಂಘಟನೆ ಕೆಲವೇ ದಿನಗಳಲ್ಲಿ ಮತ್ತೊಂದು ಧ್ವಜ ಸ್ಥಾಪಿಸಿತ್ತು. ವಿಪರ್ಯಾಸವೆಂದರೆ ಯಾವ ಪೊಲೀಸರು ಧ್ವಜ ಸ್ಥಾಪಿಸಲು ಅನುಮತಿ ನೀಡದೇ ವಿರೋಧಿಸಿದ್ದರೋ ಅದೇ ಪೊಲೀಸರು ಎಂಇಎಸ್ ಯತ್ನದ ನಂತರ ಈಗ ಧ್ವಜ ಕಾಯುತ್ತಿದ್ದಾರೆ!
ಈ ಕುರಿತು ಪ್ರತಿಕ್ರಿಯಿಸಲು ಜಿಲ್ಲಾಧಿಕಾರಿ ನಿತೇಶ ಪಾಟೀಲ ಲಭ್ಯವಾಗಿಲ್ಲ. ಆದರೆ ಮಹಾನಗರಪಾಲಿಕೆ ಆಯುಕ್ತ ಅಶೋಕ ದೂಡಗುಂಟಿ ಅವರು ಸಮದರ್ಶಿಗೆ ಮಾಹಿತಿ ನೀಡಿದ್ದು ಜಿಲ್ಲಾಧಿಕಾರಿಗಳಿಂದ ಬಂದಿದೆ ಎನ್ನಲಾದ ಪತ್ರದ ಕುರಿತು ತಾವು ಇನ್ನೂ ಗಮನಿಸಿಲ್ಲ. ಪರಿಶೀಲಿಸಿದ ನಂತರ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಮಹಾರಾಷ್ಟ್ರ ಏಕೀಕರಣ ಸಮಿತಿಯ ವಕ್ತಾರ ವಿಕಾಸ ಕಲಘಟಗಿ ಪ್ರತಿಕ್ರಯಿಸಿ, ಸರಕಾರ ‘ಕೆಂಪು–ಹಳದಿ‘ ಧ್ವಜಕ್ಕೆ ಮಾನ್ಯತೆ ನೀಡಿಲ್ಲ. ರಾಜ್ಯ ಉಚ್ಛ ನ್ಯಾಯಾಲಯವೂ ಅದನ್ನು ಅಧಿಕೃತವೆಂದು ಪರಿಗಣಿಸಿಲ್ಲ. ಹಾಗಾಗಿ ಸರಕಾರಿ ಕಚೇರಿಗಳ ಮೇಲೆ, ಮುಂದೆ, ಆವರಣದಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಹಾರಿಸುವುದು ಕಾನೂನುಬಾಹಿರ. ಅದಕ್ಕೆ ಸಮಿತಿ ಸರಕಾರಕ್ಕೆ ಅವುಗಳನ್ನು ತೆರವುಗೊಳಿಸಲು ದೂರು ನೀಡಿದೆ. ಸರಕಾರ ಈ ಕುರಿತು ಸಂಬಂಧಿಸಿದ ಇಲಾಖೆಗಳಿಗೆ ಪತ್ರ ಬರೆದಿದ್ದು ಉತ್ತಮ ಬೆಳವಣಿಗೆ ಎಂದು ಅವರು ತಿಳಿಸಿದರು.
ಸಮದರ್ಶಿಯೊಂದಿಗೆ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ ಎ ನಾರಾಯಣಗೌಡ ಅವರು, ಪ್ರತಿ ರಾಜ್ಯಗಳೂ ತಮ್ಮದೇ ಆದ ಧ್ವಜಗಳನ್ನು ಹೊಂದಿವೆ. ಅವುಗಳನ್ನು ತಮ್ಮ ರಾಜ್ಯಗಳಲ್ಲಿ ಹಾರಿಸಲು ಯಾರ ಅನುಮತಿಯೂ ಬೇಕಿಲ್ಲ. “ಕೆಂಪು–ಹಳದಿ” ಧ್ವಜಕ್ಕೆ ರಾಜ್ಯದ ಧ್ವಜವಾಗಿ ಮಾನ್ಯತೆ ದೊರೆಯದಿದ್ದರೂ ರಾಜ್ಯದ ಜನತೆ ಅದನ್ನು ತಮ್ಮದೆಂದು ಒಪ್ಪಿಕೊಂಡಿದ್ದಾರೆ ಎಂದಿದ್ದಾರೆ.
ನಾಡದ್ರೋಹಿಗಳ ಓಲೈಕೆಗೆಂದು ಸರಕಾರ ಬೆಳಗಾವಿಯಲ್ಲಿ ಕನ್ನಡ ಧ್ವಜ ತೆರವಿಗೆ ಯತ್ನಿಸಿದರೆ ರಾಜ್ಯದ ವಾತಾವರಣದಲ್ಲಿ ಆಗುವ ವ್ಯತ್ಯಾಸಕ್ಕೆ ಸರಕಾರವೇ ಹೊಣೆ. ಇದು ಸರಕಾರದ ಮೇಲೂ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದೂ ನಾರಾಯಣಗೌಡ ಎಚ್ಚರಿಸಿದರು.