ದಾವಣಗೆರೆ, ೮- 79 ವರ್ಷದ ವೃದ್ಧನನ್ನು ತನ್ನ ಮನೆಯಲ್ಲಿ ಬೆತ್ತಲೆಗೊಳಿಸಿ ಮಹಿಳೆಯೊಬ್ಬಳು ಫೋಟೋ ಹಾಗೂ ವಿಡಿಯೋ ತೆಗೆದ ಬಳಿಕ ಹಣಕ್ಕಾಗಿ ಬ್ಲಾಕಮೇಲ್ ಮಾಡಲು ಹೋಗಿ ಸಿಕ್ಕಿಬಿದ್ದಿದ್ದಾಳೆ. ಈ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ಪ್ರಕರಣದ ವಿವರ:
ಚಿದಾನಂದಪ್ಪ ಎಂಬ ವೃದ್ಧ ದಾವಣಗೆರೆಯ ಶಿವಕುಮಾರ ಸ್ವಾಮಿ ಬಡಾವಣೆಯಲ್ಲಿ ವಾಸವಾಗಿದ್ದು, ಇವರಿಗೆ ಸರಸ್ವತಿ ನಗರದ 32 ವರ್ಷದ ಯಶೋಧ ಎಂಬಾಕೆಯ ಪರಿಚಯವಾಗಿದೆ. ಹೀಗಾಗಿ ಆಕೆಯ ಮನೆಗೆ ಹೋಗಿ ಬರುವುದನ್ನು ಚಿದಾನಂದಪ್ಪ ಮಾಡುತ್ತಿದ್ದರು.
ಈ ಸ್ನೇಹವನ್ನು ಬಳಸಿಕೊಂಡ ಯಶೋಧ ತನಗೆ ಕಷ್ಟ ಇದೆ ಎಂದು ಆಗಾಗ ಹಣ ಪಡೆಯುತ್ತಿದ್ದು, ಈ ಮೊತ್ತ 86,000 ರೂಪಾಯಿ ತಲುಪಿತ್ತು. ಹೀಗಾಗಿ ಚಿದಾನಂದಪ್ಪ ತಮ್ಮ ಹಣವನ್ನು ವಾಪಸ್ ನೀಡುವಂತೆ ಆಕೆಗೆ ಕೇಳಿದ್ದರು. ಈಗ ಕೊಡುತ್ತೇನೆ ಆಗ ಕೊಡುತ್ತೇನೆ ಎಂದು ಆಕೆ ಕಾಲ ತಳ್ಳುತ್ತಲೇ ಬಂದಿದ್ದಳು.
ಇತ್ತೀಚೆಗೆ ಚಿದಾನಂದಪ್ಪ ತನ್ನ ಮನೆ ಮುಂದೆ ಹಾದು ಹೋಗುವಾಗ ಅವರನ್ನು ಕರೆದ ಯಶೋಧ ಕುಡಿಯಲು ಜ್ಯೂಸ್ ನೀಡಿದ್ದಾಳೆ. ಇದನ್ನು ಕುಡಿದ ಕೆಲ ಹೊತ್ತಿನಲ್ಲಿಯೇ ಚಿದಾನಂದಪ್ಪ ಪ್ರಜ್ಞೆ ತಪ್ಪಿದ್ದು ಎಚ್ಚರವಾದಾಗ ಮೈಮೇಲೆ ಒಂದಿಂಚು ಬಟ್ಟೆ ಇರಲಿಲ್ಲ ಎಂದು ಹೇಳಲಾಗಿದೆ. ಇದರಿಂದ ಗಾಬರಿಗೊಂಡ ಅವರು ಬಟ್ಟೆ ಹಾಕಿಕೊಂಡು ತಮ್ಮ ಮನೆಗೆ ತೆರಳಿದ್ದಾರೆ.
ಈ ಘಟನೆ ನಡೆದು ಮೂರ್ನಾಲ್ಕು ದಿನಗಳಾದ ಬಳಿಕ ಚಿದಾನಂದಪ್ಪ ತಮ್ಮ ಹಣ ನೀಡುವಂತೆ ಮತ್ತೆ ಕೇಳಿದ್ದು, ಆಗ ನೀವು ನನ್ನೊಂದಿಗೆ ಮಲಗಿದ್ದೀರಿ ಇದರ ವಿಡಿಯೋ, ಫೋಟೋ ಇದೆ ಎಂದು ಹೇಳಿದ ಯಶೋಧ ಇದನ್ನು ಬಹಿರಂಗಪಡಿಸಬಾರದೆಂದರೆ 15 ಲಕ್ಷ ರೂಪಾಯಿ ನೀಡಿ ಎಂಬ ಬೇಡಿಕೆ ಇಟ್ಟಿದ್ದಾಳೆ.
ಕೊನೆಗೆ ಅನ್ಯಮಾರ್ಗವಿಲ್ಲದೆ ಚಿದಾನಂದಪ್ಪ ತಮ್ಮ ಮಕ್ಕಳ ಬಳಿ ನಡೆದ ವಿಷಯವನ್ನು ತಿಳಿಸಿದ್ದು, ಕೆಟಿಜೆ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಇದೀಗ ಯಶೋಧಾಳನ್ನು ಬಂಧಿಸಿದ್ದಾರೆ.