ಅಯೋಧ್ಯಾ, ೩- : ದೇಶದಲ್ಲಿ ಶಾಂತಿಗಾಗಿ ಭಾರತ ಜೋಡೋ ಯಾತ್ರೆ ಕೈಗೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಅಯೋಧ್ಯೆಯ ರಾಮ ಮಂದಿರದ ಪ್ರಧಾನ ಅರ್ಚಕ ಸತ್ಯೇಂದ್ರ ದಾಸ್ ಅವರು ಮಂಗಳವಾರ ಪತ್ರವೊಂದನ್ನು ಬರೆದು ತಮ್ಮ ಹಾಗೂ ರಾಮನ ಆಶೀರ್ವಾದ ಸದಾ ರಾಹುಲ್ ಅವರೊಂದಿಗೆ ಇರುತ್ತದೆ ಎಂದು ಹಾರೈಸಿದ್ದಾರೆ.
ರಾಹುಲ್ ಅವರ ನೇತೃತ್ವದ ಭಾರತ ಜೋಡೋ ಯಾತ್ರೆ ಮಂಗಳವಾರ ಉತ್ತರ ಪ್ರದೇಶ ತಲುಪಲಿದೆ. ಈ ಹಿನ್ನೆಲೆಯಲ್ಲಿ ಶುಭ ಹಾರೈಸಿ ಸತ್ಯೇಂದ್ರ ದಾಸ್ ಅವರು ಯುವ ಕಾಂಗ್ರೆಸ್ ಮುಖಂಡ ಗೌರವ್ ತಿವಾರಿ ಮೂಲಕ ಹಸ್ತಾಂತರ ಮಾಡಿರುವ ಪತ್ರದಲ್ಲಿ, “ನೀವು ದೇಶಕ್ಕಾಗಿ ಮಾಡುವ ಯಾವುದೇ ಕೆಲಸ ಎಲ್ಲರಿಗೂ ಸಹಕಾರಿ. ನನ್ನ ಆಶೀರ್ವಾದ ನಿಮ್ಮ ಮೇಲೆ ಸದಾ ಇರಲಿದೆ. ಜತೆಗೆ ಶ್ರೀರಾಮನ ಆಶೀರ್ವಾದವೂ ಸದಾ ನಿಮ್ಮೊಂದಿಗೆ ಇರಲಿ” ಎಂದು ಹೇಳಿದ್ದಾರೆ.
ಒಂಭತ್ತು ದಿನಗಳ ವಿರಾಮದ ಬಳಿಕ ಭಾರತ ಜೋಡೋ ಯಾತ್ರೆ ಮಂಗಳವಾರ ದೆಹಲಿ ಕಾಶ್ಮೀರಿ ಗೇಟ್‌ನಲ್ಲಿರುವ ಹನುಮಾನ್ ಮಂದಿರದಿಂದ ಮತ್ತೆ ಆರಂಭವಾಗಿದೆ. ಮಧ್ಯಾಹ್ನದ ವೇಳೆಗೆ ಉತ್ತರಪ್ರದೇಶದ ಗಾಜಿಯಾಬಾದ್ ಪ್ರವೇಶಿಸಿದೆ.
ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಅಖಿಲೇಶ ಯಾದವ, ಬಿಎಸ್‌ಪಿಯ ಮಾಯಾವತಿ ಹಾಗೂ ಆರ್‌ಎಲ್‌ಡಿಯ ಜಯಂತ ಸಿಂಗ್ ಅವರು ಯಾತ್ರೆಯಲ್ಲಿ ಭಾಗವಹಿಸುವುದಿಲ್ಲ ಎಂದು ಈಗಾಗಲೇ ಹೇಳಿದ್ದು ನಿತೀಶ ಕುಮಾರ ಯಾತ್ರೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ.
ಕನ್ಯಾಕುಮಾರಿಯಿಂದ ಆರಂಭವಾದ ಯಾತ್ರೆಯು 108 ದಿನಗಳಲ್ಲಿ ಒಟ್ಟು 3,122 ಕಿಮೀ ಸಂಚರಿಸಿದೆ. ಯಾತ್ರೆಯು ಜನವರಿ 30ರಂದು ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ ಮುಕ್ತಾಯಗೊಳ್ಳಲಿದೆ. 150ನೇ ದಿನ ಹಾಗೂ ಮಹಾತ್ಮ ಗಾಂಧಿ ಅವರು ಹುತಾತ್ಮರಾದ ದಿನದಂದು ಶ್ರೀನಗರದಲ್ಲಿ ರಾಹುಲ್ ಗಾಂಧಿ ತ್ರಿವರ್ಣ ಧ್ವಜವನ್ನು ಹಾರಿಸಲಿದ್ದಾರೆ.