ಬೆಳಗಾವಿ : ಚುನಾವಣೆಯಲ್ಲಿ ಘೋಷಿಸಿದ್ದ ಐದು ಗ್ಯಾರಂಟಿಗಳಲ್ಲಿ ಒಂದಾಗಿದ್ದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಕುರಿತು ಸರಕಾರ ಮಾಹಿತಿ ನೀಡಿದ್ದು ಕರ್ನಾಟಕದ ಮಹಿಳೆಯರು ರಾಜ್ಯದ ಕೆಂಪು ಬಸ್ ಗಳಲ್ಲಿ ಉಚಿತ ಪ್ರಯಾಣ ಮಾಡಬಹುದಾಗಿದೆ ಎಂದು ಹೇಳಿದೆ.
ಈ ಕುರಿತು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ಮಂಗಳವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ರಾಜ್ಯದ ಕೆಂಪು ಬಣ್ಣದ ಬಸ್ ಗಳಲ್ಲಿ ಹೊರ ರಾಜ್ಯಗಳೂ ಸೇರಿದಂತೆ ಹೋಗುವ ಪ್ರತಿ ಸ್ಥಳಕ್ಕೂ ಮಹಿಳೆಯರು ಉಚಿತ ಪ್ರಯಾಣಿಸಬಹುದಾಗಿದೆ. ಇದು ರಾಜ್ಯದ ಮಹಿಳೆಯರಿಗೆ ಮಾತ್ರವಾಗಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಘೋಷಿಸಿದ್ದ ಐದೂ ಗ್ಯಾರಂಟಿಗಳನ್ನು ಶೀಘ್ರ ಜಾರಿಗೆ ತರಲಾಗುವುದು. ಇವುಗಳಿಗೆ ಅವಶ್ಯವಾದ ಹಣಕಾಸನ್ನು ವಿವಿಧ ಮೂಲಗಳಿಂದ ಹೊಂದಿಸಲಾಗುವದು ಎಂದು ತಿಳಿಸಿದರು.
ಮನೆಯ ಯಜಮಾನಿಗೆ ಪ್ರತಿ ತಿಂಗಳು 2,000 ರೂಪಾಯಿ ನೀಡಿಕೆ ಕುರಿತು ಮಾಹಿತಿ ನೀಡಿದ ಅವರು, ಈ ವಿಷಯಕ್ಕೆ ಸಂಬಂಧಿಸಿದಂತೆ ‘ಅತ್ತೆ-ಸೊಸೆ’ ಕಲಹ ತಪ್ಪಿಸಲು ಮನೆಯ ಹಿರಿಯ ಮಹಿಳೆಯ ಖಾತೆಗೆ ಹಣ ಹಾಕಲಾಗುವುದು ಎಂದು ತಿಳಿಸಿದರು.
ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಭ್ರಷ್ಟಾಚಾರದ ಕುರಿತು ದೂರುಗಳಿವೆ, ಈ ಕುರಿತೂ ತನಿಖೆ ನಡೆಸಲಾಗುವದು ಎಂದು ತಿಳಿಸಿದರು. ಅಲ್ಲದೇ ಬಿಜೆಪಿ ಸರಕಾರದ ಸಮಯದಲ್ಲಿ ನಡೆದ ಎಲ್ಲ ಹಗರಣಗಳ ಕುರಿತೂ ತನಿಖೆ ನಡೆಸಲಾಗುವುದು ಎಂದು ತಿಳಿಸಿದರು.
1 ಕೋಟಿ ರೂಪಾಯಿ ಮೌಲ್ಯದ ಆಸ್ತಿ 20 ಲಕ್ಷಕ್ಕೆ
********************************************
ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ (ಬುಡಾ) ದಲ್ಲಿ ತುಂಬಾ ಅವ್ಯವಹಾರ ನಡೆದಿದ್ದು ಒಂದು ಕೋಟಿ ರೂಪಾಯಿ ಮೌಲ್ಯದ ಖಾಲಿ ಜಾಗೆಯನ್ನು 20-25 ಲಕ್ಷ ರೂಪಾಯಿಗಳಿಗೆ ನೀಡಲಾಗಿದೆ. ಪಕ್ಕದ ಖಾಲಿ ನಿವೇಶನವನ್ನು ಒಂದು ಕೋಟಿ ರೂಪಾಯಿಗೆ ಓರ್ವ ಖರೀದಿಸಿದರೆ, ಅದರ ಪಕ್ಕದ ನಿವೇಶನವನ್ನು ಬುಡಾ 20-25 ಲಕ್ಷಕ್ಕೆ ಮಾರಾಟ ಮಾಡಿದೆ. ಈ ಪ್ರಕಾರದ ಅನೇಕ ಅವ್ಯವಹಾರಗಳು ನಡೆದಿವೆ. ಅವುಗಳನ್ನೆಲ್ಲ ಸಿಓಡಿ ಅಥವಾ ಸಿಆಯ್ ಡಿ ತನಿಖೆಗೊಳಿಸಲಾಗುವದು ಎಂದು ಜಾರಕಿಹೊಳಿ ತಿಳಿಸಿದರು.
ಪಠ್ಯದಿಂದ ‘ಕೇಸರಿ-ಸುಳ್ಳು’ ಹೊರಕ್ಕೆ
*******************************
ಪಠ್ಯಪುಸ್ತಕಗಳ ಪರಿಷ್ಕರಣೆ ಕುರಿತು ಮಾತನಾಡಿದ ಅವರು, ಹಿಂದಿನ ಬಿಜೆಪಿ ಸರಕಾರ ಶಿಕ್ಷಣವನ್ನು ಕೇಸರಿಕರಣಗೊಳಿಸುವ ಉದ್ದೇಶದಿಂದ ಸುಳ್ಳು ಮತ್ತು ಕಾಲ್ಪನಿಕ ವಿಷಯಗಳನ್ನು ಪಠ್ಯದಲ್ಲಿ ಸೇರಿಸಿದೆ. ಮಕ್ಕಳು ಸತ್ಯವನ್ನು ತಿಳಿದುಕೊಳ್ಳಬೇಕೆಂಬ ಉದ್ದೇಶದಿಂದ ಕಾಂಗ್ರೆಸ್ ಸರಕಾರ ಹಿಂದಿನ ಪಠ್ಯ ಪರಿಷ್ಕರಣೆ ಮಾಡಲಿದೆ. ಶಿಕ್ಷಣ ತಜ್ಞರು ಈ ಬಗ್ಗೆ ಈಗಾಗಲೇ ಕಾರ್ಯ ನಿರತರಾಗಿದ್ದಾರೆ ಎಂದರು.
ಬೆಳಗಾವಿಯಲ್ಲಿ ಸ್ಥಾಪಿಸಿದ ಖಾಸಗಿ ಎಪಿಎಂಸಿಯಿಂದ ಸರಕಾರಿ ಎಪಿಎಂಸಿಗೆ ಆಗಿರುವ ಹಾನಿ ತಪ್ಪಿಸಲು ಮುತುವರ್ಜಿ ವಹಿಸಲಾಗುವುದು ಎಂದು ತಿಳಿಸಿದರು.
ಬೆಳಗಾವಿ ಜಿಲ್ಲೆ ವಿಭಜನೆ ಸೂಕ್ತ
****************************
ಅತ್ಯಂತ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯನ್ನು ಆಡಳಿತಾತ್ಮಕ ಉದ್ದೇಶದಿಂದ ವಿಂಗಡಿಸುವದು ಸೂಕ್ತವೆಂದು ಜಾರಕಿಹೊಳಿ ಹೇಳಿದರು. ಗೋಕಾಕ, ಚಿಕ್ಕೋಡಿಗಳನ್ನು ಹೊಸ ಜಿಲ್ಲೆ ಮಾಡಿದರೆ ಸೂಕ್ತ. ಈ ವಿಷಯದ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದೂ ಅವರು ತಿಳಿಸಿದರು.
ಇದಕ್ಕೂ ಮೊದಲು ಜಿಲ್ಲೆಯ ಸರ್ವ ಇಲಾಖೆಗಳ ಸಭೆ ನಡೆಸಿ ಮಾಹಿತಿ ಪಡೆದ ಜಾರಕಿಹೊಳಿ, ಬುಧವಾರದಿಂದ ಹೊಸ ಶೈಕ್ಷಣಿಕ ವರುಷ ಆರಂಭವಾಗಲಿದು ಶಾಲೆಗಳು ಪುನಃ ತೆರೆಯಲಿವೆ. ಮಕ್ಕಳಿಗೆ ಪಠ್ಯ, ಸಮವಸ್ತ್ರ, ಮಧ್ಯಾಹ್ನದ ಬಿಸಿಯುಟ, ಶಿಕ್ಷಕರ ಕೊರತೆ ಸೇರಿದಂತೆ ಯಾವುದೇ ತೊಂದರೆಯಾಗದಂತೆ ವ್ಯವಸ್ಥೆ ಮಾಡಬೇಕು. ಅಪಾಯಕಾರಿ, ಶಿಥಿಲಾವಸ್ಥೆಯಲ್ಲಿರುವ ಶಾಲೆ, ಕೊಠಡಿಗಳಲ್ಲಿ ತರಗತಿ ತೆಗೆದುಕೊಳ್ಳದಿರುವುದು ಸೇರಿದಂತೆ ಅನೇಕ ವಿಷಯಗಳ ಕುರಿತು ಅಧಿಕಾರಿಗಳಿಗೆ ಕಟ್ಟಪ್ಪಣೆ ನೀಡಲಾಗಿದೆ. ಅಪಾಯಕಾರಿ, ಶೀತಲಾವಸ್ತೆಯಲ್ಲಿರುವ ಶಾಲೆ, ಕೊಠಡಿಗಳನ್ನು ತೆರವುಗೊಳಿಸಿ ನೂತನ ಕಟ್ಟಡ ನಿರ್ಮಿಸಲಾಗುವುದು ಎಂದರು.
ಮಳೆಗಾಲ ಆರಂಭವಾಗಲಿದ್ದು ಕೃಷಿ ಚಟುವಟಿಕೆ, ಬಿತ್ತನೆ, ಪ್ರಾರಂಭವಾಗಲಿದೆ. ಯಾವ ಕಾರಣಕ್ಕೂ ಕೃಷಿಕರಿಗೆ ತೊಂದರೆವುಂಟಾಗದಂತೆ ನೋಡಿಕೊಳ್ಳಬೇಕು. ಗುಣಮಟ್ಟದ ಬಿತ್ತನೆ ಬೀಜ, ಸೂಕ್ತ ರಾಸಗೊಬ್ಬರ ವಿತರಿಸಬೇಕು, ಯಾವುದೂ ಕೊರತೆಯಾಗಬಾರದು ಎಂದು ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.