ಬೆಳಗಾವಿ : ಬೆಳಗಾವಿ ತಾಲೂಕಿನ ವಂಟಮೂರಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓಡಿ ಹೋಗಿರುವ ಯುವಕ-ಯುವತಿಯರ ಪತ್ತೆಗೆ ಅವರ ಫೋನ್ ಟ್ರ್ಯಾಕಿಂಗ್ ಮಾಡಲಾಗುತ್ತಿದೆ. ಅವರು ಸಿಕ್ಕಿದ ಬಳಿಕ ಕಾನೂನಿನಡಿ ಏನು ಕ್ರಮ ಕೈಗೊಳ್ಳಬೇಕೋ ತೆಗೆದುಕೊಳ್ಳುತ್ತೇವೆ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದ್ದಾರೆ.
ಸೋಮವಾರ ಸುವರ್ಣಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಏಳು ಜನರನ್ನು ಬಂಧಿಸಲಾಗಿದೆ. ಘಟನಾ ಸ್ಥಳಕ್ಕೆ ಮತ್ತು ಮಹಿಳೆ ದಾಖಲಾಗಿರುವ ಆಸ್ಪತ್ರೆಗೆ ಭೇಟಿ ನೀಡುವುದಾಗಿ ತಿಳಿಸಿದರು. ವಶಕ್ಕೆ ಪಡೆದವರನ್ನು ನ್ಯಾಯಾಲಯಕ್ಕೆ ಇಂದೇ ಹಾಜರು ಪಡಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ಹೇಳಿದರು.
“24 ವರ್ಷದ ಅಶೋಕ ನಾಯಕ ಎಂಬ ಯುವಕ ಮತ್ತು ಪ್ರಿಯಾಂಕಾ ಎಂಬ ಯುವತಿ ಪ್ರೀತಿಸುತ್ತಿದ್ದರು. ಅವರಿಬ್ಬರೂ ಸೋಮವಾರ ಬೆಳಗಿನ ಜಾವ ಓಡಿ ಹೋಗಿದ್ದಾರೆ. ಓಡಿ ಹೋದ ಮೇಲೆ ಹುಡುಗಿ ಕಡೆಯವರು ಹುಡುಗನ ಮನೆಗೆ ಹೋಗಿ ಅವನ ತಾಯಿಯನ್ನು ಹೊರಗೆಳೆದು ಎಳೆತಂದು ವಿವಸ್ತ್ರ ಮಾಡಿ ಕಂಬಕ್ಕೆ ಕಟ್ಟಿ ಹಾಕಿದ್ದಾರೆ. ಈ ಸುದ್ದಿ ಗೊತ್ತಾದ ಕೂಡಲೇ ಸಬ್ ಇನ್ಸಪೆಕ್ಟರ್ ಹೋಗಿ ಆ ಮಹಿಳೆಗೆ ಬಟ್ಟೆ ಕೊಟ್ಟು ಆಸ್ಪತ್ರೆಗೆ ಸೇರಿಸಿದ್ದಾರೆ” ಎಂದು ಗೃಹ ಸಚಿವರು ತಿಳಿಸಿದರು.